ಇವರ ಹೆಸರು ಗಣೇಶ್ ನಿಲವಾಗಿಲು. ಪ್ರಸ್ತುತ ಕೊಡಗು ಜಿಲ್ಲೆ ವಿರಾಜಪೇಟೆಯ ಉಪ ಖಜಾನೆಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಿಲವಾಗಿಲು ಗ್ರಾಮದ ಪಟೇಲ ಮನೆತನದ ಕೃಷ್ಣಗೌಡ ಹಾಗೂ ಯಶೋದಮ್ಮ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಲವಾಗಿಲು ಗ್ರಾಮದಲ್ಲಿ ಪಡೆದುಕೊಂಡಿದ್ದಾರೆ. ಬಳಿಕ ಹುಣಸೂರಿನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ವ್ಯಾಸಂಗವನ್ನು ಮಾಡಿದ್ದಾರೆ. ಹುಣಸೂರಿನ ಡಿ. ದೇವರಾಜ ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ವ್ಯಾಸಂಗದ 2004ನೇ ಸಾಲಿನ ಅಂತಿಮ ಬಿ.ಎ. ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ದಾರೆ. ತದಾ ನಂತರ ಚಾಮರಾಜನಗರದ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ 2005ನೇ ಸಾಲಿನ ಬಿ.ಇಡಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಹುಣಸೂರಿನ ಶಾಸ್ತ್ರಿ ಮತ್ತು ಟ್ಯಾಲೆಂಟ್ ಶಾಲೆಗಳಲ್ಲಿ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ಎರಡು ವರ್ಷಗಳ ಬಳಿಕ 2007ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಹತ್ತು ವರ್ಷಗಳ ಕಾಲ ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಕನ್ನಡ ವಿಷಯಗಳ ಪೈಕಿ ಇತಿಹಾಸ ವಿಷಯದಲ್ಲಿ ಉನ್ನತ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಮುಂದುವರೆದು ಇತಿಹಾಸ ಮತ್ತು ಕನ್ನಡ ವಿಷಯಗಳಲ್ಲಿ ಕೆ.ಸೆಟ್ ಮತ್ತು ಎನ್.ಇ.ಟಿ. ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಬಳಿಕ 2017ರಲ್ಲಿ ಕೆ.ಪಿ.ಎಸ್.ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆ ಸಹಾಯಕರಾಗಿ ಆಯ್ಕೆಯಾಗಿ ಮೈಸೂರು ತಾಲೂಕು ಪಂಚಾಯಿತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕನ್ನಡ ಸಾರಸ್ವತ ಲೋಕಕ್ಕೆ ಇವರು ಗ್ರಾಮೀಣ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ‘ಹಳ್ಳಿಗಾಡಿನ ಹೈದ’ ಕಿರು ಕಾದಂಬರಿ, ‘ಬದುಕು ನೆನಪಿನ ಕವಿತೆ’ ಎಂಬ ಕವನ ಸಂಕಲನ ಹಾಗೂ ‘ಚಕ್ರವರ್ತಿ ನೆಪೋಲಿಯನ್’ ಎಂಬ ಐತಿಹಾಸಿಕ ನಾಟಕವನ್ನು ರಚಿಸಿ ಲೋಕಾರ್ಪಣೆ ಮಾಡಿರುತ್ತಾರೆ. ತಮ್ಮ ನಾಲ್ಕನೇ ಕೃತಿ ‘ದಕ್ಷಿಣ ಸಿಂಹ ಹುಣಸೂರಿನ ಅರಸು’ ಎಂಬ ಕೃತಿಯು ಈಗಾಗಲೇ ಅಚ್ಚಿನಮನೆಯಲ್ಲಿದ್ದು ಮುಂದಿನ ದಿನಗಳಲ್ಲಿ ಕೊಡಗಿನಲ್ಲಿಯೇ ಲೋಕಾರ್ಪಣೆ ಮಾಡುವ ಆಶಯ ಹೊಂದಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಸತತ ನಾಲ್ಕು ಬಾರಿ ಕವನ ವಾಚಿಸಿರುತ್ತಾರೆ. ಅವುಗಳಲ್ಲಿ ‘ಕರುನಾಡ ಕಾವೇರಿ’ ಮತ್ತು ‘ಲಕ್ಷ್ಮಣ ತೀರ್ಥ ನದಿ’ ಎಂಬ ಕವನಗಳು ಜನ ಮನ್ನಣೆ ಪಡೆದಿರುತ್ತವೆ. ಉತ್ತಮ ಕ್ರೀಡಾಪಟು ಆಗಿರುವ ಇವರು ಬಿಡುವಿನ ಅವಧಿಯಲ್ಲಿ ಕೃಷಿಕರಾಗಿ, ಉತ್ತಮ ಸಂಘಟಕರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ, ಲೇಖಕರಾಗಿ, ಸಮಾಜ ಸೇವಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೈಸೂರು ಜಿಲ್ಲಾ ಶಾಖೆಯ ನಿರ್ದೇಶಕರಾಗಿ, ಕ್ರೀಡಾ ಕಾರ್ಯಾದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಮೈಸೂರು ಪ್ರಾಂತ್ಯ ಮಟ್ಟದ ಸರ್ಕಾರಿ ಅಧಿಕಾರಿಗಳ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರಾಗಿ, ಖಜಾನೆ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯಾದರ್ಶಿಯಾಗಿ, ಮೈಸೂರು ಜಿಲ್ಲಾ ಉಪಾದ್ಯಕ್ಷಾರಾಗಿ ಹಾಗೂ ಮೈಸೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷಾರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಹಿತ್ಯ ಸೇವೆ, ಸಂಘಟನೆ, ಸರ್ಕಾರಿ ಸೇವೆ ಹಾಗೂ ಸಮಾಜ ಸೇವೆಗಳನ್ನು ಗಮನಿಸಿದ ಸಂಘ ಸಂಸ್ಥೆಗಳಿಂದ ‘ಆದರ್ಶ ಸಮಾಜ ಸೇವಾ ರತ್ನ ಪ್ರಶಸ್ತಿ’, ‘ಸಂಗಮ ರತ್ನ ಪ್ರಶಸ್ತಿ’, ‘ದಿವ್ಯ ರತ್ನ ಪ್ರಶಸ್ತಿ’, ‘ಅಭಿರುಚಿ ಕ್ರೀಡಾ ರತ್ನ ಪ್ರಶಸ್ತಿ’, ‘ಕುವೆಂಪು ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿ’, ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ವಿಕಾಸ ಶ್ರೀ ಪ್ರಶಸ್ತಿ’, ‘ಭಾರತ ಸೇವಾ ರತ್ನ ಪ್ರಶಸ್ತಿ’ ಹಾಗೂ ‘ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಕೊಡಮಾಡಿವೆ. ಇವರು ಪತ್ನಿ ಕಾವ್ಯಶ್ರೀ, ಮಗಳು ಗಾನವಿ ಜಿ. ಮತ್ತು ಮಗ ಯಶೋಧ್ ಕೃಷ್ಣಗೌಡ ಜಿ. ಇವರೊಂದಿಗೆ ಪ್ರಸ್ತುತ ತಮ್ಮ ಊರಿನಲ್ಲಿಯೇ ನೆಲೆಸಿದ್ದಾರೆ. ಇವರ ಮುಂದಿನ ಬದುಕು ಬರಹಗಳು ಇನ್ನಷ್ಟೂ ಉನ್ನತಿಗೇರಿ ಜನಜನಿತರಾಗಲಿ ಎಂದು ಹಾರೈಸೋಣ.
ವೈಲೇಶ್ ಪಿ.ಎಸ್. ಕೊಡಗು (8861405738 ದೂರವಾಣಿ)
ಶ್ರೀ ವೈಲೇಶ್ ಪಿ.ಎಸ್. ಇವರು ಶಿವೈ ವೈಲೇಶ್ ಪಿ.ಎಸ್. ಕೊಡಗು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಾರೆ. ಸಾಹಿತ್ಯ ರಚನೆ ಮತ್ತು ಸಂಘಟನೆ ಇವರ ಪ್ರವೃತ್ತಿಯಾಗಿದೆ. ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಪರಿಷತ್ತು ಈ ಮೂರು ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ 2019ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿಯೂ ಸನ್ಮಾನಿಸಲಾಗಿದೆ. ‘ಅಮ್ಮ ನಿಮಗಾಗಿ’ ಮತ್ತು ‘ಕಣ್ಮರೆಯಾದ ಹಳ್ಳಿ’ ಇವು ಕವನ ಸಂಕಲನಗಳು, ‘ಬೊಮ್ಮಲಿಂಗನ ಸಗ್ಗ’ ಮುಕ್ತಕಗಳು, ‘ಮನದ ಇನಿದನಿ’ ಲೇಖನ ಮಾಲೆಗಳ ಕೃತಿ ಮತ್ತು ‘ಕೊಡಗಿನ ಸಾಹಿತ್ಯ ತಪಸ್ವಿಗಳು’ ಎಂಬ ಕೊಡಗಿನ ಸಾಹಿತಿಗಳ ಪರಿಚಯ ಮಾಲಿಕೆ ಭಾಗ-1. ಇವು ಇವರ ಪ್ರಕಟಿತ ಕೃತಿಗಳು. ಇನ್ನೂ ಹತ್ತು ಕೃತಿಗಳನ್ನು ತಯಾರಿಸಲು ಬೇಕಾದಷ್ಟು ಬರಹಗಳು ಶೇಖರವಾಗಿವೆ. ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಹಾಗೂ ಕೇರಳದ ಕಾಸರಗೋಡಿನ ಒಟ್ಟು ಇನ್ನೂರಕ್ಕೂ ಹೆಚ್ಚಿನ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಇತ್ತೀಚೆಗೆ ಹಲವಾರು ಛಂದೋಬದ್ಧ ಪ್ರಕಾರಗಳಲ್ಲಿ ಕಾವ್ಯ ರಚನೆ ಮಾಡುತ್ತಿರುವ ಇವರು ಮುಕ್ತಕಗಳು, ಗಝಲ್, ನವ್ಯ ವಚನ ಸಾಹಿತ್ಯ, ನವ್ಯ ಕವಿತೆಗಳನ್ನೂ ರಚಿಸಿದ್ದಾರೆ. ಲಲಿತ ಪ್ರಬಂಧಗಳು, ವೈಚಾರಿಕ ಲೇಖನಗಳು, ಕೊಡಗಿನ ಕವಿ ಸಾಹಿತಿಗಳ ಪರಿಚಯ, ಹಾಯ್ಕು, ಟಂಕಾ, ರುಬಾಯಿ, ದೇಶ ಭಕ್ತಿ ಗೀತೆಗಳು, ಭಕ್ತಿ ಗೀತೆಗಳು, ಲಾವಣಿಗಳು, ಜಾನಪದ ಶೈಲಿಯ ಗೀತೆಗಳನ್ನು ಇತ್ಯಾದಿ ಇವರ ರಚನೆಗಳು. ಶಕ್ತಿ ಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿದ್ದಾರೆ. ಇವರು ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಮುಕ್ತಕ ಸಾಹಿತ್ಯ ಸಿಂಧು ಪ್ರಶಸ್ತಿ, ಸಾಹಿತ್ಯ ರತ್ನ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಇತ್ತೀಚೆಗೆ ಕೃಷ್ಣರಾಜನಗರದ ಕಪ್ಪಡಿ ಕ್ಷೇತ್ರದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.