ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಮ್ಯಾಕ್ಸ್ ಮೀಡಿಯಾ ಸಹಕಾರದಲ್ಲಿ ನಡೆಯುವ ನೂತನ ಅಭಿಯಾನ ‘ಉಡುಪಿ ಚಾವಡಿ’ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಇವರು ದಿನಾಂಕ 31 ಜನವರಿ 2025ರಂದು ಆವರಣದಲ್ಲಿ ಬಿತ್ತಿ ಪತ್ರ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಡ್ಯ ರಮೇಶ್ “ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ಹತ್ತು ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕನಸಿನ ಕೂಸಾದ ಈ ಕನ್ನಡ ಸಾಹಿತ್ಯ ಪರಿಷತ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕನ್ನಡ ನಾಡು ನುಡಿ ಸಂಸ್ಕೃತಿಕವಾಗಿ ವಿಶೇಷವಾದ ಕಾಯಕವನ್ನು ಮಾಡುತ್ತಿದೆ. ಉಡುಪಿಗೆ ಬರುವ ಮಹಾನ್ ವ್ಯಕ್ತಿಗಳ ಮಾತುಗಳು ಈ ಮೂಲಕ ದಾಖಲೀಕರಣಗೊಳ್ಳಲಿರುವುದು ಅಭಿನಂದನೀಯ” ಎಂದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಮಾತನಾಡಿ, “ಉಡುಪಿ ಒಂದು ಸಾಂಸ್ಕೃತಿಕ ನಗರ. ಉಡುಪಿಗೆ ಬರುವ ವಿಶೇಷ ಅತಿಥಿಗಳನ್ನು ಮತ್ತು ಉಡುಪಿಯಲ್ಲಿರುವ ಸಾಧನೆ ಮಾಡಿದ ಸಾಧಕರನ್ನು ಜನರಿಗೆ ಪರಿಚಯಿಸುವ ನೂತನ ಅಭಿಯಾನ ಉಡುಪಿ ಚಾವಡಿ” ಎಂದರು.
ವೇದಿಕೆಯಲ್ಲಿ ಅಭಿಯಾನದ ಸಂಯೋಜಕಿ ಪೂರ್ಣಿಮಾ ಜನಾರ್ದನ್, ಮ್ಯಾಕ್ಸ್ ಮೀಡಿಯಾದ ವಿನಾಯಕ್, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ ಪ್ರಭು ಕರ್ವಾಲು, ಸತೀಶ್ ಕೊಡವೂರು, ಸಿದ್ದಲಿಂಗಯ್ಯ ಸ್ವಾಮಿ ಚಿಕ್ಕಮಠ ಮುಂತಾದವರು ಉಪಸ್ಥಿತರಿದ್ದರು.