ಜಿ. ಎಸ್. ಎಸ್. ಎಂದೇ ಚಿರಪರಿಚಿತರಾದ ಜಿ. ಎಸ್. ಶಿವರುದ್ರಪ್ಪನವರ ಪೂರ್ಣ ಹೆಸರು ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ. ಕನ್ನಡ ಸಾಹಿತ್ಯ ಆಚಾರ್ಯರಲ್ಲಿ ಒಬ್ಬರಾದ ಇವರು ಸಾಹಿತ್ಯ ಲೋಕದ ಸಮನ್ವಯ ಕವಿ ಎಂದು ಗುರುತಿಸಲ್ಪಟ್ಟ ಕರ್ನಾಟಕದ ಮೂರನೇ ರಾಷ್ಟ್ರಕವಿ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಅಚ್ಚುಮೆಚ್ಚಿನ ಶಿಷ್ಯ. ‘ಆಡು ಪುಟ್ಟದ ಸೊಪ್ಪಿಲ್ಲ’ ಎಂಬ ಲೋಕೋಕ್ತಿಯಂತೆ ಕವಿ, ಲೇಖಕ, ಸಂಶೋಧಕ, ನಾಟಕಕಾರ, ವಿಮರ್ಷಕ ಹೀಗೆ ವಿಶಾಲ ಸಾಹಿತ್ಯ ತೋಟದ ಮೂಲೆ ಮೂಲೆಗಳಲ್ಲೂ ತಮ್ಮ ಛಾಪು ಮೂಡಿಸಿರುವ ಕರ್ನಾಟಕದ ಸಾಹಿತ್ಯ ಕಣಜ ಎಂದರೆ ಅತಿಶಯೋಕ್ತಿಯಾಗಲಾರದು.
ಇಂತಹ ಬಹುಮುಖ ಪ್ರತಿಭೆಯ ಅಮೋಘ ವ್ಯಕ್ತಿತ್ವದ ಜಿ. ಎಸ್. ಎಸ್. ರವರು ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಶಿಕ್ಷಕರಾಗಿದ್ದ ಶಾಂತವೀರಪ್ಪ ಮತ್ತು ವೀರಮ್ಮ ದಂಪತಿಗಳ ಪುತ್ರನಾಗಿ 1926 ರ ಫೆಬ್ರವರಿ 07 ರಂದು ಜನಿಸಿದರು. ಬಡತನದಿಂದಾಗಿ ಹತ್ತನೇ ತರಗತಿ ಓದಿದ ನಂತರ ಒಂದು ಕಛೇರಿಯಲ್ಲಿ ಕೆಲಸಕ್ಕೆ ಸೇರಿದ್ದರೂ ಓದು ಮುಂದುವರಿಸಲೇಬೇಕೆಂಬ ಇವರ ತುಡಿತದಿಂದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ. ಎ. ಪದವಿ, ಮಾನಸ ಗಂಗೋತ್ರಿಯಲ್ಲಿ ಸ್ವರ್ಣ ಪದಕದೊಂದಿಗೆ ಎಂ. ಎ. ಪದವಿಯನ್ನು ಪಡೆದು ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತ ಸರ್ಕಾರದ ಸಂಶೋಧನಾ ಶಿಷ್ಯ ವೇತನದಿಂದ ‘ಸೌಂದರ್ಯ ಸಮೀಕ್ಷೆ’ ಎಂಬ ಪ್ರೌಢ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯಿಂದ ಅಲಂಕೃತರಾದರು. ಮುಂದೆ ಹೈದರಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡದ ಮುಖ್ಯಸ್ಥರಾಗಿ, ಬೆಂಗಳೂರಿನ ಜ್ಞಾನ ಭಾರತಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಹಸ್ತಪ್ರತಿಗಳ ಸಂಗ್ರಹಣೆ ಹಾಗೂ ಅವುಗಳ ರಕ್ಷಣೆಗಳ ಬಗೆಗೆ ವಿಶೇಷ ಕಾಳಜಿ ಹೊಂದಿದ್ದ ಇವರು ಹಸ್ತಪ್ರತಿ ವಿಭಾಗವನ್ನು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾರಂಭಿಸಿದರು. ಕೇವಲ ನಾಲ್ಕು ವರ್ಷಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಓಲೆಗರಿ ಹಾಗೂ ಒಂದು ಸಾವಿರಕ್ಕೂ ಹೆಚ್ಚು ಕಾಗದದ ಹಸ್ತಪ್ರತಿಗಳ ಸಂಗ್ರಹಣೆಯ ದಾಖಲೆ ಮಾಡಿರುವ ಧೀಮಂತರು.
ಇವರ ಕೃತಿಗಳು ಹಾಗೂ ಭಾವಗೀತೆಗಳು ಅಸಂಖ್ಯ. ‘ಎದೆ ತುಂಬಿ ಹಾಡಿದೆನು’, ‘ಪ್ರೀತಿ ಇಲ್ಲದ ಮೇಲೆ’, ’ಚೆಲುವು – ಒಲವು’, ‘ಅಗ್ನಿಪರ್ವ’. ‘ಸಾಮಗಾನ’ ಇವು ಕೆಲವು ಪ್ರಮುಖವಾದ ಕವನ ಸಂಕಲನಗಳು. ‘ನವೋದಯ’,’ಕನ್ನಡ ಸಾಹಿತ್ಯ ಸಮೀಕ್ಷೆ’, ‘ಕುವೆಂಪು ಪುನರಾವಲೋಕನ’, ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’ ಇವು ಪ್ರಮುಖ ವಿಮರ್ಶಾ ಗ್ರಂಥಗಳು. ‘ಅಮೇರಿಕಾದಲ್ಲಿ ಕನ್ನಡಿಗ’, ಇಂಗ್ಲೆಂಡಿನಲ್ಲಿ ಚತುರ್ಮಾಸ’, ‘ಗಂಗೆಯ ಶಿಖರದಲ್ಲಿ’, ‘ಮಾಸ್ಕೋದಲ್ಲಿ 22 ದಿನಗಳು’ ಇತ್ಯಾದಿ ಇವರ ಪ್ರವಾಸ ಕಥನಗಳು.ಕರ್ಮಯೋಗಿ (ಸಿದ್ಧರಾಮ)ಇದು ಇವರು ರಚಿಸಿದ ಜೀವನ ಬೆರಿತ್ರೆ.
ಹೀಗೆ ಜನಸಾಮಾನ್ಯರ ಮನೆ ಮನಗಳನ್ನು ಗೆದ್ದಿರುವ ಸಾಹಿತ್ಯ ಕೃಷಿಯ ಮಹಾನ್ ಯೋಗಿ ಎಂದೇ ಹೇಳಬಹುದಾದ ಇವರ ಸೇವೆ ಅನನ್ಯ. ನಿವೃತ್ತಿಯ ನಂತರವೂ ‘ಕುವೆಂಪು ಪೀಠ’ದ ಸಂದರ್ಶಕರಾಗಿ ದುಡಿದಿರುತ್ತಾರೆ. ಇವರ ಅನುಪಮ ಸೇವೆಯನ್ನು ಪರಿಗಣಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸಾದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿ ಅದ್ಯಕ್ಷರಾಗಿ, ತುಮಕೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನದ ಅದ್ಯಕ್ಷರಾಗಿ, ದಾವಣಗೆರೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿರುವ ಅಪರೂಪದ ಸಾಹಿತ್ಯ ದಿಗ್ಗಜರಾಗಿದ್ದಾರೆ . ಸೋವಿಯತ್ ಲ್ಯಾಂಡ್, ಪಂಪ, ಮಾಸ್ತಿ, ನೃಪತುಂಗ, ಅ. ನ. ಕೃ., ಪ್ರೊ. ಬೂಸನೂರುಮಠ, ರಾಜ್ಯೋತ್ಸವ, ಹೀಗೆ ಹಲವು ಪ್ರಶಸ್ತಿ ಗೌರವಗಳ ಸುರಿಮಳೆ ಇವರನ್ನು ಅಪ್ಪಿಕೊಂಡಿವೆ.
ದಶಕಗಳಿಂದ ವಿಜಯಭೇರಿ ಭಾರಿಸಿರುವ ಅವರ …’ಎದೆ ತುಂಬಿ ಹಾಡಿದೆನು ಅಂದು ನಾನು’ ಕೇಳಿದ ಭಾವಗೀತೆ ಇಂದಿಗೂ ವಿಶ್ವದ ಮೂಲೆ ಮೂಲೆಗಳಲ್ಲಿಯೂ ಜನಜನಿತವಾಗಿದೆ. ಹೀಗೆ ‘ಉಡುಗಣ ವೇಷ್ಟಿತ ಚಂದ್ರ ಸುಭೋಷಿತ ನೀಲಾಂಬರ ಸಂಚಾರಿ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ’, ‘ಕಾಣದಾ ಕಡಲಿಗೇ ಹಂಬಲಿಸಿದೆ ಮನ’, ‘ವೇದಾಂತಿ ಹೇಳಿದನು ಹೊನೆಲ್ಲ ಮಣ್ಣು ಮಣ್ಣು’, ‘ಹಾಡು ಹಾಡು ಹಾಡು ಹಳೆಯದಾದರೇನು’ ಇವೆ ಮುಂತಾದ ಗೀತೆಗಳು ಹಲವಾರು ಚಲನ ಚಿತ್ರಗೀತೆಗಳಲ್ಲಿ ಹಲವು ಗಾನ ಗಂಧರ್ವರ ಸುಶ್ರಾವ್ಯ ಧ್ವನಿಯಲ್ಲಿ ಈಗಲೂ ಮೊಳಗುತ್ತಿವೆ. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಪಂಪ ಪ್ರಶಸ್ತಿ , ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಇವು ಜಿ.ಎಸ್. ಶಿವರುದ್ರಪ್ಪನವರ ಅಮೋಘ ಸಾಹಿತ್ಯ ಸಾಧನೆಗೆ ದೊರೆತ ಪುರಸ್ಕಾರಗಳು. ‘ಪ್ರೀತಿ ಇಲ್ಲದ ಮೇಲೆ’, ‘ಅಗ್ನಿಪರ್ವ’ ‘ಎದೆ ತುಂಬಿ ಹಾಡಿದೆನು’ ಇವು ಅವರ ಜನಪ್ರಿಯ ಕವನ ಸಂಕಲನಗಳು
ಅನಾರೋಗ್ಯ ನಿಮಿತ್ತ 2013 ರ ದಿಸೆಂಬರ್ 23 ರಂದು ಸ್ವರ್ಗಸ್ಥರಾದ ಇವರ ದೇಹವನ್ನು ಅವರು ಮೊದಲೇ ಹೇಳಿದಂತೆ ಬೆಂಗಳೂರಿನ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣು ಮಾಡದೆ, ಸಕಲ ವಿಧಿ ವಿಧಾನದಂತೆ ದಹನ ಮಾಡಲಾಯಿತು. ಸಾಹಿತ್ಯ ಕ್ಷೇತ್ರದ ಆಸಾಮಾನ್ಯ ಮಹಾನುಭಾವರ ಜನುಮದಿನದಂದು ಈ ವಿಶೇಷ ಲೇಖನ ಸಮರ್ಪಣೆಯೊಂದಿಗೆ ದಿವ್ಯ ಚೇತನಕ್ಕೆ ಭಕ್ತಿಪೂರ್ವ ನಮನಗಳನ್ನು ಅರ್ಪಿಸೋಣ.