ಮಂಗಳೂರು : ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನೀಡುವ 2024-25ನೇ ಸಾಲಿನ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಲೇಖಕಿ ಕ್ಯಾಥರಿನ್ ರೋಡ್ರಿಗಸ್, ಸಮಾಜ ಸೇವೆ ಕ್ಷೇತ್ರದಲ್ಲಿ ಹಿರಿಯ ಸಮಾಜ ಸೇವಕಿ ಸುವಾಸಿನಿ ದಾಮೋದರ್ ಆಯ್ಕೆಯಾಗಿದ್ದಾರೆ.
ನಾ. ದಾಮೋದರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬಿ.ಎಂ. ರೋಹಿಣಿ, ಗಣೇಶ ಅಮೀನ್ ಸಂಕಮಾರ್ ಇವರನ್ನೊಳಗೊಂಡ ಆಯ್ಕೆ ಸಮಿತಿಯು ಇಬ್ಬರು ಸಾಧಕಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಅಬ್ಬಕ್ಕ ಉತ್ಸವ ನಡೆಸಲಾಗುತ್ತಿದ್ದು, ಅಬ್ಬಕ್ಕನ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ರೂ.25,000/- ನಗದು, ಸ್ಮರಣಿಕೆ ಒಳಗೊಂಡಿದೆ. ದಿನಾಂಕ 22 ಫೆಬ್ರವರಿ 2025ರಂದು ಉಳ್ಳಾಲ ನಗರಸಭೆ ಆವರಣದ ಮಹಾತ್ಮಾ ಗಾಂಧಿ ರಂಗಮಂದಿರದಲ್ಲಿ ನಡೆಯುವ ಅಬ್ಬಕ್ಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಕ್ಯಾಥರಿನ್ ರೋಡ್ರಿಗಸ್ ಇವರು ಎಂ.ಎ. ಪದವೀಧರರಾಗಿದ್ದು, ಸಾಹಿತ್ಯ ಕ್ಷೇತ್ರದ ಬಹುಮುಖ ಮತ್ತು ಬಹುಭಾಷಾ ಪ್ರತಿಭೆ. ಕನ್ನಡ, ತುಳು, ಕೊಂಕಣಿಯಲ್ಲಿ ಕಥೆ, ಕವನ, ಕಾದಂಬರಿ, ಪ್ರಬಂಧ, ನಾಟಕಗಳನ್ನು ರಚಿಸುವ ಮೂಲಕ ಕರಾವಳಿಯ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 56 ತುಳು ನಾಟಕ, 11 ಕೊಂಕಣಿ ನಾಟಕ, 8 ಕನ್ನಡ ನಾಟಕಗಳನ್ನು ರಚಿಸಿದ್ದಾರೆ. ತುಳುವಿನಿಂದ ಕನ್ನಡ, ಕೊಂಕಣಿಗೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಆಕಾಶವಾಣಿಯಲ್ಲಿ 160ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಉಳ್ಳಾಲ ಪೆರ್ಮನ್ನೂರು ಗ್ರಾಮದ ಬಬ್ಬುಕಟ್ಟೆ ನಿವಾಸಿಯಾದ ಸುವಾಸಿನಿ ಅವರು 80ರ ಇಳಿವಯಸ್ಸಿನಲ್ಲೂ ಇತರರ ಸೇವೆಯ ಕಾಳಜಿ ಹೊಂದಿದ್ದಾರೆ. ಮಕ್ಕಳು, ಮಹಿಳೆಯರು, ಅಶಕ್ತರು, ಬಡವರು, ರೋಗಿಗಳು, ವಿಶೇಷ ಚೇತನರು, ಅಸಹಾಯಕರು, ವಿದ್ಯಾರ್ಥಿಗಳು, ದುರ್ಬಲರ ಕಣ್ಣೀರು ಒರೆಸುವ ಕಾಯಕದಲ್ಲಿ ಬದುಕಿನ ಬಹುತೇಕ ಸಮಯ ಕಳೆದಿದ್ದಾರೆ. ಸಮಾಜಸೇವೆಗಾಗಿ 30ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದಾರೆ. ಹತ್ತು ಗ್ರಾಮಗಳಲ್ಲಿ ಮಹಿಳಾ ಮಂಡಲ, ಬಾಲವಾಡಿ ಪ್ರಾರಂಭಿಸುವಲ್ಲಿ ಇವರ ಕೊಡುಗೆ ಅಪಾರ. ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ನೂರಾರು ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ, ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಸಿದ್ದಾರೆ.
ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಕಾರ್ಯದರ್ಶಿ ರತ್ನಾವತಿ ಜೆ. ಬೈಕಾಡಿ, ಆಲಿಯಬ್ಬ, ಶಶಿಕಾಂತಿ ಬಂಗೇರ ಉಪಸ್ಥಿತರಿದ್ದರು.