ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಇದರ ವತಿಯಿಂದ ಗಾಂಧೀಜಿ ವಿವೇಕಾನಂದ ಪ್ರಣಿತ ರಾಜ್ಯ ಮಟ್ಟದ ಎಂಟನೇ ಯುವಜನ ಸಮ್ಮೇಳನವು ದಿನಾಂಕ 02 ಫೆಬ್ರವರಿ 2025ರಂದು ಬೆಂಗಳೂರಿನ ಶೇಷಾದ್ರಿಪುರಂ ಮೊದಲನೆಯ ಮಹಡಿ ಕಾನ್ಫ್ ರೆನ್ಸ್ ಹಾಲಿನಲ್ಲಿ ನಡೆಯಿತು.
ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಯುವ ಕವಿ ಜಿ. ನಾಗರಾಜ್ ನಾದಲೀಲೆ ಮಾತನಾಡಿ “ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ …ಎಂಬ ಬಸವಣ್ಣನವರ ವಚನಗಳು ಎಲ್ಲರನ್ನೂ ಒಗ್ಗೂಡಿಸಿ 12ನೇ ಶತಮಾನದ ಸಾಮಾಜಿಕ ಬದಲಾವಣೆಗೆ ಹೇಗೆ ದಾರಿಯಾಯಿತೋ, ಕಾರಣವಾಯಿತೋ ಹಾಗೆ ಸಮಸಮಾಜ ನಿರ್ಮಾಣ ಆಗಲು ವಿದ್ಯಾವಂತ ಯುವಕರು ಮುಂದೆ ಬರಬೇಕು, ಯುವಕರು ಅಧಿಕಾರದ ಮುಂಚೂಣಿಗೆ ಬರಬೇಕು, ಜನರ ಸಮಸ್ಯೆ ನನ್ನ ಸಮಸ್ಯೆ ಅನ್ನಿಸಿದಾಗ ಅಧಿಕಾರಿಗಳು, ರಾಜಕಾರಣಿಗಳಿಗೆ ಗೌರವ ಇರುತ್ತದೆ. ರಾಜಕೀಯ ಶುದ್ಧಿಯಾಗಬೇಕಾದರೆ ಯುವಕರು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು, ಸಂಸ್ಕೃತಿ, ಸಂಸ್ಕಾರ ನಮ್ಮ ಮನ ಮನೆಗಳಲ್ಲಿ ಮೇಳೈಸಬೇಕಿದೆ. ಈ ಹಿನ್ನೆಲೆಯಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟಿನ ನಿಸ್ವಾರ್ಥ ಸೇವೆಯಿಂದ ನೂರಾರು ಯುವಕರು ಬದಲಾವಣೆ ಹೊಂದಿರುವುದನ್ನು ನಾನು ಕಂಡಿದ್ದೇನೆ, ಅದಕ್ಕಾಗಿ ಸದಾ ತುಡಿಯುವ ಮನಸ್ಸಿನ ಡಾ. ಸಿಸಿರಾ ಇವರ ಕಾರ್ಯ ಶ್ಲಾಘನೀಯ. ಗುರುವಿನ ಮಾತು, ಮಾರ್ಗದರ್ಶನ ನನಗೆ ಯಾವಾಗಲೂ ಸ್ಫೂರ್ತಿ, ಗುರು, ಗುರಿ, ನನ್ನ ತಂದೆ ತಾಯಿ ಆಶೀರ್ವಾದವು ನಾನು ಕವಿಯಾಗಿ, ಅಧ್ಯಾಪಕನಾಗಿ ಕರ್ತವ್ಯ ಮತ್ತು ಸೇವೆ ಎಂಬ ಯಜ್ಞದಲ್ಲಿ ನಾನು ಶ್ರೀಸಾಮಾನ್ಯ. ಆದರೆ ನನ್ನ ಗುರುಗಳಿಂದ ನೀನು ತುಂಬಾ ಒಳ್ಳೆಯವನು ಕಣೋ ಓದುವಾಗ ಹೇಗಿದ್ದೀಯೋ ಸಾಂಸಾರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಯುವಕರಿಗೆ ಮಾದರಿಯಾಗಿ ಇದ್ದೀಯಾ ಎಂದು ಹೇಳಿಸಿಕೊಳ್ಳುವ ಹಾಗೆ ಬದುಕಿದ್ದೇನೆ. ಅದಕ್ಕಾಗಿ ನನ್ನ ಗುರುಗಳಾದ ಡಾ. ಸಿಸಿರಾ ಇವರು ನನ್ನ ಸಾಹಿತ್ಯ ಸೇವೆ ಗುರುತಿಸಿ ಗೌರವಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು”.
ಯುವ ಸಾಹಿತಿ ಡಾ. ಕೃಷ್ಣ ಹಾನ್ ಬಾಳ್ ಇವರ ‘ಗೆಳತಿ’ ಮತ್ತು ‘ನಮ್ಮೂರು ಹಾನುಬಾಳು’ ಎಂಬ ಎರಡು ಕೃತಿಗಳನ್ನು ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ ವನಮಾಲ ಸಂಪನ್ನಕುಮಾರ್ ಲೋಕಾರ್ಪಣೆ ಮಾಡಿ “ಇವತ್ತು ಸಾಹಿತಿಗಳು ಬರೆಯುವ ಸಾಹಿತ್ಯ ನೈಜತೆಯಿಂದಲೂ, ಬಾಳಿನ ಜೀವನ ಒಂದಾಗಿದ್ದರೆ ಆ ಸಾಹಿತ್ಯ ಶಾಶ್ವತವಾಗಿ ಸಾರಸ್ವತ ಲೋಕದಲ್ಲಿ ಗಟ್ಟಿಯಾಗಿ ಉಳಿಯಬಲ್ಲುದು. ಕೃಷ್ಣರವರು ತನ್ನ ಊರಿನ ಚಿತ್ರಣವನ್ನು ಕವಿತೆಗಳ ರೂಪದಲ್ಲಿ ಹಿಡಿದಿಟ್ಟಿದ್ದಾರೆ, ಇವರ ಸಾಹಿತ್ಯ ಸೇವೆ ನಿರಂತರವಾಗಿರಲಿ” ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಕೀಲರಾದ ನಂಜಪ್ಪ ಕಾಳೇಗೌಡರು ಮಾತನಾಡಿ “ಈ ಸಂಸ್ಥೆಯು ಯಾವುದೇ ಪ್ರತಿಫಲವಿಲ್ಲದೆ, ಯುವಕರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಪ್ರಾಮಾಣಿಕತೆ, ಪ್ರಬುದ್ಧತೆ ಮೆಚ್ಚುವಂಥದ್ದು. ಸಂಘಟಕರಾದ ರಾಮಲಿಂಗೇಶ್ವರ ಮತ್ತು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸರ್ಕಾರದ ಎಲ್ಲಾ ಪ್ರಶಸ್ತಿಗೆ ಭಾಜನರಾಗುವ ಅರ್ಹತೆ ಪಡೆದಿದೆ. ಕನ್ನಡ ಕಲಿಕೆ, ಗಾಂಧಿ ವಿವೇಕಾನಂದರ ಆಲೋಚನೆಗಳನ್ನು ಯುವಕರಿಗೆ ಮಾದರಿಯಾಗಿ ಮುಟ್ಟಿಸುತ್ತಿದೆ” ಎಂದರು.
ಸಂಸ್ಥೆಯ ಅಧ್ಯಕ್ಷರಾದ ಡಾ. ಸಿಸಿರಾರವರು ವೇದಿಕೆಯಲ್ಲಿ ಇದ್ದವರಿಗೆ ಸ್ವಾಗತಿಸಿ, ಲೇಖಕಿ ಶಾಂತಿ ವಾಸು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಡಾ. ಆರ್. ವಾದಿರಾಜ್, ಕವಿ ಎಂ.ಆರ್. ಉಪೇಂದ್ರಕುಮಾರ್ ಉಪಸ್ಥಿತರಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ಡಾ. ಕೃಷ್ಣ ಹಾನ್ ಬಾಳ್, ಶೈಕ್ಷಣಿಕ ಕ್ಷೇತ್ರದ ಅಧ್ಯಾಪಕಿ ಶ್ರೀಮತಿ ಜಯಶ್ರೀ ರಾಜು, ಸಂಘಟಕ ಕ.ಸಾ.ಪ. ಘಟಕದ ಎಂ.ಆರ್. ಉಪೇಂದ್ರಕುಮಾರ್ ಇವರಿಗೆ ‘ಲೋಹಿಯಾ ಪ್ರಶಸ್ತಿ’ಯನ್ನು, ಸಂಶೋಧಕ ಚಂದ್ರ ಎಸ್., ಯುವ ಸೇವೆಗಾಗಿ ಎ. ಶ್ರೀಕಾಂತ್, ಚಿತ್ರ ಕಲಾವಿದೆ ರಂಜಿತಾ ಪ್ರಕಾಶ್, ನೃತ್ಯ ನಿರ್ದೇಶಕಿ ಪ್ರೊ. ಅಲಾಫೀಯ ಮುಂತಾದ ಹತ್ತು ಸಾಧಕರಿಗೆ ‘ಗಾಂಧೀಜಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ. ಸಂತೋಷ್ ಹಾನ್ಗಲ್, ಸಹಕಾರಿ ಧುರೀಣೆ ಲಯನ್ ಶ್ರೀಮತಿ ಮಂಗಳಗೌರಿ ಅರಸು, ಕವಯಿತ್ರಿ ಶ್ರೀಮತಿ ಆಶಾಶಿವುಗೌಡ, ಡಿ. ವೆಂಕಟೇಶ್, ಎಸ್. ಮಿಥುನ್, ಹೊಸಕೋಟೆ ನಾಗರಾಜ್ ಮುಂತಾದವರ ನೇತೃತ್ವದಲ್ಲಿ ಕವಿಗೋಷ್ಠಿ, ಕಥಾಗೋಷ್ಠಿ, ಸಂವಾದ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಜಯಶ್ರೀ ರಾಜುರವರ ಮಕ್ಕಳ ಕಥನ ಕವನ ‘ಮೋನು ಪುಟ್ಟಿ’ ಕೃತಿಯನ್ನು ಲೇಖಕ, ಪ್ರಾಧ್ಯಾಪಕ ಡಾ. ಆರ್. ವಾದಿರಾಜ್ ಇವರು ಲೋಕಾರ್ಪಣೆ ಮಾಡಿ ಮಾತನಾಡಿದರು.