ಮಂಗಳೂರು : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ 40ನೇ ವರ್ಷದ ಆಚರಣೆಯ ‘ನಲ್ವತ್ತರ ನಲಿವು’ ಕಾರ್ಯಕ್ರಮದ ಅಂಗವಾಗಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ‘ಚಾರುವಸಂತ’ ನಾಟಕದ ಪ್ರದರ್ಶನವು ದಿನಾಂಕ 08 ಫೆಬ್ರವರಿ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಹಿರಿಯ ನೃತ್ಯ ಗುರುಗಳಾದ ಉಳ್ಳಾಲ ಮೋಹನ ಕುಮಾರ್, ಪ್ರೊ. ಬಿ.ಎ. ವಿವೇಕ್ ರೈ, ಕ.ಸಾ.ಪ. ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಆಳ್ವಾಸ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ವಿವೇಕ್ ಆಳ್ವ, ದ.ಕ. ಜಿಲ್ಲಾ ಕ.ಸಾ.ಪ. ಇದರ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಪಂಚಜ್ಯೋತಿ ಪ್ರಜ್ವಲನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ್ ರೈ ಮಾತನಾಡಿ “ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ವಿದ್ಯೆಯ ಜತೆಗೆ ಸಂಸ್ಕೃತಿಯನ್ನು ಕಲಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಬದುಕು ಕಲಿಸುವ ರಂಗಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಿದೆ. ನಾನು ಇದುವರೆಗೆ ಕಂಡ ನಾಟಕಗಳಲ್ಲಿ ‘ಚಾರುವಸಂತ’ ನಾಟಕ ಶ್ರೇಷ್ಠ ನಾಟಕ. ಇದೊಂದು ದೃಶ್ಯಕಾವ್ಯ. ಜೀವನ್ ರಾಂ ನಿಜಕ್ಕೂ ಒಬ್ಬ ರಂಗಮಾಂತ್ರಿಕರೇ ಆಗಿದ್ದಾರೆ. ನಾಟ್ಯಾಂಜಲಿ ಸಂಸ್ಥೆಯ ನಲವತ್ತರ ಸಂಭ್ರಮದಲ್ಲಿ ವಿದ್ವಾನ್ ಚಂದ್ರಶೇಖರ ನಾವಡರು ಚಾರುವಸಂತ ನಾಟಕವನ್ನು ಸಂಘಟಿಸಿರುವುದು ಪ್ರಶಂಶನೀಯ” ಎಂದು ಹೇಳಿದರು. ನಾಟ್ಯಾಂಜಲಿ ಸಂಸ್ಥೆಯ ಟ್ರಸ್ಟಿ ಸುಮಾ ನಾವಡ, ಸಂಘಟಕ ಸುಧಾಕರ ಪೇಜಾವರ್ ಉಪಸ್ಥಿತರಿದ್ದರು. ಕ್ಯಾ. ಗಣೇಶ್ ಕಾರ್ಣಿಕ್ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯರನ್ನು ನಾಟ್ಯಾಂಜಲಿ ವತಿಯಿಂದ ಸಮ್ಮಾನಿಸಲಾಯಿತು.
ಸಭಾಕಾರ್ಯಕ್ರಮದ ಬಳಿಕ ನಾಡೋಜ ಹಂಪನಾ ವಿರಚಿತ, ಡಾ. ನಾ. ದಾಮೋದರ ಶೆಟ್ಟಿ ಅವರು ರಂಗರೂಪಕ್ಕಿಳಿಸಿ, ಡಾ. ಜೀವನ್ ರಾಮ್ ಸುಳ್ಯ ನಿರ್ದೇಶಸಿ, ಆಳ್ವಾಸ್ ರಂಗ ಕಲಾವಿದರು ಅಭಿನಯಿಸಿದ ‘ಚಾರು ವಸಂತ’ ಕನ್ನಡ ನಾಟಕ ಪ್ರದರ್ಶನಗೊಂಡಿತು.
1 Comment
ಚಾರು ವಸಂತ ನಾಟಕ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಇದನ್ನು ನೋಡಿದ್ದು. ಎಲ್ಲರಿಗೂ ಅಭಿನಂದನೆಗಳು.