ಪರಿಸರ ಪ್ರೇಮಿ, ಮಧ್ಯಪಾನ ವಿರೋಧಿ ಹೋರಾಟಗಾರ್ತಿ, ಗಾಯಕಿ ಮತ್ತು ‘ಜನಪದ ಕೋಗಿಲೆ’ ಎಂದೇ ಪ್ರಸಿದ್ಧರಾದ ಸುಕ್ರಿ ಬೊಮ್ಮಗೌಡ ಹಾಲಕ್ಕಿ ಜನಾಂಗದವರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬಡಗೇರಿ ಗ್ರಾಮದವರಾದ ಸುಕ್ರಿಯವರು ಸುಕ್ರಜ್ಜಿ ಎಂದೇ ಪ್ರಸಿದ್ಧರು. ಹಾಲಕ್ಕಿ ಜನಪದ ಹಾಡುಗಳನ್ನು ಹಾಡುವುದಕ್ಕೆ ಪ್ರಸಿದ್ಧರಾದ ಇವರು, ಸುಮಾರು 5000 ಪದ್ಯಗಳನ್ನು ನೆನಪಿನಲ್ಲಿಟ್ಟುಕೊಂಡು ಯಾವುದೇ ಬರವಣಿಗೆಯ ಪರಿಕರಗಳ ಸಹಾಯವಿಲ್ಲದೆ ಹಾಡುತ್ತಾರೆ. ಇವುಗಳಲ್ಲಿ 100 ವರ್ಷಗಳಿಗಿಂತ ಹಿಂದಿನ ಹಾಡುಗಳೂ ಇವೆ. ‘ಹಾಲಕ್ಕಿ ಪದಗಳ ಕೋಗಿಲೆ’ ಎಂದೇ ಎಲ್ಲರಿಂದ ಕರೆಸಿಕೊಳ್ಳುವ ಇವರು, ಆ ಕ್ಷಣದಲ್ಲಿಯೇ ತಮ್ಮದೇ ಆದ ಶೈಲಿಯಲ್ಲಿ ಜನಪದ ಹಾಡುಗಳನ್ನು ಹಾಡುವ ಪ್ರತಿಭಾವಂತೆ. ಕರ್ನಾಟಕ ಜಾನಪದ ಅಕಾಡೆಮಿ ಸುಕ್ರಜ್ಜಿಯ ಹಾಡುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಅಲ್ಲದೆ ಕಾರವಾರದ ‘ಅಖಿಲ ಭಾರತ ರೇಡಿಯೋ’ ಸುಕ್ರಜ್ಜಿಯ ಹಾಡುಗಳನ್ನು ಧ್ವನಿ ಮುದ್ರಣ ಮಾಡಿ ಸಂಗ್ರಹಿಸಿದೆ. 1937 ಜನಿಸಿದ ಸುಕ್ರಿಯವರ ವಿವಾಹ ತನ್ನ ಹದಿನಾರನೇ ವಯಸ್ಸಿನಲ್ಲಿ ಹಿರಿಯ ವಯಸ್ಸಿನ ವರನೊಂದಿಗೆ ನಡೆಯಿತು. ಇವರು ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡ ನಂತರ ಮತ್ತೊಂದು ಮಗುವನ್ನು ದತ್ತು ಸ್ವೀಕಾರ ಮಾಡಿದರು. ಅತೀವ ಮದ್ಯಪಾನದ ವ್ಯಸನದಿಂದಲೇ ಸುಕ್ರಿಯವರ ಪತಿ ಇಹವನ್ನು ತ್ಯಜಿಸಿದರು. ದತ್ತು ಪುತ್ರನೂ ಮದ್ಯವ್ಯಸನಿಯಾಗಿ ಪರಲೋಕ ಸೇರಿದಾಗ ಅತ್ಯಂತ ನೊಂದುಕೊಂಡ ಸುಕ್ರಿಯವರು ಮತ್ತೆ ದ್ವಿತಿಗಳದೇ 1990ರಲ್ಲಿ ಮಧ್ಯ ವಿರೋಧಿ ಆಂದೋಲನವನ್ನು ಅಂಕೋಲದ ಭಾಗದಲ್ಲಿ ಆರಂಭಿಸಿದರು. ಇದರಿಂದಾಗಿ ಹಳ್ಳಿಯಲ್ಲಿರುವ ಸರಾಯಿ ಅಂಗಡಿಗಳನ್ನು ಮುಚ್ಚಬೇಕಾಗಿ ಬಂದಿತು. ಇದಕ್ಕಾಗಿ ಜನ ಸಂಘಟನೆ ಮಾಡಿದ ಸುಕ್ರಿಯವರು ಹಾಡುಗಳ ಮೂಲಕವೇ ಆರಂಭಿಸಿದ ಹೋರಾಟ ಜನಾಂದೋಲನ ರೂಪ ಪಡೆಯಿತು. ಹೀಗೆ ಸಂಪೂರ್ಣ ಅಲ್ಲದಿದ್ದರೂ ಕೆಲವು ಕುಟುಂಬಗಳನ್ನಾದರೂ ಕುಡಿತದಿಂದ ರಕ್ಷಣೆ ಮಾಡುವುದು ಸುಕ್ರಜ್ಜಿಗೆ ಸಾಧ್ಯವಾಯಿತು. ಮಾತ್ರವಲ್ಲದೆ ಬಡಗೇರಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕೆಲಸ ಮಾಡಿದ ಒಬ್ಬ ಧೀಮಂತ ಮಹಿಳೆ ಸುಕ್ರಜ್ಜಿ.
ಸುಕ್ರಿ ಬೊಮ್ಮಗೌಡ ಇವರ ಜನಪದ ಗಾಯನ ಕಲಾ ಪ್ರತಿಭೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ , ಜಾನಪದ ಶ್ರೀ ಪ್ರಶಸ್ತಿ, ಸಹ್ಯಾದ್ರಿ ಕನ್ನಡ ಸಂಘದ ಅಡಿಗ ಪ್ರಶಸ್ತಿ, ಮಾಧವ ಪ್ರಶಸ್ತಿ , ನಾಡೋಜ ಪ್ರಶಸ್ತಿ, ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಲಭಿಸಿವೆ.
ಇವರ ಸಾಧನೆಯನ್ನು ಗುರುತಿಸಿ 2017ರಲ್ಲಿ ಕೇಂದ್ರ ಸರಕಾರ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಬಾಲ್ಯದಲ್ಲಿ ಪರಿಸರದೊಂದಿಗೆ ಬೆರೆತು, ಬೆಳೆದು, ನಿರಕ್ಷರಕುಕ್ಷಿಯಾಗಿದ್ದರೂ, ಹಲವಾರು ಸಮಸ್ಯೆಗಳಿಗೆ ಔಷಧಿ ನೀಡುತ್ತಾ, ಜನಪರ ಕೆಲಸಗಳನ್ನು ಮಾಡುತ್ತಾ ,ಹಾಲಕ್ಕಿ ಜನಾಂಗದ ಜನಪದ ಕೋಗಿಲೆ ಎಂದೇ ಖ್ಯಾತಿ ಪಡೆದ ಅಂಕೋಲಾದ ಹಾಡು ಹಕ್ಕಿ, ಹಾಡು ನಿಲ್ಲಿಸಿ ಮೌನವಾಗಿದೆ. ಅದಮ್ಯ ಚೇತನಕ್ಕೆ ಅಂತಿಮ ನಮನ.
-ಅಕ್ಷರೀ