ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ ಸಂಸ್ಕೃತಿ ಉತ್ಸವದ ಎರಡನೇ ದಿನದ ಕಾರ್ಯಕ್ರಮ ದಿನಾಂಕ 31 ಜನವರಿ 2025ನೇ ಶುಕ್ರವಾರದಂದು ಉಡುಪಿ ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರ ಸ್ವೀಕರಿಸಿದ ಖ್ಯಾತ ರಂಗ ನಿರ್ದೇಶಕ ಹಾಗೂ ಚಿತ್ರನಟ ಮಂಡ್ಯ ರಮೇಶ್ ಮಾತನಾಡಿ “ಜಗತ್ತಿನ ಎಲ್ಲ ಕಲೆಗಳ ಮೂಲ ಅಸ್ತಿತ್ವ ಜಾನಪದದಲ್ಲಿದೆ. ರಾಮಾಯಣ, ಮಹಾಭಾರತಗಳು ಬದುಕಿನ ರೂಪಕಗಳು. ರಂಗ ಕಲಾವಿದನಾಗುವುದು ಸುಲಭದ ಮಾತಲ್ಲ. ಅದು ಸಾಹಸದ ಕೆಲಸ. ಗಾಂಧಿಯನ್ನು ಬದಲಾಯಿಸಿರುವುದೂ ಇದೇ ರಂಗಭೂಮಿ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ “ನಾಟಕ, ಕಲೆ, ಸಂಗೀತ ಮನುಷ್ಯತ್ವ ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ. ಮನುಷ್ಯತ್ವದ ನೆಲೆಯಲ್ಲಿ ಸಂಬಂಧ ಗಟ್ಟಿಗೊಳಿಸುವುದು ಇಂದಿನ ಅಗತ್ಯ. ಮಕ್ಕಳು ಹಾಗೂ ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿ, ಬೆಳೆಸಿಕೊಳ್ಳಬೇಕಾದರೆ ಅವರು ಕಲೆಯಲ್ಲಿ ತೊಡಗಿಕೊಳ್ಳಬೇಕು. ಭಿನ್ನ ದಾರಿಯಲ್ಲಿ ಸಾಗುತ್ತಿರುವ ಯುವಜನತೆಯನ್ನು ಸರಿಯಾದ ದಾರಿಯಲ್ಲಿ ಮನ್ನಡೆಸಿಕೊಂಡು ಹೋಗಬೇಕಾದರೆ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು.” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಎಂ. ಹರಿಶ್ಚಂದ್ರ ಮಾತನಾಡಿದರು.
ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಮಾತುಗಳನ್ನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷರಾದ ಪ್ರೊ. ಶಂಕರ್, ಉಪಾಧ್ಯಕ್ಷರಾದ ವಿಘ್ನೇಶ್ವರ ಅಡಿಗ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ, ಸುಗುಣ ಸುವರ್ಣ ಉಪಸ್ಥಿತರಿದ್ದರು.
ಪಂಚಮಿ ಪುರಸ್ಕಾರದ ಸಂಚಾಲಕ ಜನಾರ್ದನ ಕೊಡವೂರು ಸ್ವಾಗತಿಸಿ, ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿ, ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಬಳಿಕ ಮಂಡ್ಯ ರಮೇಶ್ ನಿರ್ದೇಶನ ‘ಚೋರ ಚರಣದಾಸ’ ನಾಟಕ ಪ್ರದರ್ಶನಗೊಂಡಿತು
Subscribe to Updates
Get the latest creative news from FooBar about art, design and business.
Next Article ವಿಶೇಷ ಲೇಖನ | ನಾಟಕ ಶಿರೋಮಣಿ ಎ. ವಿ. ವರದಾಚಾರ್