ಕನ್ನಡದ ‘ಮಂಕುತಿಮ್ಮನ ಕಗ್ಗದ ಸರದಾರ’ ಎಂದೇ ಪ್ರಚಲಿತವಿರುವ ಡಿ. ವಿ. ಜಿ. ಇವರ ಸುಪುತ್ರ. ಓರ್ವ ಮೇರು ಬರಹಗಾರ, ಮಹಾನ್ ಸಸ್ಯಶಾಸ್ತ್ರಜ್ಞ ,ಚಿಂತಕ, ಸಂಶೋಧಕ, ವಿದ್ವಾಂಸ, ವಿನೋದ ಪೂರ್ಣ, ವಿಚಾರ ಪೂರ್ಣ ಹಾಗೂ ವೈಜ್ಞಾನಿಕ ಬರಹಗಾರ ಡಾ. ಬಿ. ಜಿ. ಎಲ್. ಸ್ವಾಮಿ ಇವರು 5 ಫೆಬ್ರವರಿ 1916 ರಲ್ಲಿ ಜನಿಸಿದರು .ಇವರ ತಾಯಿ ಭಾಗಿರತಮ್ಮನವರು.
ಬಿ. ಜಿ. ಎಲ್. ಸ್ವಾಮಿ ಎಂದೇ ಖ್ಯಾತರಾದ ಇವರ ಪೂರ್ಣ ಹೆಸರು ಬೆಂಗಳೂರು ಗುಂಡಪ್ಪ ಲಕ್ಷ್ಮೀ ನಾರಾಯಣ ಸ್ವಾಮಿ. ಕನ್ನಡದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದ ಇವರು ಉತ್ತಮ ಸಾಹಿತಿಯಾಗಿ ಹೆಸರು ಪಡೆದವರು. ಮುಖ್ಯವಾಗಿ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ಹಲವು ಪ್ರಮುಖ ಸಂಶೋಧನೆಗಳನ್ನು ನಡೆಸಿದ ಇವರ ಹೆಸರು ವೈಜ್ಞಾನಿಕ ಲೋಕಕ್ಕಿಂತಲೂ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಿತು. ವಿಜ್ಞಾನವನ್ನು ಜನಸಾಮಾನ್ಯರಿಗೆ ಸ್ಪಷ್ಟವಾಗಿ ವಿವರಿಸುವ ಸಾಮರ್ಥ್ಯವನ್ನು ಹೊಂದಿದ್ದು, ತಮ್ಮ ಬರಹಗಳ ಮೂಲಕ ವಿಜ್ಞಾನ ಮತ್ತು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದವರು.
ಸಸ್ಯಶಾಸ್ತ್ರ ಅಧ್ಯಯನ ಮಾಡಿ ಬಿ. ಎಸ್ಸಿ. ಮತ್ತು ಡಿ. ಎಸ್. ಸಿ. ಪದವಿಯನ್ನು ಪಡೆದರು. ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಜಗತ್ಪ್ರಸಿದ್ಧ ಸಸ್ಯ ವಿಜ್ಞಾನಿ ಪ್ರೊ. ಬೈಲಿಯ ಹತ್ತಿರ ಸಸ್ಯಶಾಸ್ತ್ರ ಅಧ್ಯಯನ ಮುಗಿಸಿ ಅತ್ಯಂತ ಸಮರ್ಥ ಎಂಬ ಹೆಸರು ಪಡೆದರು. ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿ, ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದರು. ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಜ್ಞಾನದ ಸಂಶೋಧನೆಗಳನ್ನು ಕುರಿತು ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ. ಬಿ. ಜಿ. ಎಲ್. ಸ್ವಾಮಿಯವರು ಕೇವಲ ಸಸ್ಯ ವಿಜ್ಞಾನಿಯಾಗಿರದೆ. ಕಲೆ ಮತ್ತು ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕೆಲಸಮಾಡಿದವರು. ಸಂಶೋಧಕರಾಗಿ, ಜನಪ್ರಿಯ ವಿಜ್ಞಾನ ಲೇಖಕರಾಗಿ, ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ಒಬ್ಬ ದಕ್ಷ ಆಡಳಿತಗಾರನಾಗಿ, ಸಂಗೀತ ತಜ್ಞನಾಗಿ, ನೃತ್ಯಪಟುವಾಗಿ, ಪ್ರೌಢ ಚಿತ್ರಕಾರನಾಗಿ, ಬಹುಭಾಷಾ ಪಂಡಿತನಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದವರು.
ಒಮ್ಮೆ ಸಂದರ್ಶನವೊಂದರಲ್ಲಿ “ವಿಜ್ಞಾನ ಸಾಹಿತಿಗಳಿಗೆ ಏನಾದರೂ ಕಿವಿ ಮಾತು ಹೇಳಿ ” ಎಂದು ಸಂದರ್ಶಕ ವಿನಂತಿಸಿಕೊಂಡಾಗ ಸ್ವಾಮಿ ಅವರು “ಕಿವಿಮಾತು ಅಲ್ಲ, ಘಂಟಾಘೋಷವಾಗಿ ಹೇಳುತ್ತೇನೆ, ವಿಜ್ಞಾನ ಬಲ್ಲವರು ಕನ್ನಡದಲ್ಲೇ ಬರೆಯಿರಿ. ಓದುಗರನ್ನು ಆಕರ್ಷಿಸಿ. ಆಗ ಬದಲಾವಣೆ ಶರವೇಗದಲ್ಲಿ ಆಗುತ್ತದೆ ನೋಡಿ”. ವಿಜ್ಞಾನ ಸಾಹಿತಿಯಾಗಿದ್ದರೂ ಕನ್ನಡ ಭಾಷೆಗೆ ಮಹತ್ವ ನೀಡಿ, ಅದರ ಪ್ರಗತಿಯನ್ನು ಬಯಸಿದ ಅವರ ವಿಚಾರ ಶ್ಲಾಘನೀಯ.
ಬಾಲ್ಯದಲ್ಲಿಯೇ ವಿಪರೀತ ಸಂಗೀತದಲ್ಲಿ ಆಸಕ್ತಿ ಇದ್ದ ಸ್ವಾಮಿಯವರ ಮೇಲೆ ಅಜ್ಜಿಯ ಪ್ರಭಾವ ಅಧಿಕವಾಗಿತ್ತು. ಪ್ರೌಢಶಾಲೆಯಲ್ಲಿದ್ದಾಗಲೇ 30ರೂಪಾಯಿ ಕೊಟ್ಟು ಸೆಕೆಂಡ್ ಹ್ಯಾಂಡ್ ಪಿಟೀಲು ಖರೀದಿಸಿ ಸಂಗೀತಾಭ್ಯಾಸ ಮಾಡುತ್ತಿದ್ದುದೇ ಇದಕ್ಕೆ ಸಾಕ್ಷಿ .
ಮದರಾಸಿನಲ್ಲಿನಲ್ಲಿರುವಾಗ ಬಿಡುವಿನ ವೇಳೆಯಲ್ಲಿ ಸಂಗೀತ ಕಛೇರಿಗಳಿಗೆ ಹಾಜರಾಗಿ ಸಂಗೀತವನ್ನು ಆಲಿಸಿ, ಖ್ಯಾತ ವಿದ್ವಾಂಸರೊಂದಿಗೆ ಸಂಗೀತದ ಬಗ್ಗೆ ಚರ್ಚಿಸುತ್ತಿದ್ದ ಹವ್ಯಾಸದಿಂದಾಗಿ ಮುಂದೆ ‘ದಿ ಹಿಂದೂ’ ಪತ್ರಿಕೆಗೆ ಸಂಗೀತ ವಿಮರ್ಶಕರಾಗಿ ಲೇಖನಗಳನ್ನು ಬರೆಯಲು ಸಾಧ್ಯವಾಯಿತು. ಪುರಂದರದಾಸರ ಜನಪ್ರಿಯ ಕೀರ್ತನೆಗಳನ್ನು ತಮಿಳಿಗೆ ಅನುವಾದಿಸಿರೂ ಅದು ಪ್ರಕಟಣೆ ಕಾಣದಿರುವುದು ವಿಷಾದನೀಯ.
ಡಾ. ಬಿ. ಜಿ. ಎಲ್. ಸ್ವಾಮಿ ಇವರು ಹಲವಾರು ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಹಸುರು ಹೊನ್ನು, ಅಮೆರಿಕದಲ್ಲಿ ನಾನು, ಹೊಟ್ಟೆಯಲ್ಲಿ ದಕ್ಷಿಣಾ ಅಮೆರಿಕ, ಪ್ರಾಧ್ಯಾಪಕನ ಪೀಠದಲ್ಲಿ, ದೌರ್ಗಂಧಿಕಾಪಹರಣ, ಮೈಸೂರು ಡೈರಿ, ಬೆಳದಿಂಗಳಲ್ಲಿ ಅರಳಿದ ಮಲ್ಲೆ, ಜ್ಞಾನ ರಥ, ಬೃಹದಾರಣ್ಯಕ, ಫಲ ಶ್ರುತಿ, ಶಾಸನಗಳಲ್ಲಿ ಗಿಡಮರಗಳು ಸಸ್ಯಜೀವಿ ಪ್ರಾಣಿಜೀವಿ, ಮೀನಾಕ್ಷಿಯ ಸೌಗಂಧ ಮತ್ತು ನಡೆದಿಹೆ ಬಾಳೌ ಕಾವೇರಿ ಕೃತಿಗಳು ಪ್ರಮುಖವಾದವು.
ಇವರ ಸಸ್ಯ ಕ್ಷೇತ್ರದ ಕೊಡುಗೆಗಾಗಿ ಭಾರತ ಸರ್ಕಾರದಿಂದ ‘ಬೀರ್ಬಲ್ ಸಾಹ್ನಿ ಸ್ವರ್ಣ ಪದಕ’, ಹಸುರು ಹೊನ್ನು ಕೃತಿಗಾಗಿ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ದೊರೆತಿದೆ. “ಡಿ. ವಿ. ಗುಂಡಪ್ಪ ಮತ್ತು . ಬಿ. ಜಿ. ಎಲ್. ಸ್ವಾಮಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಗೆದ್ದ ಮೊದಲ ತಂದೆ ಮತ್ತು ಮಗನ ಜೋಡಿ. ಪ್ರಸಿದ್ದ ತಂದೆಯ ಪ್ರಸಿದ್ದ ಮಗ” ಎಂದು ಆಗಿನ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಉಮಾಶಂಕರ್ ಜೋಶಿಯವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.
ಬಿ. ಜಿ. ಎಲ್. ಸ್ವಾಮಿ ಅವರು 2 ನವಂಬರ್ 1980 ರಂದು ಇಹಲೋಕವನ್ನು ತ್ಯಜಿಸಿದರು. ಡಾ. ಸ್ವಾಮಿಯವರ ಅಮೋಘ ಸಾಧನೆಗೆ ಇವರ ಜನ್ಮದಿನದಂದು ನಮ್ಮ ಕೋಟಿ ಕೋಟಿ ನಮನಗಳು.
-ಶುಭಮಂಗಳ ಸತೀಶ್
ಶಿಕ್ಷಕರು ಹಾಸನ