ಧಾರವಾಡ : ವರಕವಿ ಡಾ. ದ.ರಾ. ಬೇಂದ್ರೆಯವರ 129ನೆಯ ಜನ್ಮದಿನವಾದ ದಿನಾಂಕ 31 ಜನವರಿ 2025ರಂದು ಧಾರವಾಡದ ಕಡಪಾ ಮೈದಾನದಲ್ಲಿ ಇರುವ ಪುತ್ಥಳಿಗೆ (ಪುತ್ಥಳಿಯ ಕೆಳಗೆ ಅವರ ಚಿತಾಭಸ್ಮ ತುಂಬಿದ ಕಲಶವೂ ಇದೆ) ಧಾರವಾಡದ ಸಾಧನಕೇರಿ ಮತ್ತು ಬೇಂದ್ರೆ ಅಭಿಮಾನಿ ಬಳಗದ ವತಿಯಿಂದ ಮಾಲಾರ್ಪಣೆ ಮಾಡಿ ನುಡಿ ನಮನದ ಮೂಲಕ ಗೌರವ ಸಲ್ಲಿಸಲಾಯಿತು.
ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ, ಧಾರವಾಡ ಮಹಾನಗರಪಾಲಿಕೆ ಸದಸ್ಯ ಸುರೇಶ ಬೇದ್ರೆ, ಶಂಕರ ಕುಂಬಿ, ಡಾ. ಹ.ವೆಂ. ಕಾಖಂಡಿಕಿ, ಮಲ್ಲಿಕಾರ್ಜುನ ಹಿರೇಮಠ ಮತ್ತು ರಾಜೀವ ಪಾಟೀಲ ಕುಲಕರ್ಣಿ ಮುಂತಾದವರು ಮಾತನಾಡಿ ಕೇವಲ ಧಾರವಾಡಕಷ್ಟೇ ಅಲ್ಲ, ಈ ನಾಡು, ಈ ರಾಷ್ಟ್ರ, ಹೊರ ರಾಷ್ಟ್ರಗಳೂ ಸೇರಿದಂತೆ ‘ವಿಶ್ವಕವಿ’ ಎನಿಸಿಕೊಂಡ ವರಕವಿಯ ಇಲ್ಲಿಯ ಪುತ್ಥಳಿ ತೀರ ಚಿಕ್ಕದಾಗಿದ್ದು, ಧಾರವಾಡದ ಸಾಂಸ್ಕೃತಿಕ ರಂಗದ ಮೇರು ವ್ಯಕ್ತಿ, ಭಾವಗೀತೆಗಳ ಚಕ್ರವರ್ತಿಗೆ ಸೂಕ್ತ ಸ್ಮಾರಕವಾಗುವಂತೆ ಮೂರ್ತಿಯನ್ನು ಇನ್ನಷ್ಟು ಎತ್ತರಗೊಳಿಸಿ ಈ ಪವಿತ್ರ ಸ್ಥಳವನ್ನು ಸೌಂದರ್ಯೀಕರಣಗೊಳಿಸಿ ಇಂತಹ ಜಾಗೆ ಆಕ್ರಮಿಸಿಕೊಂಡ ಅನೇಕ ಕಟೌಟ ಮತ್ತು ಬೋರ್ಡುಗಳನ್ನು ತಕ್ಷಣ ತೆಗೆಯಿಸಿ ಈ ಸಾಂಸ್ಕೃತಿಕ ನಗರಿಯನ್ನು ಇನ್ನಷ್ಟು ಶುಚಿಯಾಗಿಡಬೇಕೆಂದು ಕೇಳಿಕೊಂಡರು. ಹಿರಿಯ ಕವಿ ನರಸಿಂಹ ಪರಾಂಜಪೆ ವರಕವಿಯ ಕುರಿತಾದ ಸ್ವರಚಿತ ಕವನ ‘ಇಳಿದು ಬಾ’ ಎನ್ನುವ ಕವನವೊಂದನ್ನು ಓದಿದರು.
ವೆಂಕಟೇಶ ದೇಸಾಯಿ, ರಮೇಶ ನಾಡಗೇರ, ರಮೇಶ ಕಾಖಂಡಿಕಿ, ಸಮೀರ ಜೋಶಿ, ವಿ.ಜಿ. ನರಸಾಪುರ, ಶ್ರೀಕಾಂತ ದೇಸಾಯಿ, ಅನಿಲ ಕಾಖಂಡಿಕಿ, ಎಸ್.ಎಮ್. ದೇಶಪಾಂಡೆ, ವಸಂತ ದೇಸಾಯಿ, ಶ್ರೀನಾಥ ಕುಲಕರ್ಣಿ, ಅಸಿಸ್ಟೆಂಟ್ ಕಮಿಷನರ್ ಅರವಿಂದ ಜಮಖಂಡಿ, ಶಂಕರ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.