ಧಾರವಾಡ : ಅಭಿನಯ ಭಾರತಿ ಧಾರವಾಡ ಆಯೋಜಿಸಿದ ‘ಬೇಂದ್ರೆಯವರ ಕನ್ನಡ ನಾಟಕಗಳು’ ವಿಷಯದ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 30 ಜನವರಿ 2025ರಂದು ನಡೆಯಿತು.
ಹಿರಿಯ ಪ್ರಾಧ್ಯಾಪಕ ಸಂಶೋಧಕ ಹಾಗೂ ಕನ್ನಡ ಸಾಹಿತ್ಯ ಪರಿಚಾರಕ ದಿ. ಡಾ. ವೃಷಭೇಂದ್ರ ಸ್ವಾಮಿ ಇವರ ಸ್ಮರಣಾರ್ಥ ಅವರ ಪುತ್ರ ಡಾ ಎಸ್. ಎಂ. ಶಿವಪ್ರಸಾದ್ ಅವರು ನೀಡಿದ ಕೊಡುಗೆಯ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಡಾ. ವಿನಾಯಕ ನಾಯಕ ಮಾತನಾಡಿ “ವರಕವಿ ಬೇಂದ್ರೆಯವರು ತಮ್ಮ ಅಪ್ರತಿಮ ಕಾವ್ಯ ಪ್ರತಿಭೆಯಿಂದ ಜನ ಮಾನಸದಲ್ಲಿ ಜಗದ ಕವಿ, ಯುಗದ ಕವಿ, ಎಂದು ಕರೆಸಿಕೊಂಡಿದ್ದರೂ. ಸಾಹಿತ್ಯದ ಇತರ ಪ್ರಕಾರಗಳಾದ ಕಥೆ, ಹರಟೆ, ಲಲಿತ ಪ್ರಬಂಧ ಹಾಗೂ ನಾಟಕಗಳಲ್ಲೂ ಅವರು ತಮ್ಮ ಅಗಾಧ ಜೀವನ ಪ್ರಜ್ಞೆ ಹಾಗೂ ವ್ಯಂಗ್ಯ ನಡೆನುಡಿಗಳಿಂದ ಅಸಾಮಾನ್ಯ ಕೃತಿಗಳನ್ನು ರಚಿಸಿ ಇಂದಿಗೂ ಪ್ರಸ್ತುತವೆನಿಸುವ ಸಾಮಾಜಿಕ ಚಿಂತನೆಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ರಂಗಭೂಮಿ ಜೀವನದ ಪ್ರತಿಬಿಂಬವಾಗಿ, ಜೀವನ ದಾರಿ ತಪ್ಪಿದಾಗ ತಿದ್ದುವ ಕೆಲಸ ಮಾಡುತ್ತದೆ ಎಂದು ಬೇಂದ್ರೆಯವರ ನಂಬಿದ್ದರು. ಅವರ ನಾಟಕಗಳಲ್ಲಿ ನಿತ್ಯ ಜೀವನದ ರಸ-ವಿರಸ ಘಟನೆಗಳು, ಸಾಮಾಜಿಕ ಅಸಂಬದ್ಧತೆ, ದೂರದರ್ಶತ್ವದ ಸಂದೇಶಗಳನ್ನು ಕಾಣಬಹುದು. ಅವರ ‘ಜಾತ್ರೆ’, ‘ಸಾಯೋ ಆಟ’, ‘ಹೊಸ ಸಂಸಾರ’, ‘ದೆವ್ವದ ಮನೆ’ ಮುಂತಾದ ನಾಟಕಗಳು ನೂರು ವರ್ಷಗಳ ಮುಂಚೆ ಬರೆದಿದ್ದರೂ ಇಂದಿಗೂ ಪ್ರಸ್ತುತ ವೆನಿಸುತ್ತವೆ. ಬೇಂದ್ರೆಯವರ ಕಾವ್ಯ ವಾಚನ, ಭಾಷಣ ಹಾಗೂ ಹರಟೆಗಳಲ್ಲಿಯೂ ಅವರ ಭಾವ, ಭಂಗಿ, ತಿಳಿ ಹಾಸ್ಯ ಹಾಗೂ ವಿಡಂಬನೆ ತುಂಬಿದ ಮಾತುಗಳು ಅವರ ಜೀವನದ ಪ್ರತಿ ಉಸಿರಾಟದಲ್ಲಿಯೂ ಅವರ ರಂಗಪ್ರಜ್ಞೆಯನು ಅನಾವರಣಗೊಳಿಸುತ್ತವೆ. ಬೇಂದ್ರೆಯವರ ಅಸಾಧಾರಣ ಕಾವ್ಯ ಪ್ರತಿಭೆಗೆ ಸಿಕ್ಕ ಮನ್ನಣೆಯ ಜೊತೆಗೆ ಅವರ ಇತರ ಸಾಹಿತ್ಯ ಪ್ರಕಾರಗಳ ಬಗ್ಗೆಯೂ ವಿಮರ್ಶಾ ಜಗತ್ತು ಗಮನ ಹರಿಸಬೇಕಾಗಿದೆ.” ಎಂದರು.
ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿ ಮಾತನಾಡುತ್ತಾ ಶ್ರೀಮತಿ ಜ್ಯೋತಿ ಪುರಾಣಿ ದಿಕ್ಷಿತ್ ಅವರು ಡಾ. ಎಸ್. ಎಂ. ಶಿವಪ್ರಸಾದ್ ಅವರ ಉದಾರ ಕೊಡುಗೆಯನ್ನು ಸ್ಮರಿಸಿ ಅವರ ನಿರಂತರ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದ ದತ್ತಿ ಉಪನ್ಯಾಸಗಳು ಹಾಗೂ ವಿಜ್ಞಾನ ನಾಟಕೋತ್ಸವಗಳು ಅಭಿನಯ ಭಾರತಿಯ ಆಶ್ರಯದಲ್ಲಿ ಪ್ರತಿ ವರ್ಷವೂ ನಡೆಯುತ್ತಿವೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಅಭಿನಯ ಭಾರತೀಯಯ ಅಧ್ಯಕ್ಷರಾದ ಅರವಿಂದ್ ಕುಲಕರ್ಣಿ ಸಂಸ್ಥೆಯ ನಿರಂತರ ಚಟುವಟಿಕೆಗಳಿಗೆ ಧಾರವಾಡದ ಸುಸಂಸ್ಕೃತ ಜನರ ಸಹಾಯ ಸಹಕಾರ ಕೋರಿದರು.
ಕಾರ್ಯಕ್ರಮದಲ್ಲಿ ಶ್ರೀ ಹರ್ಷ ಡಂಬಳ, ವಿಷಯಾ ಜೇವೂರ, ಮೋಹನ್ ಸಿದ್ದಾಂತಿ, ರಮೇಶ್ ನಾಡಿಗೇರ್, ಗಿರೀಶ್ ದೊಡ್ಡಮನಿ, ವೀರಣ್ಣ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರಂಭದಲ್ಲಿ “ಬೇಂದ್ರೆ ಕೃಷ್ಣಪ್ಪ”ಎಂದು ಖ್ಯಾತರಾದ ಶ್ರೀ ಜಿ ಕೃಷ್ಣಪ್ಪ ಅವರ ನಿಧನ ನಿಮಿತ್ತ ಒಂದು ನಿಮಿಷದ ಕಾಲ ಮೌನ ಪ್ರಾರ್ಥನೆ ಆಚರಿಸಲಾಯಿತು.