ಕುತ್ತಾರು : ಉಳ್ಳಾಲದ ‘ಮಂತ್ರ ನಾಟ್ಯಕಲಾ ಗುರುಕುಲ’ದ 12ನೇ ವರ್ಷದ ಗುರುಕುಲ ಉತ್ಸವದಲ್ಲಿ “ಯಕ್ಷ ಮಂತ್ರ್ಯಕ” ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಜನವರಿ 2025 ರಂದು ಶ್ರೀ ರಾಜ ರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ “ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹೊಣೆಗಾರಿಕೆ ಉಳ್ಳವನೇ ನಿಜವಾದ ಗುರು. ಭರತನಾಟ್ಯ, ಯಕ್ಷಗಾನದಂತಹ ಕಲೆಗಳು ಗುರು ಪರಂಪರೆಯಿಂದ ಬಂದಂತವು, ಸ್ವಸ್ಥ ಸಮಾಜದ ನಿರ್ಮಾಣ ಗುರುವಿನಿಂದಲೇ ಸಾಧ್ಯ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಗಣೇಶ್ ಶೆಣೈ ಮಾತನಾಡಿ “ಮಂತ್ರ ನಾಟ್ಯಕಲಾ ಗುರುಕುಲವು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ” ಎಂದರು.
ಕುತ್ತಾರು ಶ್ರೀ ರಾಜ ರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಶ್ರೀ ರಾಜೇಶ್ ಅತ್ತಾವರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರ ಇದರ ಮಾಜಿ ಮುಕ್ತೇಸರರಾದ ಶ್ರೀ ಪವಿತ್ರ ಕುಮಾರ್ ಗಟ್ಟಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ.) ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿಯಾದ ತ್ಯಾಗಮ್ ಹರೇಕಳ, ಸರ್ವ ಕಾಲೇಜು ವಿದ್ಯಾರ್ಥಿ ಸಂಘ (ರಿ.) ಇದರ ಮಾಜಿ ಅಧ್ಯಕ್ಷರಾದ ಶ್ರೀ ಅಮಿತ್ ರಾಜ್ ಬೇಕಲ ಬಬ್ಬುಕಟ್ಟೆ, ಕಲಾ ಪೋಷಕರಾದ ಶ್ರೀ ನರೇಶ್ ಪಂಡಿತ್ ಹೌಸ್, ಮಂತ್ರ ನಾಟ್ಯಕಲಾ ಗುರುಕುಲದ ಗೌರವಾಧ್ಯಕ್ಷೆಯಾದ ಶ್ರೀಮತಿ ಶಕೀಲಾ ಜನಾರ್ದನ, ಟ್ರಸ್ಟಿಗಳು ಶ್ರೀಮತಿ ಶೈನಾ ಶ್ರಾವಣ್ ಹಾಗೂ ಬಬಿತಾ ಕಿರಣ್ ಉಪಸ್ಥಿತರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಅಗಲಿದ ಶಿಷ್ಯೆ ಶೃತಿಯ ನೆನಪಿನಲ್ಲಿ ‘ಶೃತಿ ಸ್ಮೃತಿ’ ಎಂಬ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ನಡೆದ ಈ ಕಾರ್ಯಕ್ರಮದಲ್ಲಿ ‘ದ್ವಾದಶ’ ತಂಡಗಳ ನೃತ್ಯ ಕಾರ್ಯಕ್ರಮ ನೆರವೇರಿತು. ಗುರುಕುಲದ ಅಧ್ಯಕ್ಷರು ಶ್ರಾವಣ್ ಉಳ್ಳಾಲ್ ಸ್ವಾಗತಿಸಿ, ಕಾರ್ಯದರ್ಶಿಯಾದ ಕಿರಣ್ ಉಳ್ಳಾಲ್ ವಂದಿಸಿದರು.