27 ಮಾರ್ಚ್ 2023, ಮಂಗಳೂರು: ಸಂಘಟಕ, ಕವಿ ಕಾ.ವೀ.ಕೃಷ್ಣದಾಸ್ ಅವರ 5ನೇ ಕೃತಿ, ಇಂಗ್ಲಿಷ್ ಹಾಯ್ಕುಗಳ ಸಂಕಲನ ‘ದಿ ಡಿವೋಷನ್’ ಭಾನುವಾರ ಕೊಂಚಾಡಿಯ ಶಿವಪ್ರಸಾದ್ ಗೋಲ್ಡ್ ವಸತಿ ಸಮುಚ್ಚಯದ ಆವರಣದಲ್ಲಿ ಏರ್ಪಡಿಸಿದ್ದ ಅವರ ಮಗಳು ‘ಭಕ್ತಿ’ ಯ ಪ್ರಥಮ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಲೋಕಾರ್ಪಣೆಗೊಂಡಿತು. ಕಾ.ವೀ.ಕೃಷ್ಣದಾಸ್ ಅವರ ಮಗಳು ಕುಮಾರಿ ಭಕ್ತಿ ಕೆ. ದಾಸ್ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಹಿರಿಯ ಸಾಹಿತಿಗಳಾದ ಇರಾ ನೇಮು ಪೂಜಾರಿ, ಭಾಸ್ಕರ್ ರೈ ಕುಕ್ಕುವಳ್ಳಿ, ಹರೀಶ ಸುಲಾಯ ಒಡ್ಡಂಬೆಟ್ಟು, ರಘು ಇಡ್ಕಿದು, ಪತ್ರಕರ್ತ ಕವಿ ರಾಜೇಶ್ ಶೆಟ್ಟಿ ದೋಟ, ವ.ಉಮೇಶ್ ಕಾರಂತ್, ಲತಾ ಕೃಷ್ಣದಾಸ್, ರಜತ್ ಕೆ. ದಾಸ್, ಗಾಯಕ ಜಗದೀಶ್ ಶಿವಪುರ ಉಪಸ್ಥಿತರಿದ್ದರು. ಕವಯತ್ರಿ ಗೀತಾ ಲಕ್ಷ್ಮೀಶ್, ಹಿರಿಯ ಕವಯತ್ರಿ ಸುಧಾ ನಾಗೇಶ್, ರಾಜೇಶ್ವರಿ ಬಜ್ಪೆ, ಬದ್ರುದ್ದೀನ್ ಕೂಳೂರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೂ ಮುನ್ನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹ ಸಂಸ್ಥೆ ಅಖಿಲ ಭಾರತ ಕವಿಗಳು ಮತ್ತು ಲೇಖಕಿಯರ ಕ್ಷೇಮಾಭಿವೃದ್ಧಿ ಒಕ್ಕೂಟದಿಂದ ಸಾವಿರ ಕವಿಗಳನ್ನು ಸಂಪರ್ಕಿಸುವ ಯೋಜನೆ ‘ಸಹಸ್ರಬಾಹು’ ಕಾವ್ಯ ಸರಣಿಗೆ ಚಾಲನೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ವಹಿಸಿ ‘ಹಿರಿಯ ಸಾಹಿತಿಗಳು ಕಿರಿಯ ಸಾಹಿತಿಗಳಿಗೆ ಮಾರ್ಗದರ್ಶಕರಾಗಿರುತ್ತಾರೆ. ಅವರ ಕೃತಿಗಳನ್ನು ಓದುವುದರ ಮೂಲಕವಷ್ಟೇ ಬೆಳೆಯಲು ಸಾಧ್ಯ. ಕವಿತೆಯ ಗುಣಮಟ್ಟದಿಂದ ಕವಿಯ ಘನತೆ ಹೆಚ್ಚುತ್ತದೆ’ ಎಂದರು.
ಈ ವೇಳೆ ಇರಾ ನೇಮು ಪೂಜಾರಿ, ಭಾಸ್ಕರ್ ರೈ ಕುಕ್ಕುವಳ್ಳಿ, ರಘು ಇಡ್ಕಿದು, ರಾಜೇಶ್ ಶೆಟ್ಟಿ ದೋಟ, ವ. ಉಮೇಶ್ ಕಾರಂತ್, ಸುಧಾ ನಾಗೇಶ್, ರಾಜೇಶ್ವರಿ ಹೆಚ್ ಬಜ್ಪೆ, ಗೀತಾ ಲಕ್ಷ್ಮೀಶ್, ಬದ್ರುದ್ದೀನ್ ಕೂಳೂರು, ಸುಮಂಗಲ ದಿನೇಶ್, ಅರ್ಚನಾ ಎಂ. ಕುಂಪಲ ಅವರು ಕವನ ವಾಚನ ಮಾಡಿದರು. ಜಗದೀಶ್ ಶಿವಪುರ ಪ್ರಾರ್ಥಿಸಿ, ಪ್ರಶಾಂತ್ ಸಿ.ಕೆ. ನಿರೂಪಿಸಿದರು.