ರಾಮನಗರ : ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಮಹಿಳಾ ಜಾನಪದ ಲೋಕೋತ್ಸವ’ವನ್ನು ದಿನಾಂಕ 08 ಫೆಬ್ರವರಿ 2025 ಮತ್ತು 09 ಫೆಬ್ರವರಿ 2025ರಂದು ರಾಮನಗರದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ‘ಜಾನಪದ ಲೋಕ’ದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 08 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ರಾಮನಗರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಹೆಚ್.ಎ. ಇಕ್ಬಾಲ್ ಹುಸೇನ್ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾನ್ಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಇವರು ‘ಲೋಕೋತ್ಸವ’, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ ಟಿ. ತಿಮ್ಮೇ ಗೌಡ ಇವರು ‘ಯುವ ಜಾನಪದೋತ್ಸವ’ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಕಾಶ್ ‘ಕರಕುಶಲ ಮೇಳ’ದ ಉದ್ಘಾಟನೆ ಮಾಡಲಿರುವರು. ರಾಜ್ಯ ಮಟ್ಟದ ಜನಪದ ಕಲೆಗಳ ಯುವ ಜಾನಪದೋತ್ಸವದಲ್ಲಿ ವಿವಿಧ ಕಲಾ ತಂಡಗಳಿಂದ ನಗಾರಿ ಕುಣಿತ, ಪೂಜಾ ಕುಣಿತ, ವೀರಗಾಸೆ ಕುಣಿತ, ಜಡೆ ಕೋಲಾಟ, ಕೊಂಬು ಕಹಳೆ ವಾದನ, ಕಂಸಾಳೆ ನೃತ್ಯ, ಡಮಾಮಿ ಕುಣಿತ, ಜಗ್ಗಲಿಗೆ ಮೇಳ, ಹುಲಿವೇಷ ಕುಣಿತ, ಪಟಾ ಕುಣಿತ, ಡೊಳ್ಳು ಕುಣಿತ, ಜನಪದ ಗೀತ ಗಾಯನ, ಪೂಜಾ ಕುಣಿತ, ಗೊರವರ ಕುಣಿತ, ನೀಲಗಾರರ ಪದ, ಕೀಲು ಕುದುರೆ ಪ್ರದರ್ಶನಗೊಳ್ಳಲಿದೆ.
ದಿನಾಂಕ 09 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ‘ಜನಪದ ಗಾಯನ ಮತ್ತು ಕಲೆಯಲ್ಲಿ ಮಹಿಳೆಯರ ಪಾತ್ರ : ಸುಧಾರಣೆ ಮತ್ತು ಸಂರಕ್ಷಣೆ’ ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ‘ಜನಪದ ಗೀತ ಗಾಯನೋತ್ಸವ’ ಪ್ರದರ್ಶನಗೊಳ್ಳಲಿದೆ. ಸಂಜೆ 5-30 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಬಳಿಕ 7-00 ಗಂಟೆಗೆ ವಿವಿಧ ಕಲಾ ತಂಡಗಳಿಂದ ಮಹಿಳಾ ಯಕ್ಷಗಾನ, ಗೋರುಕನ ಕುಣಿತ, ಡಮಾಮಿ ಕುಣಿತ, ತಾರ್ಲೆ ಕುಣಿತ, ಅಂಟಿಕೆ-ಪಂಟಿಕೆ, ಪಟಿ ಕುಣಿತ, ತಮಟೆ, ಹುಲಿವೇಷ, ಲಂಬಾಣಿ ನೃತ್ಯ, ಗೊರವರ ಕುಣಿತ, ಜಗ್ಗಲಿಗೆ ಪ್ರಸ್ತುತಗೊಳ್ಳಲಿದೆ.