ಕವಿ ಸಿದ್ದಲಿಂಗಯ್ಯನವರು ದೇವಯ್ಯ ಮತ್ತು ವೆಂಕಟಮ್ಮ ದಂಪತಿಯ ಪುತ್ರ. 1954 ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಎಳವೆಯಿಂದಲೇ ಇವರಿಗೆ ಕವಿತೆಗಳನ್ನು ಬರೆಯುವ ಹವ್ಯಾಸವಿತ್ತು ಮತ್ತು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವ, ಭೂಪಾಲ, ಲೋಹಿಯಾ ಮೊದಲಾದವರ ವಿಚಾರಧಾರೆಗಳಿಂದ ಪ್ರೇರಿತರಾದ ಇವರು ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮ ಸಿಟ್ಟು ಆಕ್ರೋಶಗಳನ್ನು ಅಭಿವ್ಯಕ್ತಿಗೊಳಿಸಲು ಕಾವ್ಯದ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡರು. ಸಾಮಾಜಿಕ ಅಸಮಾನತೆಗಳನ್ನು ಖಂಡಿಸಿ, ಸಮಾನತೆಗಳಿಗಾಗಿ ದಲಿತ ಬರವಣಿಗೆ ಮತ್ತು ದಲಿತ ಹೋರಾಟ ಮಾಡಿದ ಸಿದ್ದಲಿಂಗಯ್ಯನವರು ‘ದಲಿತ ಕವಿ’ ಎಂದೇ ಪ್ರಸಿದ್ಧರಾದರು. ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕರಲ್ಲಿ ಇವರೂ ಒಬ್ಬರು.
ಸಿದ್ದಲಿಂಗಯ್ಯನವರು ಬರವಣಿಗೆಯ ಜೊತೆಗೆ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. ಅಂಬೇಡ್ಕರ್ ಮತ್ತು ರಾಮ ಮನೋಹರ ಲೋಹಿಯಾ ಇವರುಗಳ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ, ಜಾನಪದ ಸಾಹಿತ್ಯ ಸಂಪಾದಕ ಮಂಡಳಿ ಮುಂತಾದವುಗಳಲ್ಲಿ ಸದಸ್ಯರಾಗಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ. ಎ ಪದವಿಯನ್ನು ಪಡೆದುಕೊಂಡ ಸಿದ್ದಲಿಂಗಯ್ಯನವರು ಪ್ರೊಫೆಸರ್ ಜಿ. ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮ ದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ. ಎಚ್. ಡಿ. ಪದವಿಯನ್ನು ಪಡೆದರು. 1975ರಲ್ಲಿ ಪ್ರಕಟಗೊಂಡ ‘ಹೊಲೆ ಮಾದಿಗರ ಹಾಡು’ ಮುಂದೆ ರಚನೆಗೊಂಡ ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’ , ‘ ಮೆರವಣಿಗೆ’,’ನನ್ನ ಜನಗಳು ಮತ್ತು ಇತರ ಕವಿತೆಗಳು’, ‘ಆಯ್ದ ಕವನಗಳು’ ಇವೆಲ್ಲ ಸಿದ್ದಲಿಂಗಯ್ಯನವರು ಬರೆದು ಪ್ರಕಟಪಡಿಸಿದ ಕವನ ಸಂಕಲನಗಳು. ‘ಏಕಲವ್ಯ’,’ ಪಂಚಮ’ ಮತ್ತು ‘ನೆಲಸಮ’ ಇವರಿಂದ ರಚನೆಗೊಂಡ ಪ್ರಮುಖ ನಾಟಕಗಳು. ಇವರು ವಿವಿಧ ವೇದಿಕೆಗಳಲ್ಲಿ ಮಾಡಿದ ಭಾಷಣಗಳ ಸಂಕಲನ ‘ಸದನದಲ್ಲಿ ಸಿದ್ದಲಿಂಗಯ್ಯ’ ಭಾಗ 1 ಮತ್ತು – 2. ಊರುಕೇರಿ ಭಾಗ-1 ಮತ್ತು – 2 ಇವು ಆತ್ಮಕಥೆಗಳು. ‘ಹಕ್ಕಿ ನೋಟ’ ‘ರಸಗಳಿಗೆಗಳು ‘ , ‘ಎಡಬಲ’, ‘ಉರಿ ಕಂಡಾಯ ‘ ಇವು ವಿಮರ್ಶನಾ ಕೃತಿಗಳು.
ಸಿದ್ದಲಿಂಗಯ್ಯನವರ ಹಲವಾರು ಕವಿತೆಗಳು ಇಂಗ್ಲಿಷ್ ,ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಒಬ್ಬ ಸೃಜನಶೀಲ ಸಾಹಿತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅವಿರತ ಸಾಧನೆಗಾಗಿ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ‘ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ’, ‘ಡಾ. ಅಂಬೇಡ್ಕರ್ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಜಾನಪದ ತಜ್ಞ ಪ್ರಶಸ್ತಿ’, ‘ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ’, ’ಬಾಬು ಜಗಜೀವನ್ ರಾಮ್ ಪ್ರಶಸ್ತಿ’, ಹಂಪಿ ವಿದ್ಯಾಲಯದ ‘ನಾಡೋಜ ಪ್ರಶಸ್ತಿ’ ಇವು ಪ್ರಮುಖವಾದವುಗಳು. ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಖ್ಯಾತಿ ಇವರದು. ಮಾತ್ರವಲ್ಲದೆ ಆಳ್ವಾಸ್ ನುಡಿಸಿರಿ ಸಮ್ಮೇಳನ , ಶ್ರವಣಬೆಳಗೊಳದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಪಣಜಿಯಲ್ಲಿ ನಡೆದ ಭಾರತೀಯ ಕನ್ನಡ ಸಮ್ಮೇಳನ, ಗೊರೆಗಾವ್ ನ ವಿಚಾರ ಭಾರತಿ ಸಮ್ಮೇಳನ, ಶರಣ ಸಮ್ಮೇಳನ, ಹಂಪಿ ಉತ್ಸವ ,ಮೈಸೂರು ದಸರಾ ಉತ್ಸವ ಇತ್ಯಾದಿಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಗೌರವ ಸಿದ್ಧಲಿಂಗಯ್ಯನವರದು.
ನಿರಂತರ ಕಾರ್ಯ ಶೀಲ ಚಿಂತಕ, ಸೃಜನಶೀಲ ಮತ್ತು ಸಮಾಜದಲ್ಲಿನ ಅಸಮಾನತೆಗಳನ್ನು ದಿಟ್ಟತನದಿಂದ ತಮ್ಮ ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ ದಲಿತ ಸಾಹಿತಿ ಸಿದ್ದಲಿಂಗಯ್ಯನವರು 11 ಜೂನ್ 2021ರಲ್ಲಿ ಈ ಲೋಕದಿಂದ ದೂರವಾದರು. ಇವರ ದಿವ್ಯ ಚೇತನಕ್ಕೆ ಅನಂತ ನಮನಗಳು.
-ಅಕ್ಷರೀ