ಎಸ್. ವಿ. ಪರಮೇಶ್ವರ ಭಟ್ಟ ಇವರ ಪೂರ್ಣ ಹೆಸರು ಸದಾಶಿವ ರಾವ್ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ. ಶಿವಮೊಗ್ಗ ಜಿಲ್ಲೆಯ ಮಾಳೂರಿನಲ್ಲಿ 8 ಫೆಬ್ರವರಿ 1914ರಂದು ಜನಿಸಿದ ಇವರ ತಂದೆ ಸದಾಶಿವ ರಾವ್ ಹಾಗೂ ತಾಯಿ ಲಕ್ಷ್ಮಮ್ಮ. ಎಳವೆಯಲ್ಲಿಯೇ ನಾಟಕ, ಯಕ್ಷಗಾನ ಮತ್ತು ಓದುವುದರತ್ತ ಪರಮೇಶ್ವರರ ಮನಸ್ಸು ವಾಲಿತ್ತು. ಈ ಆಸಕ್ತಿಗೆ ನೀರುಣಿಸಿ ಬೆಳೆಸಿದವರು ತಂದೆ ತಾಯಿ. ಉಪಾಧ್ಯಾಯರಾಗಿದ್ದ ಸದಾಶಿವರಾಯರು ಪರಮೇಶ್ವರರಿಗೆ ಓದಲು ಹಲವಾರು ಪುಸ್ತಕಗಳನ್ನು ತಂದು ಕೊಡುತ್ತಿದ್ದರು ಮತ್ತು ಯಕ್ಷಗಾನ, ನಾಟಕಗಳಲ್ಲಿ ಸ್ವತಃ ಆಸಕ್ತಿ ಮತ್ತು ಹವ್ಯಾಸವಿದ್ದ ಸದಾಶಿವ ಭಟ್ಟರು ಮಗ ಪರಮೇಶ್ವರ ಭಟ್ಟರನ್ನೂ ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಮುಂದೆ ಪರಮೇಶ್ವರ ಭಟ್ಟರಿಗೆ ವಿವಿಧ ವೇಷಗಳ ಬಣ್ಣವನ್ನು ಮುಖಕ್ಕೆ ಹಚ್ಚಿ, ಗೆಜ್ಜೆ ಕಟ್ಟಿ, ರಂಗಕ್ಕೇರಿಸಿ, ಕುಣಿಸಿ ಸಂತೋಷಪಡುತ್ತಿದ್ದರು ತಂದೆ ಸದಾಶಿವ ಭಟ್ಟರು.
ಸದಾಶಿವ ಭಟ್ಟರದು ಕಲಾ ಶ್ರೀಮಂತ ಕುಟುಂಬ. ಈ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಓಂದಿಲ್ಲೊಂದು ಕಲೆಗೆ ತಮ್ಮನ್ನು ಒಡ್ಡಿಕೊಂಡವರು. ಎಸ್. ವಿ. ಪಿ. ಅವರ ಸರ್ವತೋಮುಖ ಅಭಿವೃದ್ಧಿಗೆ ತಂದೆ ಸದಾಶಿವರಾಯರೇ ಮೊದಲ ಗುರು. ಚಿಕ್ಕಪ್ಪ ಪಿಟೀಲುವಾದಕರಾಗಿದ್ದು, ಅವರ ಮಗ ಲಕ್ಷ್ಮಣ ಶಾಸ್ತ್ರಿಯವರು ಸಂಗೀತ ಕಲಿತು ಸರ್ಕಾರಿ ಶಾಲೆಯಲ್ಲಿ ಸಂಗೀತ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದವರು. ಲಲಿತ ಕಲೆಗಳಲ್ಲಿ ಇವರ ಕುಟುಂಬಕ್ಕೆ ಇದ್ದ ಆಸಕ್ತಿ ಇದರಿಂದ ವ್ಯಕ್ತವಾಗುತ್ತದೆ.
ಬೆಂಗಳೂರಿನಲ್ಲಿ ಎಂ. ಎ. ಓದಿದ ಎಸ್. ವಿ. ಪಿ.ಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಶಾಲಾ ದಿನಗಳಿಂದ ಹಿಡಿದು ಪ್ರೌಢಾವಸ್ಥೆಯ ಅಧ್ಯಯನದವರೆಗೂ ಭಾಗ್ಯವೆಂಬಂತೆ ಸಂಪರ್ಕಕ್ಕೆ ಬಂದವರೆಲ್ಲರೂ ಪಾಂಡಿತ್ಯ ಪ್ರತಿಭೆಯುಳ್ಳ ಮೇರು ವ್ಯಕ್ತಿಗಳೇ. ಕಮಕೋಡು ನರಸಿಂಹ ಶಾಸ್ತ್ರಿಗಳು ಎ. ಆರ್. ಕೃಷ್ಣಶಾಸ್ತ್ರಿಗಳು, ವಿ. ಸೀತಾರಾಮಯ್ಯ, ಡಿ. ವಿ. ಶೇಷಗಿರಿರಾಯರು ಇವರೆಲ್ಲರೂ ಗುರುವಿನ ಸ್ಥಾನದಲ್ಲಿದ್ದು ಎಸ್. ವಿ. ಪಿ. ಯವರ ಪ್ರತಿಭೆಯನ್ನು ಗುರುತಿಸಿ ಅದನ್ನು ಹೊರತರುವಲ್ಲಿ ಗುರುತರ ಪಾತ್ರ ವಹಿಸಿದವರು. ಎಚ್. ಎಂ. ಶಂಕರನಾರಾಯಣರಾಯರು, ಜಿ. ವೆಂಕಟಸುಬ್ಬಯ್ಯನವರು ಮತ್ತು ಪರಮೇಶ್ವರ ಭಟ್ಟರು ಜೊತೆಯಾಗಿ ಬಿ. ಎ. ಪದವಿ ಪಡೆದವರು. ಪರಮೇಶ್ವರ ಭಟ್ಟರು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವಾಗ ಶ್ರೇಷ್ಠ ವಿಮರ್ಶಕ ಮತ್ತು ವಿದ್ವಾಂಸರಾದ ತೀ. ನಂ. ಶ್ರೀ. ಅವರು ಗುರುಗಳಾಗಿದ್ದರು. ಮಾತ್ರವಲ್ಲದೆ ನಾ. ಕಸ್ತೂರಿ ಹಾಗೂ ಕುವೆಂಪು ಇವರುಗಳ ಜೊತೆಗೂ ಭಟ್ಟರು ಒಡನಾಟದಿಂದ ಇದ್ದವರು. ನಾ. ಕಸ್ತೂರಿ ಅವರೊಂದಿಗೆ ಸೇರಿಕೊಂಡು ಕುವೆಂಪು ಅವರ ‘ರಕ್ತಾಕ್ಷಿ’ ನಾಟಕದಲ್ಲಿ ಕೂಡ ಅಭಿನಯಿಸಿದ್ದರು. ಕುವೆಂಪುರವರು ರಚಿಸಿದ ‘ರಾಮಾಯಣ ದರ್ಶನಂ’ ಸಂಪೂರ್ಣಗೊಳ್ಳುವ ಮೊದಲು ಬರೆದ ಭಾಗವನ್ನು ಭಟ್ಟರಿಗೆ ಓದಿ ಹೇಳುತ್ತಿದ್ದರಂತೆ.
ವಿನೋದ ಪ್ರಿಯರಾದ ಎಸ್. ವಿ. ಪಿ. ಯವರ ಸರಸ ಹಾಗೂ ವಿನೋದವಾದ ಮಾತುಗಾರಿಕೆಗೆ ಕೇಳುಗರು ಮಾರುಹೋಗುತ್ತಿದ್ದರು. ಆದ್ದರಿಂದಲೇ ಉತ್ತಮ ವಾಗ್ಮಿ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದವು.
ವಿದ್ಯಾರ್ಥಿಗಳಿಂದ ಅಂತೂ ‘ವಿದ್ವಾಂಸ – ವಿನೋದಪ್ರಿಯ ಪ್ರಾಧ್ಯಾಪಕ’ರೆಂದೇ ಕರೆಸಿಕೊಂಡಿದ್ದರು. ಮಂಗಳೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭವಾದಾಗ ಅದಕ್ಕೆ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದವರು ಪರಮೇಶ್ವರ ಭಟ್ಟರು. ಆ ಕೇಂದ್ರಕ್ಕೆ ‘ಮಂಗಳಗಂಗೋತ್ರಿ’ ಎಂದು ನಾಮಕರಣ ಮಾಡಿದ ಖ್ಯಾತಿಯೂ ಇವರಿಗೇ ಸಲ್ಲುತ್ತದೆ.
ಹುಶ್ರುತ ವಿದ್ವಾಂಸರಾದ ಎಸ್. ವಿ. ಪಿ. ಯವರು ಬರಹಗಾರರು, ಕವಿಗಳು ಮತ್ತು ಭಾವಗೀತೆ, ವಚನ, ಮುಕ್ತಕ ಇತ್ಯಾದಿ ಸಾವಿರಾರು ಸಂಖ್ಯೆಯಲ್ಲಿ ಸೃಜನಶೀಲ ಬರಹಗಳನ್ನು ಬರೆದವರು. ಸಂಸ್ಕೃತದ ಕಾವ್ಯ, ನಾಟಕ, ಗೀತೆ, ಮುಕ್ತಕಗಳನ್ನು ಅನುವಾದ ಮಾಡಿ ಮರುಸೃಷ್ಟಿಕರ್ತರು ಎಂದೆನಿಸಿದವರು. ಅವರ ಅನುವಾದ ಸಾಹಿತ್ಯವು ವಿಸ್ಮಯ ಹುಟ್ಟಿಸುವಂತೆ ಇದೆ. ಅವರ ಬರಹಗಳಲ್ಲಿ ವಿಮರ್ಶೆ ಉಪನ್ಯಾಸಗಳು ಮುನ್ನುಡಿಗಳು ಸ್ವಂತ ಸೃಷ್ಟಿಯ ಗಾದೆಗಳು ಒಗಟುಗಳು ಇವೆಲ್ಲ ಸೇರಿ ಬರಹಗಳಲ್ಲಿ ಒಂದು ವೈವಿಧ್ಯತೆ ಕಂಡುಬರುತ್ತದೆ. ‘ ಸಿರಿಗನ್ನಡಿಗರ ಡಿಂಗರಿಗ’ ಎಂಬ ಕಾವ್ಯನಾಮದಲ್ಲಿ ಇವರ ಬರಹಗಳು ಪ್ರಕಟವಾಗುತ್ತಿದ್ದವು. “ಏನು ಭಟ್ಟರೆ ಬಿರುದು ಅದ್ಭುತವಾಗಿ ಗಡಗಡಿಸುತ್ತಿದೆಯಲ್ಲ.” ಎಂದು ಬರಹಗಳನ್ನು ಮೆಚ್ಚಿದ ಅ. ನ. ಕೃ ಅವರು ಹಾಸ್ಯ ಮಾಡಿದಾಗ ಭಟ್ಟರು ಆ ಕಾವ್ಯ ನಾಮವನ್ನು ಮತ್ತೆ ಉಪಯೋಗಿಸಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು . ಎಸ್. ವಿ. ಪರಮೇಶ್ವರ ಭಟ್ಟರ ರಚನೆಯ ಗೀತೇಗಳೆಲ್ಲ ಮನಸ್ಸನ್ನು ತಟ್ಟಿ, ಮತ್ತೆ ಮತ್ತೆ ಕೇಳುವಂತೆ ಮಾಡುತ್ತವೆ. ಅವರ ಕವಿತೆಗಳಲ್ಲಿ ಪದಗಳ ಲಾಸ್ಯ, ಸುಲಲಿತ ವಿನ್ಯಾಸ, ಅರ್ಥ ವಿಸ್ತಾರ ಗಮನಿಸುವಾಗ ಪ್ರತಿ ಸಲ ಕೇಳುವಾಗಲೂ ಹೊಸದಾಗಿ ಕೇಳಿದಂತೆ ನಿತ್ಯ ನೂತನವಾಗಿರುತ್ತವೆ. ಅದಕ್ಕೆ ರಾಗ ಸಂಯೋಜನೆ ಮಾಡಿದ ಸ್ವರ ಸಾಮ್ರಾಟರನ್ನು ಅಭಿನಂದಿಸಲೇಬೇಕು.
ಇವರು ವಚನಗಳನ್ನು ಸಾವಿರಾರು ಸಂಖ್ಯೆಯಲ್ಲಿ ಬರೆದು ‘ವಚನ ಬ್ರಹ್ಮ’ ಎಂದು ಕರೆಸಿಕೊಂಡರು. ವಿದ್ಯಾರ್ಥಿ ದೆಸೆಯಲ್ಲಿ ಅನುವಾದ ಕಾರ್ಯವನ್ನು ಕೈಗೆತ್ತಿಕೊಂಡ ಎಸ್. ವಿ. ಪಿ. ಯವರು ವರ್ಡ್ಸ್ ವರ್ತ ಕವಿಯ ಮೈಕೇಲ್ (ಮಾಚಯ್ಯ)ಕೃತಿಯಿಂದ ಆರಂಭಿಸಿ ವೃದ್ಧಾಪ್ಯದವರೆಗೂ ನಿರಂತರವಾಗಿ ಅನುವಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇದು ಅವರ ಮಹತ್ತರ ಸಾಧನೆ ಎಂದೇ ಹೇಳಬಹುದು.
ಕಾಳಿದಾಸನ ‘ಮೇಘದೂತ’,’ಋತುಸಂಹಾರ’ ಮುಂತಾದ ಕಾವ್ಯಗಳು ‘ಶಾಕುಂತಲ’, ‘ಮಾಳವಿಕಾಗ್ನಿಮಿತ್ರ’, ‘ಊರುಭಂಗ’ ಮೊದಲಾದ ನಾಟಕಗಳು ಎಸ್. ವಿ. ಪಿ. ಅವರ ಪಾಂಡಿತ್ಯವನ್ನು ಪರಿಚಯ ಮಾಡಿಕೊಡುತ್ತವೆ. ‘ಅಕ್ಕಮಹಾದೇವಿ’, ‘ಭಾವಗೀತೆ, ‘ಸೀಳುನೋಟ’ ಇವು ಎಸ್. ವಿ. ಪಿ. ಯವರ ಪ್ರಮುಖ ವಿಮರ್ಶಾ ಕೃತಿಗಳು. ನಿವೃತ್ತರಾದ ನಂತರ ‘ರಸ ಋಷಿ ಕುವೆಂಪು ಕವಿ ಕಾವ್ಯ ಪರಿಚಯ’ ಎಂಬ ಪ್ರೌಢ ಪ್ರಬಂಧವನ್ನೂ ರಚಿಸಿದ್ದಾರೆ. ಇದನ್ನು ಕುವೆಂಪು ಅವರು ಓದಿ ಮೆಚ್ಚಿಕೊಂಡಿದ್ದರು ಎಂಬುದು ಕೇಳಿ ಬರುತ್ತದೆ. ಮಕ್ಕಳ ಸಾಹಿತ್ಯದಲ್ಲಿ ‘ಭೂಮಿ’ ‘ಧೂಮಕೇತು’, ‘ಕಣ್ಣು ಮುಚ್ಚಾಲೆ’ ಇವು ಪ್ರಮುಖವಾದುವು.
ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸತತ ಸಾಧನೆ ಅನನ್ಯವಾದುದು. ‘ಕನ್ನಡ ಕಾಳಿದಾಸ ಮಹಾ ಸಂಪುಟ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ, ಚಾವುಂಡರಾಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ಲಭಿಸಿವೆ. ಇಷ್ಟೇ ಅಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಇವೆಲ್ಲವೂ ಇವರ ವಿದ್ವತ್ತಿಗೆ ಒಲಿದು ಬಂದ ಗೌರವಗಳು. ಯಾವ ಕೀರ್ತಿ, ಪುರಸ್ಕಾರ, ಸನ್ಮಾನಗಳನ್ನೂ ಬಯಸದೆ, ಸದ್ದು ಗದ್ದಲವಿಲ್ಲದೆ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಎಸ್. ವಿ. ಪಿ. ಯವರ ಸಾಧನೆ ಮೇರು ಮಟ್ಟದ್ದು.
ಇಂತಹ ಸಾಹಿತ್ಯ ಶ್ರೀಮಂತ ಚೇತನ 27ಅಕ್ಟೋಬರ್ 2000 ಇಸವಿಯಲ್ಲಿ ಸಾಹಿತ್ಯ ಲೋಕದಿಂದ ಮರೆಯಾಯಿತು. ಈ ಮಹಾನ್ ಚೇತನಕ್ಕೆ ಅನಂತ ನಮನಗಳು.