ಕಾಸರಗೋಡು : “ಸಂಗೀತವಾಗಲಿ ಜ್ಞಾನವಾಗಲಿ ಹಠತ್ತಾಗಿ ಬರುವುದಿಲ್ಲ. ಅದನ್ನು ಕಷ್ಟಪಟ್ಟು ಕರಗತ ಮಾಡಿಕೊಳ್ಳಬೇಕು. ಸಂಗೀತ ಕಲಿಯುವುದರಿಂದ ಅಥವಾ ಕೇಳುವುದರಿಂದ ಮನಸ್ಸು ಉಲ್ಲಸಿತವಾಗುವುದರ ಜೊತೆಗೆ ಆರೋಗ್ಯವು ವೃದ್ಧಿಯಾಗುತ್ತದೆ” ಎಂದು ಖ್ಯಾತ ವೈದ್ಯರು ಮತ್ತು ಮೃದಂಗವಾದಕರಾಗಿರುವ ಡಾ. ಶಂಕರರಾಜ್ ಆಲಂಪಾಡಿಯವರು ಹೇಳಿದರು.
ಅವರು ಕಾಸರಗೋಡಿನ ಖ್ಯಾತ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾದ ರಂಗ ಚಿನ್ನಾರಿ ಹಾಗೂ ಅದರ ಸಂಗೀತ ಘಟಕ ಸ್ವರ ಚಿನ್ನಾರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಏರ್ಪಡಿಸಿದ ಭಕ್ತಿಗೀತೆಗಳ ಗಾಯನ ‘ಭಕ್ತಿ ತೀರ್ಥ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಹರಿದಾಸರು ನ್ಯಾಯವಾದಿಗಳು ಆಗಿರುವ ಶಂ ನಾಡಿಗ ರವರು ಮಾತನಾಡಿ “ರಂಗ ಚಿನ್ನಾರಿಯು ನಡೆದುಕೊಂಡು ಬರುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉಳಿದವರಿಗೆ ಮಾದರಿ ಎಂದರಲ್ಲದೆ ಗುರಿ ಸಾಧಿಸಲು ಗುರು ಬೇಕು ಗುರುವಿಲ್ಲದ ವಿದ್ಯೆಗೆ ಸಂಪೂರ್ಣ ಫಲ ಸಿಕ್ಕದು ಗುರು ಮುಖೇನ ಕಲಿತ ವಿದ್ಯೆ ಸಾರ್ಥಕ” ಎಂದು ಹೇಳಿದರು. ಮಂಗಳೂರಿನ ಖ್ಯಾತ ತುಳು ಸಿನಿಮಾ ನಿರ್ಮಾಪಕರಾಗಿರುವ ಟಿ. ಎ. ಶ್ರೀನಿವಾಸ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಸರಗೋಡಿನ ನ್ಯಾಯವಾದಿ ಹಾಗೂ ನೋಟರಿ ಸಿ. ಎನ್. ಅಶೋಕ ಕುಮಾರ್ ಮಾತನಾಡಿ “ರಂಗ ಚಿನ್ನಾರಿಯು ಕಳೆದ 18 ವರ್ಷಗಳಿಂದ ಇಲ್ಲಿ ನಾಡು ನುಡಿ ಸಂಸ್ಕೃತಿಗಾಗಿ ದುಡಿಯುತ್ತಿದ್ದು ರಂಗ ಚಿನ್ನಾರಿ ಸಂಸ್ಥೆಯು ನೀಡುವ ವಾರ್ಷಿಕ ಪ್ರಶಸ್ತಿ ಕೂಡ ಈಗ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ದಿನಾಂಕ 2 ಫೆಬ್ರವರಿ 2025ರ ಭಾನುವಾರದಂದು ಪದ್ಮಗಿರಿ ಕಲಾಕಟೀರದಲ್ಲಿ ತೆರಗಿದ ಭಕ್ತಿ ತೀರ್ಥ ಕಾರ್ಯಕ್ರಮವು ಗಣ್ಯರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಖ್ಯಾತ ಗಾಯಕರಾದ ಮುಲ್ಕಿ ರವೀಂದ್ರ ಪ್ರಭು ಅವರು ಪ್ರಾರ್ಥನೆಗೈದರು ರಂಗ ಚಿನ್ನಾರಿಯ ನಿರ್ದೇಶಕರು ‘ಭಕ್ತಿ ತೀರ್ಥ’ದ ಸಂಚಾಲಕರು ಆಗಿರುವ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರಂಗ ಚಿನ್ನಾರಿಯ ನಿರ್ದೇಶಕರಾದ ಕೆ. ಸತ್ಯನಾರಾಯಣ, ರಂಗ ಚಿನ್ನಾರಿಯ ಕಾರ್ಯದರ್ಶಿ ಕಿಶೋರ್ ಪೆರ್ಲ ಮುಂತಾದವರು ವೇದಿಕೆಯಲ್ಲಿದ್ದರು.
ನಂತರದಲ್ಲಿ ಖ್ಯಾತ ಗಾಯಕರಾದ ಅರವಿಂದ ಆಚಾರ್ಯ ಮಾಣಿಲ, ಖ್ಯಾತ ಹಿಂದುಸ್ತಾನಿ ಗಾಯಕರಾದ ಪಂಡಿತ್ ಕೃಷ್ಣೇಂದ್ರ ವಾಡೆಕರ್, ಮುಲ್ಕಿ ರವೀಂದ್ರ ಪ್ರಭು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ಹಾರ್ಮೋನಿಯಂನಲ್ಲಿ ಗಣಪತಿ ಪ್ರಭು ಮುಲ್ಕಿ, ತಬ್ಲಾದಲ್ಲಿ ರಾಜೇಶ್ ಭಾಗವತ್, ತಾಳದಲ್ಲಿ ಸ್ವಯಂ ಪ್ರಭು, ಪಾಂಡುರಂಗ ಭಟ್ ಅವರು ಸಹಕರಿಸಿದರು. ಕಲಾವಿದರೆಲ್ಲರಿಗೂ ಶಾಲು ಹೋದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು ಕಿಶೋರ ಪೆರ್ಲ ವಂದಿಸಿದರು.