ಮೈಸೂರು : ಮಂಡ್ಯ ರಮೇಶ್ ಇವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು, ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ದಿನಾಂಕ 09 ಮತ್ತು 16 ಫೆಬ್ರವರಿ 2025ರಂದು ಸಂಜೆ ಗಂಟೆ 06-30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ‘ನಟನ ರಂಗಶಾಲೆ’ಯಲ್ಲಿ 2024-25ನೇ ಸಾಲಿನ ರಂಗಭೂಮಿ ಡಿಪ್ಲೋಮಾ ವಿದ್ಯಾರ್ಥಿಗಳ ಎರಡನೆ ಅಭ್ಯಾಸಿ ಪ್ರಯೋಗ ‘ಮಿಸ್ ಸದಾರಮೆ’ ಪ್ರದರ್ಶನಗೊಳ್ಳಲಿದೆ. ವೃತ್ತಿ ರಂಗಭೂಮಿಯ ಮಹತ್ವದ ನಾಟಕಗಳಲ್ಲಿ ಒಂದಾದ ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ ‘ಸದಾರಮಾ ನಾಟಕಂ’ ಅನ್ನು ಆಧರಿಸಿ ಆಧುನಿಕ ವಿಚಾರ ದೃಷ್ಟಿಕೋನಗಳ ಮೂಲಕ ನಾಟಕಕಾರ, ಚಿಂತಕ, ನೀನಾಸಂನ ನಿರ್ಮಾತೃ ಶ್ರೀ ಕೆ.ವಿ. ಸುಬ್ಬಣ್ಣ ಇವರು ಹೊಸದಾಗಿ ರಚಿಸಿದ ನಾಟಕ ಇದು. ನೀನಾಸಂ ತಿರುಗಾಟಕ್ಕಾಗಿ ಭಾರತದ ಹೆಸರಾಂತ ರಂಗನಿರ್ದೇಶಕ ಶ್ರೀ ಬಿ.ವಿ. ಕಾರಂತರು ಈ ನಾಟಕವನ್ನು ನಿರ್ದೇಶಿಸಿದಾಗ ಸಂಯೋಜಿಸಿದ ಹಾಡುಗಳನ್ನು ಪ್ರಸ್ತುತ ಪ್ರಯೋಗದಲ್ಲಿ ಬಳಸಲಾಗಿದ್ದು, ರಂಗ ಸಂಗೀತಗಾರ ಚಂದ್ರಶೇಖರ ಆಚಾರ್ ಸಂಗೀತವನ್ನು ಆಳವಡಿಸಿದ್ದಾರೆ. ರಂಗಾಯಣದಲ್ಲಿ ಮೂರುದಶಕಗಳಿಗೂ ಹೆಚ್ಚು ಕಾಲ ಕಲಾವಿದೆಯಾಗಿ ಸೇವೆ ಸಲ್ಲಿಸಿದ ರಂಗಕರ್ಮಿ, ನೀನಾಸಂ ಪದವೀಧರೆ ಶ್ರೀಮತಿ ಸರೋಜಾ ಹೆಗಡೆಯವರು ಈ ನಾಟಕವನ್ನು ನಿದೇಶಿಸಿದ್ದಾರೆ.