ಬದಿಯಡ್ಕ : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿನಾಂಕ 09 ಫೆಬ್ರವರಿ 2025ರಂದು ಬದಿಯಡ್ಕದ ಗಣೇಶ ಪೈಗಳ ಮನೆಯಲ್ಲಿ ದಿ. ಬಿ. ಕೃಷ್ಣ ಪೈಯವರ ‘ಸ್ಮರಣಾಂಜಲಿ’ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಡಾ. ಬೇ. ಸೀ ಗೋಪಾಲಕೃಷ್ಣ ಭಟ್ “ಕಾಸರಗೋಡು ಜಿಲ್ಲೆಯ ಬದಿಯಡ್ಕವನ್ನು ಸಾಂಸ್ಕೃತಿಕ ನಗರಿಯಾಗಿ ರೂಪಿಸಿದವರಲ್ಲಿ ಬಿ. ಕೃಷ್ಣ ಪೈಗಳೂ ಪ್ರಮುಖರು. ಇವರು ವಿನೂತನ ಶೈಲಿಯಲ್ಲಿ ಕಾರ್ಯಕ್ರಮ ಸಂಯೋಜಿಸುವಲ್ಲಿ ನಿಸ್ಸೀಮರು. ಸ್ನೇಹಮಯ ಹಾಸ್ಯಭರಿತ ಸ್ವಭಾವ, ಸರ್ವಜನ ಸಮಭಾವ, ಅಶುಕವಿತ್ವವು ಯುವ ಸಾಹಿತಿಗಳಿಗೆ ಆದರ್ಶ” ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್ ಕಾಸರಗೋಡು ಮಾತನಾಡಿ, “ಕೃಷ್ಣ ಪೈಗಳು ಅನೇಕ ಪ್ರತಿಭೆಗಳನ್ನು ಶೋಧಿಸಿ ಗೆದ್ದಿದ್ದಾರೆ. ಎಲ್ಲಾ ಕಡೆಗಳಲ್ಲಿ ಎಳೆಯ ಮಕ್ಕಳ ಕವಿ ಮನಸ್ಸುಗಳನ್ನು ಅರಳಿಸುವ ಯತ್ನಗಳು ನಡೆಯಬೇಕು. ಇದರಿಂದ ಮಕ್ಕಳ ಮಾನಸಿಕ ದೃಢತೆ ಹೆಚ್ಚುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಉಪಜಿಲ್ಲಾಧಿಕಾರಿ ಶಶಿಧರ ಶೆಟ್ಟಿ ಮಾತನಾಡಿ, “ಚುಟುಕು ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯ. ಮಕ್ಕಳು ಹಿರಿಯ ಸಾಹಿತಿಗಳ ಕೃತಿಗಳನ್ನು ಓದಿ, ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು” ಎಂದು ಹೇಳಿದರು.
ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯರು ಮಾತನಾಡಿ, “ಆತಿಥ್ಯವೇ ಕೃಷ್ಣ ಪೈಗಳ ಮನೆಯ ವಿಶೇಷತೆ. ಈಗಲೂ ಅದು ಮುಂದುವರಿದಿದೆ. ಉತ್ತಮ ಹಾಡುಗಾರ, ಸಂಘಟಕ, ಬಹುಭಾಷಾ ಕವಿಯಾಗಿ ಕೃಷ್ಣ ಪೈಗಳು ಜನಾನುರಾಗಿಯಾಗಿದ್ದರು” ಎಂದು ಹೇಳಿದರು.
ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ. ಕೆ. ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, “ಹಿರಿಯರ ಸಾರ್ಥಕ ಬದುಕಿನ ಹಾದಿ ಕಿರಿಯರಿಗೆ ಸಾಧನೆ ಮೆರೆಯಲು ಪ್ರೇರಣೆಯಾಗುತ್ತದೆ. ಕಾಸರಗೋಡು ಜಿಲ್ಲೆಯಲ್ಲಿ ಮಕ್ಕಳನ್ನು ಸೇರಿಸಿಕೊಂಡು, ನಿರಂತರವಾಗಿ ಕನ್ನಡ ಸಾಹಿತ್ಯ ಜಾಗೃತಿ ಮಾಡಲಾಗುವುದು. ಇದಕ್ಕೆ ಕನ್ನಡಿಗರ ಸಹಕಾರದ ಅಗತ್ಯ ಇದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ. ಕೃಷ್ಣ ಪೈಗಳ ಭಾವಚಿತ್ರಕ್ಕೆ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕೃಷ್ಣ ಪೈಗಳ ಪುತ್ರ ಗಣೇಶ ಪೈ ದಂಪತಿಯನ್ನು ಅಭಿನಂದಿಸಲಾಯಿತು. ಬಳಿಕ ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಅವರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಿತು. ಸುಮಾರು 13 ಮಂದಿ ಕವಿಗಳು ಚುಟುಕು ವಾಚನ ಮಾಡಿದರು. ಬಳಿಕ ಲಕ್ಷ್ಮಿ ಜಿ. ಪೈ, ಬಿ. ಉನ್ನತಿ ಪೈ ಹಾಗೂ ತೇಜಸ್ ಪೈ ಇವರಿಂದ ಗೀತ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಭವನ ಕಾರ್ಯದರ್ಶಿ ವಸಂತ ಕೆರೆಮನೆ ಇದ್ದರು. ಬಿ. ಉನ್ನತಿ ಪೈ ಪ್ರಾರ್ಥನೆ ಹಾಡಿ, ಬದಿಯಡ್ಕ ಗಣೇಶ ಪೈ ಸ್ವಾಗತಿಸಿ, ಶಾರದಾ ಮೊಳೆಯಾರ್ ಎಡನೀರು ವಂದಿಸಿ, ಪ್ರೊ. ಲತಾ ಪ್ರಕಾಶ ರಾವ್ ನಿರೂಪಿಸಿದರು.