ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಳ್ಳಾಲ ತಾಲೂಕಿನ ಪಿಲಾರ್ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ದಿನಾಂಕ 16 ಫೆಬ್ರವರಿ 2025ರಂದು ಬೆಳಗ್ಗೆ 9-00 ಗಂಟೆಗೆ ಪಿಲಾರ್‌ನ ಪಂಜಂದಾಯ ಸೇವಾ ಸನ್ನಿಧಿಯ ಮೈದಾನದಲ್ಲಿ ‘ತುಳು ಪರ್ಬ’ ಜಾನಪದ ಸಿರಿ ಪರಿಚಯ, ಗ್ರಾಮೀಣ ಆಟಕೂಟವನ್ನು ಆಯೋಜಿಸಲಾಗಿದೆ.
ಪಿಲಾರ್ ಯುವಕ ಮಂಡಲದ ಸ್ವರ್ಣ ಮಹೋತ್ಸವದ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಪ್ರೊ. ರಾಧಾಕೃಷ್ಣ ಕೆ. ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ಹಿರಿಯ ಪಾರ್ದನಗಾರ್ತಿ ಕುತ್ತಾರ್ ತಿಮ್ಮಕ್ಕ ಅವರು ‘ಪಾಡ್ಡನ ಪರಿಚಯ’ ಮಾಡಿಕೊಡುವರು. ಡೋಲು ವಾದಕ ರಮೇಶ್ ಮಂಚಕಲ್ ಅವರು ತುಳುನಾಡಿನ ಸಾಂಪ್ರದಾಯಿಕ ಡೋಲಿನ ಬಗ್ಗೆ ಹಾಗೂ ದುಡಿ ವಾದಕ ಶೀನಾ ಧರ್ಮಸ್ಥಳ ಅವರು ಸಾಂಪ್ರದಾಯಿಕ ದುಡಿ ವಾದನದ ಬಗ್ಗೆ ಪ್ರಾತ್ಯಕ್ಷಿಕೆ, ಪರಿಚಯ ಮಾಡಿಕೊಡುವರು.
ಇದೇ ವೇಳೆ ಹಿರಿಯರಿಂದ ಜನಪದ ಕತೆಗಳ ದಾಖಲೀಕರಣ ನಡೆಯಲಿದೆ. ಜಾನಪದ ಸಿರಿ ವಿಚಾರ ವಿನಿಮಯದ ಬಳಿಕ ಸ್ಥಳೀಯರಿಗಾಗಿ ಗ್ರಾಮೀಣ ಆಟೋಟಗಳು ನಡೆಯಲಿವೆ. ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಪುರಸಭಾ ಸದಸ್ಯ ಪುರುಷೋತ್ತಮ ಶೆಟ್ಟಿ ಪಿಲಾರ್, ಚೆಂಬುಗುಡ್ಡೆ ಜುಮ್ಮಾ ಮಸೀದಿಯ ಅಧ್ಯಕ್ಷ ಇಮ್ಮಿಯಾಜ್ ಪಿಲಾರ್, ನಿವೃತ್ತ ಆಹಾರ ನಿರೀಕ್ಷಕ ಚಂದ್ರಶೇಖರ ಗಟ್ಟಿ ಮಜಲ್, ಉದ್ಯಮಿ ಚಂದ್ರಹಾಸ ಭಾಗವಹಿಸುವರು. ಪಿಲಾರ್ ಯುವಕ ಮಂಡಲದ ಅಧ್ಯಕ್ಷ ಯಶವಂತ ಶೆಟ್ಟಿ ಗೌರವಾಧ್ಯಕ್ಷ ಗಜಾನಂದ ಗಟ್ಟಿ ಪ್ರಧಾನ ಕಾರ್ಯದರ್ಶಿ ಧನರಾಜ್ ಉಪಸ್ಥಿತರಿರುವರು.