ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಸಂಸ್ಥೆಗಳ ಸಂಸ್ಥಾಪಕರ ದಿನ, ಕಾಲೇಜು ದಿನ ಹಾಗೂ ಎ. ಶಾಮ ರಾವ್ ಸ್ಮಾರಕ ಅತ್ಯುತ್ತಮ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಫೆಬ್ರವರಿ 2025ರ ಶುಕ್ರವಾರದಂದು ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕಾ ಕ್ಯಾಂಪಸ್‌ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಹಾಗೂ ಎ. ಶಾಮರಾವ್ ಫೌಂಡೇಶನ್ ಮಂಗಳೂರಿನ ಅಧ್ಯಕ್ಷರಾದ ಡಾ. ಸಿಎ ಎ. ರಾಘವೇಂದ್ರ ರಾವ್ ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಂ.ಆರ್.ಪಿ.ಎಲ್ (ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್)ಇದರ ಮಾನವ ಸಂಪತ್ತು ವಿಭಾಗದ ಶ್ರೀ ಕೃಷ್ಣ ಹೆಗ್ಡೆ ಮಿಯಾರ್ ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸ್ಪಷ್ಟ ದೃಷ್ಟಿಕೋನ ಮತ್ತು ಉದ್ದೇಶಗಳನ್ನು ಹೊಂದಿರುವುದಕ್ಕೆ ಅಭಿನಂದಿಸಿದರು. ಅವರು ಶಿಕ್ಷಣದ ಮಹತ್ವವನ್ನು ವಿವರಿಸುತ್ತಾ “ಶಿಕ್ಷಣವು ಜೀವನದಲ್ಲಿ ಮುನ್ನಡೆಯಲು, ಯಶಸ್ಸು ಪಡೆಯಲು ಮತ್ತು ಸಮಾಜದ ಉತ್ತರಣೆಗೆ ಮಾರ್ಗಸೂಚಿಯಾಗಿದೆ.” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಶ್ರೀ ರಾಮಕೃಷ್ಣ ಮಯ್ಯ ಸಿರಿಯಬಾಗಿಲು, ನೃತ್ಯಕಲಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಕರ್ನಾಟಕ ಕಲಾಶ್ರೀ ಗೀತಾ ಸರಳಾಯ, ವೀಣಾ ವಾದನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಶ್ರೀಮತಿ ಜಯಲಕ್ಷ್ಮಿ ಭಟ್, ಚಿತ್ರಕಲಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಶ್ರೀ ಬಿ.ಕೆ. ಮಾಧವ ರಾವ್, ಅತಿಥಿ ಮತ್ತು ಆಹಾರ ಸೇವಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಶ್ರೀ ಪತ್ತುಮುಡಿ ಸರ‍್ಯನಾರಾಯಣ ರಾವ್, ಪೌರೋಹಿತ್ಯ ಮತ್ತು ಜ್ಯೋತಿಷ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಶ್ರೀ ಕೆ. ರಾಘವೇಂದ್ರ ತಂತ್ರಿ, ಸಮಾಜಸೇವಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಶ್ರೀ ಈಶ್ವರ ಮಲ್ಪೆ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನೀಡಿದ ಕೊಡುಗೆಗೆ ಶ್ರೀ ವೆಂಕಟರಾಮಣ ಬನ್ನಿಂತಾಯ ಇವರುಗಲಿಳಿಗೆ ಎ. ಶಾಮ ರಾವ್ ಸ್ಮಾರಕ ಅತ್ಯುತ್ತಮ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀನಿವಾಸ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಇರ್. ಶ್ರೀಮತಿ ಎ. ಮಿತ್ರ ಎಸ್. ರಾವ್, ಗೌರವಾನ್ವಿತ ಉಪಕುಲಪತಿ ಡಾ. ಸತ್ಯನಾರಾಯಣರೆಡ್ಡಿ, ರಿಜಿಸ್ಟ್ರಾರ್ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ರಿಜಿಸ್ಟ್ರಾರ್ ಡಾ. ಶ್ರೀನಿವಾಸ್ ಮಯ್ಯ ಡಿ., ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ವಿವಿಧ ಸಂಸ್ಥೆಗಳ ಡೀನ್ ಉಪಸ್ಥಿತರಿದ್ದರು.
ಡಾ. ಶ್ವೇತಾ ಪೈ, ಡಾ. ವಿಜಯಲಕ್ಷ್ಮಿ ನಾಯಕ್, ಪ್ರೊ. ರೋಹನ್ ಫೇರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ, ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್ ವಂದಿಸಿದರು.