“ಕಾವ್ಯೇಷು ನಾಟಕ ರಮ್ಯಂ.”ಎಂಬುದು ನಾಟಕದ ಬಗ್ಗೆ ಹಿತವಾದ ಭಾವವನ್ನು ವ್ಯಕ್ತಪಡಿಸುವ ಉಕ್ತಿ. ಶ್ರಾವ್ಯ ಮತ್ತು ದೃಶ್ಯ ಎರಡು ಮಾಧ್ಯಮವನ್ನೊಳಗೊಂಡು ಪ್ರೇಕ್ಷಕರನ್ನು ರಂಜಿಸುವುದು ನಾಟಕ. ಚಾರಿತ್ರಿಕ ನಾಟಕ, ಸಾಮಾಜಿಕ ನಾಟಕ, ಧಾರ್ಮಿಕಕ್ಕೆ ಸಂಬಂಧಪಟ್ಟ ನಾಟಕ, ಅವುಗಳಲ್ಲಿಯೂ ಗಂಭೀರ ನಾಟಕ ಮತ್ತು ಗಂಭೀರ ನಾಟಕವನ್ನು ಪಾತ್ರಗಳ ಮೂಲಕ ನಕ್ಕು ನಗಿಸುವ ಹಾಸ್ಯಮಯ ನಾಟಕಗಳೂ ಇವೆ.
ನಾಟಕಗಳಲ್ಲಿ ತಮ್ಮ ನಟನಾ ಕೌಶಲ್ಯ ಮತ್ತು ವಿಡಂಬನಾತ್ಮಕ ವಾಕ್ಚಾತುರ್ಯದ ಮೂಲಕ ಸಮಾಜದ, ರಾಜಕೀಯದ ಅಂಕುಡೊಂಕುಗಳನ್ನು ಎತ್ತಿ ತೋರಿಸಿ, ಜನತೆಯನ್ನು ಮತ್ತು ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನ ಪಟ್ಟವರಲ್ಲಿ ಮಾಸ್ಟರ್ ಹಿರಣ್ಣಯ್ಯ ಒಬ್ಬರು. ಇವರ ಹೆಸರು ಕೇಳದವರು ಇಲ್ಲ, ಪರಿಚಯ ಇಲ್ಲದವರಿಲ್ಲ.
ಇವರ ಮೂಲ ಹೆಸರು ನರಸಿಂಹಮೂರ್ತಿ. ಇವರು ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗನಾಗಿ 15 ಫೆಬ್ರವರಿ 1934 ರಂದು ಮೈಸೂರಿನಲ್ಲಿ ಜನಿಸಿದರು.
ತಂದೆಯಿಂದಲೇ ರಂಗ ಶಿಕ್ಷಣ ಪಡೆದವರು. ಹಿರಣ್ಣಯ್ಯನವರ ಎಳವೆಯಲ್ಲಿಯೇ ಅವರ ತಂದೆ ತಮ್ಮ ಕುಟುಂಬವನ್ನು ಮದ್ರಾಸಿಗೆ ಸ್ಥಳಾಂತರಿಸಿದರು. ಮದ್ರಾಸಿಗೆ ಬಂದ ಮೇಲೆ ತಮಿಳು, ತೆಲುಗು, ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸದೊಂದಿಗೆ ಮನೆಯಲ್ಲಿ ಸಂಸ್ಕೃತದ ಸ್ತೋತ್ರ ಪಾಠಗಳೂ ಆದವು. ಮೈಸೂರಿಗೆ ಬಂದು ಬನ್ನುಮಯ್ಯ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ತಮ್ಮ ಶಾಲಾ ವಿದ್ಯಾಭ್ಯಾಸಕ್ಕೆ ಮತ್ತು ಶಾಲಾ ಪರೀಕ್ಷೆಗಳ ಶುಲ್ಕವನ್ನು ಭರಿಸಲು ಮನೆಮನೆಗೆ ‘ಮೈಸೂರು ಪತ್ರಿಕೆ’ ಮತ್ತು ‘ಸಾಧ್ವಿ’ ಪತ್ರಿಕೆಯನ್ನು ಹಂಚಿ ಸಂಪಾದನೆ ಮಾಡಿಕೊಂಡರು. ‘ಶಾರದಾ ವಿಲಾಸ’ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ಮುಗಿಸಿ, ಅಲ್ಲಿಗೆ ತಮ್ಮ ಓದನ್ನೂ ಮುಕ್ತಾಯಗೊಳಿಸಿಕೊಂಡು, ಅಭಿನಯ ರಂಗಕ್ಕೆ ಪಾದರ್ಪಣೆ ಮಾಡಿದರು.
ತಂದೆ ಕೆ. ಹಿರಣ್ಣಯ್ಯನವರು ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯ ಮೂಲಕ ಹಿರಣ್ಣಯ್ಯನವರು ಅಭಿನಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ರಂಗಭೂಮಿಯಲ್ಲಿ ಸಾಮಾನ್ಯ ಪಾತ್ರಗಳನ್ನು ಮಾಡಿ, ಸೋತು ಬಿದ್ದು ಮತ್ತೆ ಛಲದಿಂದ ಎದ್ದು ಕಾಲೇಜಿನಲ್ಲಿ ಸಂಘವನ್ನು ಕಟ್ಟಿ ‘ಆಗ್ರಹ’ ಎಂಬ ನಾಟಕ ಪ್ರದರ್ಶನ ಮಾಡಿ ಉತ್ತಮ ಅಭಿನಯದಿಂದ ಗೆಲುವನ್ನು ಸಾಧಿಸಿದರೂ, ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಲಾಗಲಿಲ್ಲ.
ತಂದೆ ಕೆ. ಹಿರಣ್ಣಯ್ಯ ಭಾರತೀಯ ನಟ, ನಿರ್ದೇಶಕ, ಬರಹಗಾರರಾಗಿದ್ದು, ರಾಜ್ಯದ ರಂಗಭೂಮಿ ಕಲಾವಿದರಾಗಿದ್ದರು. ಅವರ ನಿಧನದ ನಂತರ ತಂದೆ ನಡೆಸುತ್ತಿದ್ದ ‘ಕೆ. ಹಿರಣ್ಣಯ್ಯ ಮಿತ್ರ ಮಂಡಳಿ’ಯ ನಿರ್ದೇಶಕ ಮತ್ತು ನಟರಾಗಿ, ನಿರ್ವಾಹಕರಾಗಿ ಕಂಪನಿಯ ಪ್ರಗತಿಗಾಗಿ ಶ್ರಮಿಸಿದರು. ‘ಲಂಚಾವತಾರ’’ನಾಟಕವನ್ನು ರಚಿಸಿ, ರಂಗ ಪ್ರದರ್ಶನ ಮಾಡಿ, ಅಲ್ಲಿ ಜನಪ್ರಿಯರಾಗಿ ಮಹಾರಾಜರಿಂದ ಸನ್ಮಾನ ಮತ್ತು ‘ನಟ ರತ್ನಾಕರ’ ಎಂಬ ಬಿರುದನ್ನು ಸ್ವೀಕರಿಸಿದರು. ಮುಂದೆ ‘ನಡುಬೀದಿ ನಾರಾಯಣ’ , ‘ಭ್ರಷ್ಟಾಚಾರ’, ‘ಸದಾರಮೆ’, ‘ಕಪಿಮುಷ್ಠಿ’, ‘ಕಾನೂನು ಅಥವಾ ಲವ್ ಲವ್’, ‘ಸನ್ಯಾಸಿ ಸಂಸಾರ ‘, ‘ಹಾಸ್ಯದಲ್ಲಿ ಉಲ್ಟಾಪಲ್ಟಿ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಜಯಭೇರಿ ಹೊಡೆದು, ಜನರ ಮೆಚ್ಚುಗೆಗೆ ಪಾತ್ರರಾದರು. ಈ ರೀತಿ ಅಭಿನಯ ಕ್ಷೇತ್ರದಲ್ಲಿ ಚಾಪು ಮೂಡಿಸಿದ ಹಿರಣ್ಣಯ್ಯನವರು ಮತ್ತೆ ಹಿಂದಿರುಗಿ ನೋಡಲಿಲ್ಲ. 25ಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದ ಖ್ಯಾತಿ ಇವರದು. ಅವರ ‘ಲಂಚಾವತಾರ’ ನಾಟಕ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿದೆ.
ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಸಿಂಗಪುರ್, ಇಂಗ್ಲೆಂಡ್ ನಂತಹ ದೇಶಗಳಲ್ಲಿ ಇವರ ನಾಟಕಗಳು ಪ್ರದರ್ಶನವನ್ನು ಕಂಡಿವೆ ಎಂಬುದು ಹೆಗ್ಗಳಿಕೆ. ಸುಮಾರು ಮೂವತ್ತಕ್ಕೂ ಹೆಚ್ಚು ಬೆಳ್ಳಿತರೆ, ಕಿರುತೆರೆಗಳಲ್ಲಿ ಹಿರಣ್ಣಯ್ಯನವರು ಮಿಂಚಿದ್ದಾರೆ, ಹಿರಣ್ಣಯ್ಯ ಮಿತ್ರ ಮಂಡಳಿಯ ಪ್ರಮುಖ ನಾಟಕ ‘ದೇವದಾಸಿ’ ಚಲನಚಿತ್ರವಾಗಿರುವುದು ಅದರಲ್ಲಿ ಹಿರಣ್ಣಯ್ಯನವರು ಪಾತ್ರ ವಹಿಸಿರುವುದು ವಿಶೇಷ. ಟಿ. ವಿ. ಯಲ್ಲಿ ಪ್ರಸಾರವಾಗುತ್ತಿದ್ದ ‘ಪುಣ್ಯಕೋಟಿ’, ‘ಅಮೃತವಾಹಿನಿ’ ಧಾರವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯ ಅಭಿನಯಿಸಿದ್ದರು.
ರಾಜಕೀಯ ನಾಯಕರುಗಳು ಮತ್ತು ವಿವಿಧ ಹಂತದ ಪುಡಾರಿಗಳಿಗೆ ವೇದಿಕೆಯ ಮೇಲೆ ನಟನೆಯ ಮೂಲಕ ಹಿರಣ್ಣಯ್ಯನವರು ನೀಡುವ ಲೋಪದೋಷಗಳ ಟೀಕೆಯನ್ನು ಸಹಿಸಲಾಗುತ್ತಿರಲಿಲ್ಲ. ಆದರೆ ಇವರನ್ನು ಸದೆಬಡಿಯಲು ಬೇರೆ ಬೇರೆ ರೀತಿಯ ಪ್ರಯತ್ನಗಳು ನಡೆದವು. ಹಿರಣ್ಣಯ್ಯನವರು ಇದ್ಯಾವುದನ್ನೂ ಲೆಕ್ಕಿಸದೆ, ಧೈರ್ಯವಾಗಿ ಎದುರಿಸಿ, ತಮ್ಮ ಪ್ರತಿಭೆಯನ್ನು ಮೆರೆದ ರೀತಿ ಅಪೂರ್ವವಾದದ್ದು. ಇನ್ನು ವೃತ್ತಿ ಜೀವನದ ಏಳುಬೀಳುಗಳಲ್ಲಿ ತನ್ನ ವಿರುದ್ಧ ಕಿರುಕುಳ ನೀಡಬಂದವರನ್ನು ಇವರು ಬಿಡುವರೆ..?
ಇವರ ನಾಟಕಗಳಲ್ಲಿ ಸಮಾಜವನ್ನು, ಅಧಿಕಾರಿಗಳನ್ನು, ಸರಕಾರವನ್ನು, ಅವಹೇಳನ ಮಾಡುವುದಕ್ಕಿಂತ ಹೆಚ್ಚು ಸಮಾಜದ ಬಗ್ಗೆ ಹಿರಣ್ಣಯ್ಯನವರಿಗಿದ್ದ ಕಾಳಜಿ ಎದ್ದು ಕಾಣುತ್ತದೆ.
ಇಲ್ಲಿ ರಾಜಕೀಯವನ್ನು ದುರುಪಯೋಗಪಡಿಸಿಕೊಂಡ ಯಾವುದೇ ವಿಚಾರವೂ ಅವರ ವೃತ್ತಿಜೀವನದಲ್ಲಿ ನಡೆದಿಲ್ಲ ಎಂಬುದು ಗಮನದಲ್ಲಿರಬೇಕಾದ ಅಂಶ. ಅವರು ಬದುಕಿನಲ್ಲಿ ಕಂಡ ನೋವು, ನಲಿವು, ದೌರ್ಜನ್ಯ, ದಬ್ಬಾಳಿಕೆ, ಭ್ರಷ್ಟಾಚಾರ, ಲಂಚ ಕೋರರ ಹಾವಳಿ ಇವೇ ಅವರ ನಾಟಕದ ವಸ್ತುಗಳಾದವು. ತರತಮ ಭಾವವಿಲ್ಲದೆ, ಹಿರಿಯರು ಕಿರಿಯರು ಎಂಬ ಬೇಧವಿಲ್ಲದೆ ಅವರು ಎಲ್ಲರೊಂದಿಗೆ ಆಪ್ತವಾಗಿ ವ್ಯವಹರಿಸುತ್ತಿದ್ದ ರೀತಿ ಕಲಾವಿದರಿಗೆ ಮಾದರಿ.
ಯಾವುದೇ ಸಿರಿ ಸಂಪತ್ತಿನ ವ್ಯಾಮೋಹವಿಲ್ಲದ ಸರಳ ಸಜ್ಜನರಾದ ಹಿರಣ್ಣಯ್ಯ ನವರಲ್ಲಿಗೆ
ಒಂದು ದಿನ ರಾಜ್ಯದ ಪ್ರತಿಷ್ಠಿತ ವಾಹಿನಿಯವರು ಸಂದರ್ಶನಕ್ಕೆ ಬಂದಾಗ, ನಿರೂಪಕರ ಬಳಿ “ತಾನು ಏನು ಧರಿಸಲಿ..?” ಎಂದು ಕೇಳಿದರು. ಅದಕ್ಕೆ ನಿರೂಪಕರು “ಸರ್ ಕಂದು ಬಣ್ಣದ ಜುಬ್ಬ ಧರಿಸಿ” ಎಂದರು. ಅದಕ್ಕೆ ಹಿರಣ್ಣಯ್ಯನವರು “ಒಳಗೆ ಕಾಪಾಟಿನಲ್ಲಿದೆ ತಕೊಂಡು ಬಾ” ಎಂದರು. ಅಚ್ಚರಿಗೊಂಡ ನಿರೂಪಕ “ಸರ್, ನಿಮ್ಮ ಮನೆ ಕಾಪಾಟಿಗೆ ನಾನು ಕೈ ಹಾಕುವುದು ಸರಿಯೇ..?” ಎಂದು ಪ್ರಶ್ನಿಸಿದಕ್ಕೆ.. “ಇದು ನಾಡಿನ ಜನತೆಯಿಂದ ಕಟ್ಟಿದ ಮನೆ.. ಇಲ್ಲಿ ಯಾರೂ ಕಳ್ಳರಿಲ್ಲ” ಎಂದಿದ್ದರು.
ಕನ್ನಡ ನಾಡು ನುಡಿಗಳ ಬಗ್ಗೆ ಅವರಿಗಿರುವ ಗೌರವ, ಅವರ ಧ್ವನಿ ಮಾಧುರ್ಯ, ಹಾಸ್ಯ ಪ್ರಜ್ಞೆ ಇವುಗಳ ನಡುವೆಯೂ ತಾನು ಆಡುವ ಮಾತಿನ ಬಗ್ಗೆ ಇರುವ ಜಾಗ್ರತೆ ಮೆಚ್ಚಬೇಕಾದದ್ದು. ಪತ್ರಿಕೆಗಳು ಸರಕಾರವನ್ನು ಎದುರು ಹಾಕಿಕೊಳ್ಳಲು ಹೆದರುತ್ತಿದ್ದ ದಿನಗಳಲ್ಲಿ, ತಾವೊಬ್ಬರೇ ಮುಂದೆ ನಿಂತು ಧೈರ್ಯವಹಿಸಿ ಇಡೀ ವ್ಯವಸ್ಥೆಯ ವಿರುದ್ಧ ಮುನ್ನುಗ್ಗಿದ ಹಿರಣ್ಣಯ್ಯನವರ ಸಾಹಸ ಸಾಮಾನ್ಯವಾದುದಲ್ಲ.
ಮಾಸ್ಟರ್ ಹಿರಣ್ಣಯ್ಯ ನವರಿಗೆ ಹಲವಾರು ಬಿರುದುಗಳು ಪ್ರಶಸ್ತಿಗಳು ಲಭಿಸಿವೆ. ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರ ನಾಟಕಗಳನ್ನು ನೋಡಿ ಅವರನ್ನು ಮೆಚ್ಚಿ ಅಪಾರವಾದ ಗೌರವಾಭಿಮಾನವನ್ನು ನೀಡಿದ್ದಾರೆ. ‘ಕಲಾಗಜ ಸಿಂಹ’, ‘ನಟ ರತ್ನಾಕರ’ ಎಂಬ ಬಿರುದುಗಳು ಅವರಿಗೆ ಸಂದಿವೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ಹಿನ್ನೆಲೆ ಗಾಯಕ, ರಂಗಕರ್ಮಿಯಾಗಿ ತನ್ನನ್ನು ತೊಡಗಿಸಿಕೊಂಡು ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು ಮಾಸ್ಟರ್ ಹಿರಣ್ಣಯ್ಯ. ‘ ರಾಜ್ಯೋತ್ಸವ ಪ್ರಶಸ್ತಿ’, ‘ಗುಬ್ಬಿ ವೀರಣ್ಣ ಪ್ರಶಸ್ತಿ’, ‘ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’, ‘ಸಂದೇಶ ಕಲಾ ಪ್ರಶಸ್ತಿ, ‘ಮಹಾ ಅದ್ವೈತಿ ಪ್ರಶಸ್ತಿ’, ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’, ‘ರಂಗಭೂಮಿ ಪ್ರಶಸ್ತಿ’, ‘ನವರತ್ನ ರಾಮ್ ಪ್ರಶಸ್ತಿ’, ‘18 ನೇ ಅ.ನ.ಕೃ. ನಿರ್ಮಾಣ ಸ್ವರ್ಣ ಪ್ರಶಸ್ತಿ’ ಇವೆಲ್ಲವೂ ಈ ಮೇರು ಹಾಸ್ಯ ನಟನ ಪ್ರತಿಭೆ, ದಿಟ್ಟ ನಿಲುವು, ಸಾಮರ್ಥ್ಯ ಹಾಗೂ ಸಾಧನೆಗೆ ದೊರೆತ ಗೌರವ.
ಈ ಅಸಮಾನ್ಯ ಮೇರು ನಟ 2019 ಮೇ 2 ರಂದು ತಮ್ಮ 85ನೇ ವಯಸ್ಸಿನಲ್ಲಿ
ಇಹವನ್ನು ತ್ಯಜಿಸಿದರು.
ಆ ಮಹಾಚೇತನಕ್ಕೆ ಅನಂತ ನಮನಗಳು.
-ಅಕ್ಷರೀ