ಒಡಿಯೂರು : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರು ರಥೋತ್ಸವ ಹಾಗೂ ತುಳುನಾಡು ಜಾತ್ರೆಯ ಪ್ರಯುಕ್ತ ‘ತುಳು ಸಾಹಿತ್ಯ ಸಮ್ಮೇಳನ’ವು ದಿನಾಂಕ 06 ಫೆಬ್ರವರಿ 2025ರಂದು ಶ್ರೀ ಕ್ಷೇತ್ರದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ “ತುಳು ಭಾಷೆ ಮತ್ತು ತುಳು ಸಂಸ್ಕೃತಿ ವಿಶ್ವ ಮಾನ್ಯವಾಗಿದೆ ತುಳುವರಿಗೆ ಎಲ್ಲೆಡೆಯೂ ಗೌರವವಿದೆ ಅದನ್ನ ನಾವು ಉಳಿಸಿಕೊಳ್ಳಬೇಕು. ತುಳುವರು ತುಳು ಭಾಷೆಯನ್ನು ಮರೆಯಬಾರದು. ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ತುಳುವರು ಇಂದು ತುಳುವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದು, ತುಳು ಭಾಷೆಯ ಮಾನ್ಯತೆಗೆ ಒಗ್ಗಟ್ಟಿನ ಹೋರಾಟ ನಡೆಸಬೇಕು” ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಯುವಕರು ಕೃಷಿ ತ್ಯಜಿಸಿ ಪೇಟೆ ಕಡೆಗೆ ಅಥವಾ ವಿದೇಶಕ್ಕೆ ತೆರಳುತ್ತಿರುವುದು ಬೇಸರದ ವಿಚಾರ. ಧಾರ್ಮಿಕ, ಸಾಹಿತ್ಯ ಚಟುವಟಿಕೆಗಳ ಮೂಲಕ ಭಾಷೆಯ ಜಾಗೃತಿ ಮೂಡಿಸಲಾಗುತ್ತದೆ. ನಾಲ್ಕು ಕಾಲ ಬದುಕುವಂತ, ಉಳಿಯುವಂತ ಸಾಹಿತ್ಯ ರಚನೆಯಾಗಬೇಕು. ನೆಲಮೂಲದ ಗ್ರಾಮ ಸಂಸ್ಕೃತಿಯತ್ತ ಬರಹಗಾರರು ಗಮನಿಸಬೇಕು. ತುಳುವರನ್ನು ಓದಿನೆಡೆಗೆ ಆಕರ್ಷಿಸುವಂತ ರಚನಾತ್ಮಕ ಕೆಲಸಗಳು ಸಾಹಿತ್ಯದಲ್ಲಿ ನಡೆಯಬೇಕು. ಇಂದು ತುಳು ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಆಗುತ್ತಿದ್ದು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತುಳು ಭಾಷೆಗೆ ಮಾನ್ಯತೆ ಸಿಗುತ್ತಿಲ್ಲ” ಎಂದರು.
ಇದೇ ಸಂದರ್ಭದಲ್ಲಿ ಒಡೆಯುವರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತುಳಿಲಿತಿಯಲ್ಲಿ ಬರೆದ ಶ್ರೀಮದ್ಭಗವದ್ಗೀತೆ ಮತ್ತು ಡಾ. ವಸಂತಕುಮಾರ ಪೆರ್ಲ ಅವರ ಮಾಯಿಪ್ಪಾಡಿ ವೀರ ಪುಳ್ಕೂರ ಬಾಚೆ ತುಳು ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎಸಿ ಭಂಡಾರಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿ ಉಪಸ್ಥಿತರಿದ್ದರು.
ನಿತ್ಯಶ್ರೀ ರೈ ಪ್ರಾರ್ಥಿಸಿ, ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಡಾಕ್ಟರ್ ವಸಂತ ಕುಮಾರ್ ಪೆರ್ಲ ಸ್ವಾಗತಿಸಿ, ಪ್ರಸ್ತಾವನೆಗೈದು, ರಥೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ತುಳುಸಿರಿ ಪುರಸ್ಕೃತರನ್ನು ಪರಿಚಯಿಸಿ, ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿ, ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾದೇಶ್ ಭಂಡಾರಿ ವಂದಿಸಿದರು.