ಉಡುಪಿ : ರಾಗ ಧನ ಉಡುಪಿ (ರಿ) ಇವರು ನಡೆಸುವ 37ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿಗಳ ಸಂಗೀತೋತ್ಸವವನ್ನು ದಿನಾಂಕ 07, 08 ಮತ್ತು 09 ಫೆಬ್ರವರಿ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.
ದಿನಾಂಕ 07 ಫೆಬ್ರವರಿ 2025 ಶುಕ್ರವಾರ ಸಂಜೆ 5-00 ಗಂಟೆಗೆ ಖ್ಯಾತ ನಾಗಸ್ವರ ವಿದ್ವಾಂಸರ ಶ್ರೀ ನಾಗೇಶ್ ಬಪ್ಪನಾಡು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಎಂ.ಜಿ.ಎಂ. ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ವಿದ್ವಾನ್ ಯು. ರಾಘವೇಂದ್ರ ರಾವ್ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಡಾ. ಶ್ರೀಕಿರಣ ಹೆಬ್ಬಾರ್ ವಹಿಸಲಿದ್ದಾರೆ. ಭಾಷಾ ವಿಜ್ಞಾನಾದಿ ನಾನಾ ಕ್ಷೇತ್ರಗಳ ವಿದ್ವಾಂಸರೂ, ಸಂಗೀತ ಪ್ರಿಯರೂ ಆದ ಡಾ. ಸುಶೀಲಾ ಉಪಾಧ್ಯಾಯ ಇವರ ಸಂಸ್ಮರಣೆಯಲ್ಲಿ ಇವರ ಪತಿ ಡಾಕ್ಟರ್ ಯು.ಪಿ. ಉಪಾಧ್ಯಾಯ ಇವರು ಸ್ಥಾಪಿಸಿದ ‘ರಾಗ ಧನ ಪಲ್ಲವಿ’ ಪ್ರಶಸ್ತಿಯನ್ನು ಸ್ಥಳೀಯ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಸಾಧಕರಿಗೆ ರಾಗ ಧನ ಸಂಸ್ಥೆಯು ಪ್ರತಿ ವರ್ಷ ನೀಡುತ್ತಿದ್ದು, ಈ ವರ್ಷ ಪ್ರಶಸ್ತಿಯನ್ನು ಗಾಯಕಿ ವಿದುಷಿ ಶ್ರುತಿ ಎಸ್. ಭಟ್ ಇವರಿಗೆ ನೀಡಲಾಗುವುದು. ಖ್ಯಾತ ಹಿರಿಯ ಕೊಳಲು ವಿದ್ವಾಂಸ ಯು. ರಾಘವೇಂದ್ರ ರಾವ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಂತರ ವಿದುಷಿ ಶ್ರುತಿ ಎಸ್. ಭಟ್ ಇವರಿಂದ ಸಂಗೀತ ಕಛೇರಿ ನಡೆಯಲಿದ್ದು, ವಯೊಲಿನ್ ನಲ್ಲಿ ಕುಮಾರಿ ಶ್ರೀಲಕ್ಷ್ಮಿಭಟ್ ಚೆನ್ನೈ ಹಾಗೂ ಮೃದಂಗದಲ್ಲಿ ಶ್ರೀ ನಿಕ್ಷಿತ್ ಟಿ. ಪುತ್ತೂರು ಸಹಕರಿಸಲಿದ್ದಾರೆ.
ದಿನಾಂಕ 08 ಫೆಬ್ರವರಿ 2025 ಶನಿವಾರ ಅಪರಾಹ್ನ 2-00 ಗಂಟೆಗೆ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳು ಹಾಗೂ ಎಲ್ಲಾ ಕಲಾವಿದರಿಂದ ಶ್ರೀ ತ್ಯಾಗರಾಜರ ಘನಪಂಚ ರತ್ನ ಕೃತಿಗಳ ಗಾಯನ ನಡೆಯಲಿದೆ. ಸಂಜೆ 4-30ರಿಂದ ಡಾ. ಎನ್.ಜೆ. ನಂದಿನಿಯವರಿಂದ ನಡೆಯಲಿರುವ ಸಂಗೀತ ಕಛೇರಿಗೆ ವಯೊಲಿನ್ ನಲ್ಲಿ ಮತ್ತೂರು ಆರ್. ಶ್ರೀನಿಧಿ ಹಾಗೂ ಮೃದಂಗದಲ್ಲಿ ಅನಿರುದ್ಧ ಎಸ್. ಭಟ್ ಸಹಕರಿಸಲಿದ್ದಾರೆ.
ದಿನಾಂಕ 09 ಫೆಬ್ರವರಿ 2025 ಭಾನುವಾರ ಬೆಳಿಗ್ಗೆ 9-00 ಗಂಟೆಗೆ ಪಂಡಿತ್ ರವಿಕಿರಣ್ ಮಣಿಪಾಲ ಇವರ ಹಿಂದುಸ್ತಾನಿ ಸಂಗೀತ ಕಛೇರಿಗೆ ಶಶಿಕಿರಣ್ ಮಣಿಪಾಲ ತಬಲಾದಲ್ಲಿ, ಶ್ರೀ ಪ್ರಸಾದ್ ಕಾಮತ್ ಉಡುಪಿ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ. ಬೆಳಿಗ್ಗೆ ಗಂಟೆ 11-15ಕ್ಕೆ ನಡೆಯಲಿರುವ ಕರ್ನಾಟಕ ಸಂಗೀತ ಕಛೇರಿಯಲ್ಲಿ ಚೆನ್ನೈಯ ಶ್ರೀಮತಿ ಮಾಧುರಿ ಕೌಶಿಕ್ ಇವರ ಹಾಡುಗಾರಿಕೆಗೆ ವಯೊಲಿನ್ ನಲ್ಲಿ ಕುಮಾರಿ ಶ್ರೀಲಕ್ಷ್ಮಿ ಭಟ್ ಚೆನ್ನೈ ಹಾಗೂ ಬೆಂಗಳೂರಿನ ಅನಿರುದ್ಧ ಎಸ್. ಭಟ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ ಶ್ರೀ ವಿನುಷ್ ಭಾರದ್ವಾಜ್ ಇವರ ಸಂಗೀತ ಕಛೇರಿಗೆ ವಯೊಲಿನ್ ನಲ್ಲಿ ಕುಮಾರಿ ಮಹತೀ ಕೆ. ಕಾರ್ಕಳ ಹಾಗೂ ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭವು ಡಾ. ಶ್ರೀಕಿರಣ ಹೆಬ್ಬಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ. ಶ್ರೀಶ ಕುಮಾರ ಪುತ್ತೂರು ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಂಗೀತಕಲಾನಿಧಿ ಲಾಲ್ಗುಡಿ ಜಿ.ಜೆ.ಆರ್. ಕೃಷ್ಣನ್ ಹಾಗೂ ಸಂಗೀತಕಲಾನಿಧಿ ಲಾಲ್ಗುಡಿ ವಿಜಯಲಕ್ಷ್ಮಿ ಇವರಿಂದ ದ್ವಂದ್ವ ವಯೊಲಿನ್ ವಾದನ ಕಛೇರಿಗೆ ಮೃದಂಗದಲ್ಲಿ ಗುರು ರಾಘವೇಂದ್ರ ಚೆನ್ನೈ ಸಹಕರಿಸಲಿದ್ದಾರೆ.