ಮೋಹನ ಬೆಳ್ಳಿಪ್ಪಾಡಿ 10.02.1982ರಂದು ಚೆನ್ನಮ್ಮ ಹಾಗೂ ಕೃಷ್ಣಪ್ಪ ಪೂಜಾರಿ ದಂಪತಿಯರ ಮಗನಾಗಿ ಜನನ. ಬೆಳ್ಳಿಪ್ಪಾಡಿಯವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಹಾಗೂ ಪ್ರಚೋದನೆ ಅಣ್ಣ (ವೀರಪ್ಪ ಸುವರ್ಣ ನಡುಬೈಲು – ಹವ್ಯಾಸಿ ಯಕ್ಷಗಾನ ಕಲಾವಿದ). ಪ್ರಾರಂಭಿಕ ದಿನಗಳಲ್ಲಿ ಬೆಳ್ಳಿಪ್ಪಾಡಿ ಹಳೆಮನೆ ವೆಂಕಪ್ಪ ಗೌಡರಿಂದ ನಾಟ್ಯ ತರಬೇತಿ, ಬಳಿಕ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ ಸ್ಥಾಪಕರಾದ ಶ್ರೀ ಸಬ್ಬಣಕೋಡಿ ರಾಮ ಭಟ್ಟರಿಂದ ನಾಟ್ಯ ತರಬೇತಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಪಾತ್ರದ ಪದ್ಯಗಳು ಹಾಗೂ ಸನ್ನಿವೇಶದ ಕುರಿತು ಭಾಗವತರಿಂದ ಮಾಹಿತಿಯನ್ನು ಪಡೆದು ಪಾತ್ರ ಪೋಷಣೆಯ ಬಗ್ಗೆ ಸಹ ಕಲಾವಿದರೊಂದಿಗೆ ಚರ್ಚಿಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಬೆಳ್ಳಿಪ್ಪಾಡಿ ಅವರು ಹೇಳುತ್ತಾರೆ.
ಪಾರ್ತಿಸುಬ್ಬನ ಪ್ರಸಂಗಗಳು, ಮಾನಿಷಾದ, ಕಾಯಕಲ್ಪ, ಶ್ರೀ ದೇವಿ ಮಹಾತ್ಮೆ, ಮಹಾರಥಿ ಕರ್ಣ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ಇಂದ್ರಜಿತು, ಹನುಮಂತ, ಚಂಡಮುಂಡರು, ಅಭಿಮನ್ಯು ಇತ್ಯಾದಿ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕೊರೊನಾ ಕಾಲಘಟ್ಟದ ಬಳಿಕ ಎಲ್ಲಾ ಕ್ಷೇತ್ರದಂತೆ ಯಕ್ಷಗಾನವು ಕೂಡಾ ಬಡವಾಯಿತು ಎಂದು ಭಾವಿಸಿದ್ದ ದಿನಗಳಿದ್ದುವು. ಆದರೆ ಯಕ್ಷಗಾನ ಚೇತರಿಸುತ್ತಾ ಇದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಎಲ್ಲಾ ವಿಧದ ಅಭಿರುಚಿಯ ಪ್ರೇಕ್ಷಕರು ಇರುತ್ತಾರೆ. ಪ್ರೇಕ್ಷಕ ವಿಮರ್ಶಕನಾದರೆ (ವಿಮರ್ಶೆ ಪೂರ್ವಾಗ್ರಹ ಪೀಡಿತವಾಗಿರಬಾರದು) ಕಲಾವಿದರ ಬೆಳವಣಿಗೆಗೆ ಪೂರಕ. ಕಲಾವಿದರೂ ಇದನ್ನು ಸ್ವೀಕರಿಸಬೇಕು.
ಕದ್ರಿ ವಿಷ್ಣು ಪ್ರಶಸ್ತಿ, ವಾಮಂಜೂರಿನಲ್ಲಿ ಗೌರವ ಸಮ್ಮಾನ ಹೀಗೆ ಹಲವು ಸನ್ಮಾನ ಇವರಿಗೆ ಸಿಕ್ಕಿರುತ್ತದೆ. ಪುಸ್ತಕ ಓದುವುದು, ಯಕ್ಷಗಾನ ವೀಕ್ಷಣೆ ಇವರ ಹವ್ಯಾಸಗಳು. ಕಟೀಲು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಪಾವಂಜೆ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. 30.10.2019ರಂದು ಮೋಹನ ಬೆಳ್ಳಿಪ್ಪಾಡಿ ಅವರು ಜಯಲಕ್ಷ್ಮೀ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.