ಕಾರವಾರ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಲಕ್ಕಿ ಸಮುದಾಯದ ಸಾಕ್ಷಿ ಪ್ರಜ್ಞೆಯಂತಿದ್ದ ಜಾನಪದ ಹಾಡುಗಳನ್ನು ಹಾಡುವ ಜೊತೆಗೆ ಮದ್ಯಪಾನ ವಿರೋಧಿ ಹೋರಾಟದಿಂದ ಖ್ಯಾತಿ ಗಳಿಸಿದ್ದ ಅಂಕೋಲಾ ತಾಲೂಕು ಬಡಗೇರಿಯ ಸುಕ್ರಿ ಬೊಮ್ಮ ಗೌಡ ಇವರು ದಿನಾಂಕ 13 ಫೆಬ್ರವರಿ 2025ರಂದು ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿದ್ದ ಸುಕ್ರಿ ಬೊಮ್ಮಗೌಡ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಮುಂಜಾನೆ 4 ಗಂಟೆ ಸಮಯಕ್ಕೆ ಅಂಕೋಲದ ಬಡಿಗೇರಿಯ ಅವರ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಇವರು ವಿದ್ಯಾಭ್ಯಾಸ ಮಾಡದಿದ್ದರೂ ಹಾಲಕ್ಕಿ ಜನಾಂಗದ ಜನಪದ ಹಾಡುಗಳನ್ನು ಹಾಡುವ ಮೂಲಕ ಹಳ್ಳಿ ಸೊಗಡನ್ನ ದಿಲ್ಲಿಗೆ ಕೊಂಡೊಯ್ದ ಕೀರ್ತಿ ಹೊಂದಿದ್ದಾರೆ. ಸುಮಾರು ಐದು ಸಾವಿರ ಹಾಲಕ್ಕಿ ಹಾಡುಗಳನ್ನು ನೆನಪಿನಲ್ಲಿಟ್ಟುಕೊಂಡು ಹಾಡುತ್ತಿದ್ದರು. ಇವುಗಳಲ್ಲಿ 100 ವರ್ಷಗಳಷ್ಟು ಹಿಂದಿನ ಹಾಡುಗಳೂ ಇವೆ. ಇವರನ್ನು ‘ಹಾಲಕ್ಕಿ ಹಾಡುಗಳ ಕೋಗಿಲೆ’ ಎಂದು ಕರೆಯುತ್ತಾರೆ. ಕರ್ನಾಟಕ ಜಾನಪದ ಅಕಾಡಮಿ ಸುಕ್ರಜ್ಜಿಯ ಹಾಡುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟ ಮಾಡಿದೆ. ಕಾರವಾರದ ‘ಅಖಿಲ ಭಾರತ ರೇಡಿಯೋ’ ಇವರ ಹಾಡುಗಳ ಧ್ವನಿ ಮುದ್ರಣ ಮಾಡಿ ಸಂರಕ್ಷಣೆ ಮಾಡಿದೆ.
ಅವರು ಜಾನಪದ ಕಲೆಗೆ ನೀಡಿದ ಕೊಡುಗೆಗಳಿಗಾಗಿ ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವ ಕಾರ್ಯಕ್ಕಾಗಿ ಹಲವು ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. ಇದಲ್ಲದೇ ಮದ್ಯ ಮುಕ್ತ ಗ್ರಾಮ ಮಾಡುವ ಹೋರಾಟದಲ್ಲಿ ಭಾಗಿಯಾದ ಇವರು ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಿದರು.
ಜನಪದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಸುಕ್ರಿ ಬೊಮ್ಮ ಗೌಡ ನೀಡಿರುವ ಕೊಡುಗೆ ಗುರುತಿಸಿ, 1999ರಲ್ಲಿ ಜಾನಪದ ಶ್ರೀ ಪ್ರಶಸ್ತಿ, 2006ರಲ್ಲಿ ನಾಡೋಜ ಪ್ರಶಸ್ತಿ, 2017ರಲ್ಲಿ ಭಾರತ ಸರ್ಕಾರವು ‘ಪದ್ಮಶ್ರೀ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಸ್ಥಳೀಯ ಬುಡಕಟ್ಟು ಜನಾಂಗದ ಸಂಸ್ಕೃತಿ ಸಂರಕ್ಷಣೆಗಾಗಿ 1988ರಲ್ಲಿ ಕರ್ನಾಟಕ ಸರ್ಕಾರ ಪ್ರಶಸ್ತಿ, 2006ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ನಾಡೋಜ ಗೌರವ ಮತ್ತು 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದೇಶ ಹಾಗೂ ರಾಜ್ಯದ ಹಲವು ಪ್ರತಿಷ್ಠಿತ ಪ್ರಶಸ್ತಿ ಸುಕ್ರಿ ಬೊಮ್ಮ ಗೌಡ ಅವರನ್ನು ಅರಸಿಕೊಂಡು ಬಂದಿವೆ.