ಹೆಬ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೆಬ್ರಿ ತಾಲೂಕು ಘಟಕ ಇದರ ವತಿಯಿಂದ ಸ್ವಾತಂತ್ರ್ಯ ಸೇನಾನಿ ಎಂ.ಡಿ. ಅಧಿಕಾರಿ ವೇದಿಕೆಯಲ್ಲಿ ‘ಹೆಬ್ರಿ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ -2025’ವನ್ನು ದಿನಾಂಕ 16 ಫೆಬ್ರವರಿ 2025ರಂದು ಶಿವಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7-30 ಗಂಟೆಗೆ ದೇವಿದಯಾ ಕಲಾ ತಂಡದ ಶ್ರೀಮತಿ ಶೈಲಜಾ ಶಿವಪುರ ಮತ್ತು ತಂಡದವರಿಂದ ಕನ್ನಡ ಭಾವಗೀತೆಗಳ ಗಾಯನ ಪ್ರಸ್ತುತಗೊಳ್ಳಲಿದೆ. ಬೆಳಗ್ಗೆ ರಾಷ್ಟ್ರ ಮತ್ತು ಪರಿಷತ್ತಿನ ಧ್ವಜಾರೋಹಣ ಹಾಗೂ ಶಿವಪುರ ಗ್ರಾಮ ಪಂಚಾಯತಿಯ ವಠಾರದಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಶ್ರೀಮತಿ ಪಿ. ಜಯಲಕ್ಷ್ಮೀ ಅಭಯ ಕುಮಾರ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಮಾನ್ಯ ಸಚಿವರಾದ ಸುನಿಲ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಮಂಜುನಾಥ ಕೆ. ಶಿವಪುರ ಇವರ ‘ಪ್ರಬುದ್ಧರಾಗೋಣ ಬನ್ನಿ’ ಹಾಗೂ ವಿಜಯಲಕ್ಷ್ಮೀ ಆರ್. ಕಾಮತ್ ಇವರ ‘ಜೀವನ ಸಂಗೀತ’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಅಪರಾಹ್ನ ಗಂಟೆ 12-20ಕ್ಕೆ ಗೋಷ್ಠಿ -01ರಲ್ಲಿ ‘ವಿವಿಧ ಇಲಾಖೆಗಳಲ್ಲಿ ಕನ್ನಡ’ ವಿಷಯದ ಬಗ್ಗೆ ವಿಚಾರ ಮಂಡನೆ ಹಾಗೂ 2-00 ಗಂಟೆಗೆ ಗೋಷ್ಠಿ -02ರಲ್ಲಿ ‘ಕವಿಗೋಷ್ಠಿ’ ನಡೆಯಲಿದೆ. ಸಂಜೆ ಗಂಟೆ 3-20ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದವರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ವೃಂದದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರಸ್ತುತಗೊಳ್ಳಲಿದೆ.