ಬೆಂಗಳೂರು: ‘ಪದ’ ಸಾಂಸ್ಕೃತಿಕ ಸಂಘಟನೆ ಏರ್ಪಡಿಸಿದ್ದ ‘ಡಾ. ಬಂಜಗೆರೆ ಜಯಪ್ರಕಾಶ್ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ’ ಎಂಬ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವು ದಿನಾಂಕ 11 ಫೆಬ್ರವರಿ 2025ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ ‘ಹಿಂದಿನ ತಲೆಮಾರು ಮತ್ತು ಹೊಸ ತಲೆಮಾರುಗಳ ಪರಸ್ಪರ ಭೇಟಿಯಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಚಲನಶೀಲತೆ ಬರುತ್ತದೆ. ಬಂಜಗೆರೆ ಅವರು ಹೋರಾಟ ಮತ್ತು ಸಾಹಿತ್ಯವನ್ನು ಒಂದುಗೂಡಿಸಿದ ವಿಧಾನ ಹಾಗೂ ಎರಡರಲ್ಲೂ ಸಮಚಿತ್ತವನ್ನು ಉಳಿಸಿಕೊಂಡಿರುವುದು ವಿಶಿಷ್ಟವಾದ ಸಂಗತಿ” ಎಂದು ಹೇಳಿದರು.
ಸಾಹಿತಿ ಕೆ. ಮರುಳಸಿದ್ದಪ್ಪ ಮಾತ್ರನಾಡಿ “ಬಂಜಗೆರೆ 90ರ ದಶಕದಲ್ಲಿ ಕರ್ನಾಟಕ ಪ್ರತ್ಯೇಕ ರಾಷ್ಟ್ರ ಎಂದು ಗೋಡೆ ಬರಹ ಚಳವಳಿ ಮಾಡಿದ್ದರು. ಆಗ ಏನು ಆಗಲಿಲ್ಲ. ಅವರ ‘ಆನುದೇವಾ ಹೊರಗಣವನು’ ಭಾರಿ ಚರ್ಚೆಗೆ ಕಾರಣವಾಯಿತು ಮತ್ತು ಪ್ರತಿರೋಧ ಸಹ ಎದುರಿಸಿತ್ತು. ಆದರೆ ಅವರ ಮೇಲೆ ಹಲ್ಲೆ ನಡೆಯಲಿಲ್ಲ. ಈಗ ಅಂತಹ ಮಾತನಾಡಲು ಧೈರ್ಯ ಮಾಡು ವುದಿರಲಿ, ಪ್ರಾಣಕ್ಕೂ ಮಾರಕವಾಗ ಬಹುದು ಎಂಬ ಆತಂಕದಲ್ಲಿ ಇದ್ದೇವೆ” ಎಂದು ಕಳವಳ ವ್ಯಕ್ತಪಡಿಸಿದರು.
ಸಮಾರೋಪದಲ್ಲಿ ಮಾತನಾಡಿದ ಸಾಹಿತಿ ಸಿದ್ಧನಗೌಡ ಪಾಟೀಲ “ಬಂಡಾಯ ಸಾಹಿತ್ಯ ಸಂಘಟನೆ ನಡೆದಾಗಿನಿಂದಲೂ ಜಯಪ್ರಕಾಶ್ ಅವರನ್ನು ನೋಡಿದ್ದೇನೆ. ಬೆಂಗಳೂರಿನಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆ ವಿರೋಧಿಸಿ ಹೋರಾಟ ಮಾಡಿದ ನಮ್ಮನ್ನು ಬಂಧಿಸಿದ್ದರು. ಅನಾರೋಗ್ಯದಲ್ಲೂ ಅವರು ಭಾಗವಹಿಸಿದ್ದರು” ಎಂದರು.
ಇದೇ ಸಂದರ್ಭದಲ್ಲಿ ಬಂಜಗೆರೆ ಜಯಪ್ರಕಾಶ್ ಮತ್ತು ಪತ್ನಿ ನಾಗರತ್ನಾ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಅವರ ಬದುಕು, ಸಂಶೋಧನೆ ಹಾಗೂ ಹೋರಾಟವನ್ನು ಅವರ ಆಪ್ತರು, ಒಡನಾಡಿಗಳು ಕಾರ್ಯಕ್ರಮದಲ್ಲಿ ಮೆಲುಕು ಹಾಕಿದರು. ಅವರ ಬದುಕು-ಒಡನಾಟ ಹಾಗೂ ಸಂಶೋಧನೆ ಕುರಿತು ಗೋಷ್ಠಿಗಳು ನಡೆದವು. ಲೇಖಕರೊಂದಿಗೆ ಜಯಪ್ರಕಾಶ್ ಸಂವಾದ ನಡೆಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಲ್. ಎನ್. ಮುಕುಂದರಾಜ್, ರಂಗಕರ್ಮಿ ರಾಜಪ್ಪ ದಳವಾಯಿ, ಸಾಹಿತಿ ಬಸವರಾಜ ಸಬರದ ಮಾತನಾಡಿದರು. ಪದ ಸಂಘಟನೆಯ ಕಾರ್ಯದರ್ಶಿ ದೇವರಾಜ್, ಶಿವಲಿಂಗ ಪ್ರಸಾದ್ ನಿರೂಪಿಸಿದರು.