ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಮತ್ತು ಸಂತ ಮದರ್ ತೆರೆಸಾ ವಿಚಾರ ವೇದಿಕೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕೃತಿ ಲೋಕಾರ್ಪಣೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 02 ಫೆಬ್ರವರಿ 2025ರಂದು ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ಸಾಹಿತ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ
ಈ ಕಾರ್ಯಕ್ರಮದಲ್ಲಿ ಲೇಖಕಿಯರಾದ ಬಿ.ಎಂ. ರೋಹಿಣಿ ಮತ್ತು ಮೋಲಿ ಮೀರಾಂದ ಇವರು ರಚಿಸಿರುವ ‘ಧರ್ಮ ಭಗಿನಿಯರು’ ಕೃತಿ ಲೋಕಾರ್ಪಣೆಗೊಳ್ಳಲಿದೆ. ‘ಮಹಿಳೆ ಮತ್ತು ಸನ್ಯಾಸ’ ಎಂಬ ವಿಷಯದ ಬಗ್ಗೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಸಾರನಾಥ ಬೌದ್ಧ ವಿಹಾರದ ಮಾತಾಜಿ ಬಿಕ್ಕುಣಿ ಗೌತಮಿ, ಶ್ರವಣಬೆಳಗೊಳದ ಪ್ರಾಕೃತ ಭಾಷಾ ವಿದ್ವಾಂಸರಾದ ಡಾ. ಕುಸುಮಾ ಸಿ.ಪಿ., ಮಂಗಳೂರಿನ ಬೆಥನಿ ಕನ್ಯಾಮಠದ ಭಗಿನಿ ಅನ್ನಾಮರಿಯಾ ಮತ್ತು ಮಂಗಳೂರಿನ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಯೋಜಕರಾದ ಭಗಿನಿ ವಿಶ್ವೇಶ್ವರಿ ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ.