ಸಂಸ್ಕೃತ ಮತ್ತು ತಮಿಳು ಭಾಷೆಗಳ ಸಾಹಿತ್ಯ ಸಂಸ್ಕೃತಿಗಳಂತೆ ಕನ್ನಡ ಸಾಹಿತ್ಯದ ಕಾಲ ವಿಸ್ತಾರ ಸಹ ಬೆರಗುಗೊಳಿಸುವಂಥದ್ದೇ ಆಗಿದೆ. ಕನ್ನಡ ಸಾಹಿತ್ಯ ಚರಿತ್ರೆಗೆ ಸುಮಾರು ಒಂದೂವರೆ ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ.ಇ. ಪಿ.ರೈಸ್ ಅವರು ಮೊದಲ ಬಾರಿಗೆ ಕನ್ನಡ ಸಾಹಿತ್ಯ ಚರಿತ್ರೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಕಟ್ಟಿಕೊಟ್ಟರು. ಆ ಬಳಿಕ ಕವಿ ಚರಿತೆಯ ಮೂರು ಸಂಪುಟಗಳು ಹೊರಬಂದವು.1953ರಲ್ಲಿ ರಂ. ಶ್ರೀ. ಮುಗಳಿ ಅವರ ಕನ್ನಡ ಸಾಹಿತ್ಯ ಚರಿತ್ರೆ ಬೆಳಕು ಕಂಡಿತು. ಮೊದಲ ಬಾರಿಗೆ ಕನ್ನಡ ಸಾಹಿತ್ಯವನ್ನು ವಿಮರ್ಶೆಯ ನೆಲೆಯಲ್ಲಿ ನೋಡಿ ವಸ್ತುನಿಷ್ಠವಾಗಿ ಚರ್ಚಿಸಿದ್ದು ಈ ಗ್ರಂಥದ ಅನನ್ಯತೆ. ಕನ್ನಡ ಸಾಹಿತ್ಯವು ಕನ್ನಡದ ನಂದಾದೀಪ, ಕರ್ನಾಟಕದ ತವನಿಧಿ ಎಂಬ ಅರಿವು ಮಾಡಿಸಿದ್ದು ರಂ. ಶ್ರೀ ಅವರ ಸಾಧನೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರಿತು ಈ ವರೆಗೆ ಹಲವು ಗ್ರಂಥಗಳು ಪ್ರಕಟವಾಗಿವೆ. ಆರ್. ನರಸಿಂಹಾಚಾರ್ಯರ ‘ಕವಿಚರಿತ್ರೆ’ಯ ಮೂರು ಸಂಪುಟಗಳಂತೂ ಬೆರಗುಗೊಳಿಸುವ ಸಾಮಗ್ರಿಯನ್ನೊಳಗೊಂಡಿವೆ, ಚರಿತ್ರ ಲೇಖಕರಿಗೆ ಮುಖ್ಯ ಆಕರಗಳಾಗಿವೆ. ತರುವಾಯದ ಗ್ರಂಥಗಳಲ್ಲಿ ಒಂದೊಂದು ಗುಣ ವಿಶೇಷವಿದೆ. ಆದರೂ ಕನ್ನಡ ಸಾಹಿತ್ಯವನ್ನು ಆಧುನಿಕ ದೃಷ್ಟಿಯಿಂದ ವ್ಯಾಸಂಗ ಮಾಡಬೇಕೆನ್ನುವವರಿಗೆ ಅವಶ್ಯವೆಂದು ತೋರುವ ಚಾರಿತ್ರಿಕ ಮತ್ತು ವಿಮರ್ಶಾತ್ಮಕ ವಿವೇಚನೆ ಒಂದು ಸಮಗ್ರವಾದ ಗ್ರಂಥರೂಪದಲ್ಲಿ ದೊರೆಯಬೇಕಾಗಿತ್ತು. ಪಾಠ ಹೇಳುವ ಅಧ್ಯಾಪಕರಿಗೂ, ಕೇಳುವ ವಿದ್ಯಾರ್ಥಿಗಳಿಗೂ ಇಂಥ ಗ್ರಂಥದ ಅಗತ್ಯವು ವಿಶೇಷವಾಗಿ ತೋರಿತ್ತು. ಅದನ್ನು ಪೂರೈಸುವ ಮನೀಷೆಯಿಂದ ‘ಕನ್ನಡ ಸಾಹಿತ್ಯ ಚರಿತ್ರೆ’ ಎಂಬ ಗ್ರಂಥವನ್ನು ಬರೆದುದಾಗಿ ಮುಗಳಿ ಅವರು ತಮ್ಮ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.ಆ ಬಳಿಕ ತ. ಸು.ಶಾಮ ರಾವ್,ಮರಿಯಪ್ಪ ಭಟ್ಟ, ಕೀರ್ತಿನಾಥ ಕುರ್ತಕೋಟಿ, ಲಕ್ಷ್ಮೀನಾರಾಯಣ ಭಟ್ಟ, ಸಿ. ವೀರಣ್ಣ ಮೊದಲಾದವರು ಕನ್ನಡ ಸಾಹಿತ್ಯ ಚರಿತ್ರೆಯನ್ನುವಿಭಿನ್ನ ನೆಲೆಗಳಲ್ಲಿ ರಚಿಸಿ ಮಹದುಪಕಾರ ಮಾಡಿದ್ದಾರೆ.ಈಗ ಈ ಸಾಲಿಗೆ ಕನ್ನಡ ಸಾಹಿತ್ಯದ ವೈಲಕ್ಷಣ್ಯಗಳೇನು ಎಂಬುದನ್ನು ತೂಗಿ ನೋಡಿ ಅಪೂರ್ವವಾದ ಕೃತಿ ರಚನೆ ಮಾಡಿದ ಹಿರಿಮೆಗೆ ಡಾ. ನರಹಳ್ಳಿ ಅವರು ಭಾಜನರಾಗಿದ್ದಾರೆ.
ಕನ್ನಡ ಮನಸ್ಸು ಭಿನ್ನ ಭಿನ್ನ ಸಂದರ್ಭಗಳಲ್ಲಿ ಎದುರಾದ ಸವಾಲುಗಳಿಗೆ ಹೇಗೆ ಸ್ಪಂದಿಸಿದೆ ಎಂಬುದರ ಹುಡುಕಾಟದ ಜತೆ ಜತೆಗೆ ಹೊಸ ತಲೆಮಾರಿಗೆ ನಮ್ಮ ಕನ್ನಡ ಪರಂಪರೆಯೊಂದಿಗೆ ಸಂಬಂಧ ಕಲ್ಪಿಸುವ ಒಂದು ವಿನೂತನ ಪ್ರಯತ್ನವೂ ಇದಾಗಿದೆ. ‘ಹೊಸದು ಹೊನ್ನು ಹಳೆಯದೆಲ್ಲ ಮಣ್ಣು’ ಎಂಬ ವಸಾಹತುಶಾಹಿ ನಿಲುವನ್ನು ಪ್ರಶ್ನಿಸುವ ಹಂಬಲವೂ ಈ ಕೃತಿಯಲ್ಲಿ ಒಡೆದು ಕಾಣುತ್ತದೆ.
‘ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ’ ಇದು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಇತ್ತೀಚಿನ ಮಹತ್ವದ ವಿಮರ್ಶಾ ಕೃತಿ. ಸಾವಿರಾರು ವರ್ಷಗಳ ಸಮೃದ್ಧವಾದ ಉಜ್ವಲವಾದ ಕನ್ನಡ ಸಾಹಿತ್ಯ ಪರಂಪರೆ, ಅಲ್ಲಿನ ಗುಣಾತಿಶಯ, ವಸಾಹತು ಶಾಹಿಯ ಪ್ರಭಾವಕ್ಕೊಳಗಾದ ಮನಸ್ಥಿತಿಯ ವಿಮರ್ಶೆಯಿಂದ ಕನ್ನಡಕ್ಕೆ ಆದ ನಷ್ಟ, ಭಗ್ನ ಸ್ಥಿತಿಯ ವಾಸ್ತವಗಳನ್ನು ಸಾರವತ್ತಾಗಿ ವಿಶ್ಲೇಷಿಸಿ ನಮ್ಮ ದೃಷ್ಟಿ ತಿದ್ದುವ ಪ್ರಯತ್ನವನ್ನು ಮಾಡಿರುವುದು ಈ ಕೃತಿಯ ಅತಿಶಯತೆ. ಹೊಸ ತಿಳಿವಿನ ಬೆಳಕಿನಲ್ಲಿ ಕನ್ನಡ ಸಂಸ್ಕೃತಿ ಚರಿತ್ರೆಯನ್ನು ಇಲ್ಲಿ ಆಪ್ತವಾಗಿ ಕಟ್ಟಿಕೊಡಲಾಗಿದೆ.
ಸಾಹಿತ್ಯ- ಸಮಾಜ, ಪರಂಪರೆ- ಆಧುನಿಕತೆ, ಮಾರ್ಗ- ದೇಸಿ ಇವುಗಳ ನಡುವಿನ ಸಮನ್ವಯ, ಸಂಘರ್ಷ, ಸ್ಥಾಪಿತ ಕೃತಿಗಳ ಪುನರ್ವಿಮರ್ಶೆ, ಮರು ವ್ಯಾಖ್ಯಾನ , ತೀರ್ಮಾನ ಇಲ್ಲಿ ಹರಳುಗಟ್ಟಿದೆ. ಕನ್ನಡ ಪರಂಪರೆಯನ್ನು ಗಮನಿಸಿದರೆ ಅದು ವಾಗ್ವಾದಗಳ ಪರಂಪರೆ ಎನ್ನುವುದು ಅರಿವಾಗುತ್ತದೆ. ನಮ್ಮ ಹಿರಿಯರು ವಾಗ್ವಾದಗಳ ಮೂಲಕವೇ ಕನ್ನಡ ಜಗತ್ತನ್ನು, ಕನ್ನಡ ಮನಸ್ಸನ್ನು ಕಟ್ಟುತ್ತ ಬಂದಿದ್ದಾರೆ. ಸಾವಿರ ವರ್ಷದ ಕನ್ನಡ ಸಾಹಿತ್ಯ ಚರಿತ್ರೆ ವಾಗ್ವಾದಗಳ ಮೂಲಕವೇ ಬೆಳೆದು ಬಂದಿದೆ. ಆರೋಗ್ಯಕರ ಚರ್ಚೆಗೆ ಹಾದಿಮಾಡಿಕೊಟ್ಟಿದೆ, ಮಾತ್ರವಲ್ಲ, ಕನ್ನಡ ಸಾಹಿತ್ಯ ಚರಿತ್ರೆಯೆಂದರೆ ಅದು ಸಂಘರ್ಷಗಳ ಚರಿತ್ರೆ, ಸೃಜನಶೀಲ ಮನಸ್ಸುಗಳ ಅರ್ಥಪೂರ್ಣ ಸಂವಾದ. ನಮ್ಮಲ್ಲಿನ ಬಹುಮುಖೀ ಸಂಸ್ಕೃತಿಯನ್ನು ನಿರ್ನಾಮಗೊಳಿಸಿ ಏಕಮುಖಿ ಸಂಸ್ಕೃತಿಗೆ ಹಾದಿ ಮಾಡಿಕೊಟ್ಟ ಸಾಹಿತ್ಯಾಧ್ಯಯನದ ಸ್ವರೂಪದ ಬಗೆಗೆ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಮರುಚಿಂತನೆ ನಡೆದಿರುವುದು ಸಾಂಪ್ರತ ಕೃತಿಯ ಹೆಚ್ಚುಗಾರಿಕೆ.
ಸಾಹಿತ್ಯಕ್ಕೂ ವಿಮರ್ಶೆಗೂ ಇರುವ ಸಂಬಂಧ ಘನಿಷ್ಠವಾದುದು. ವಿಮರ್ಶೆ ನಮ್ಮಲ್ಲಿ ಇವತ್ತು ಪ್ರಮುಖ ಸಾಹಿತ್ಯ ಪ್ರಕಾರವಾಗಿ ಬೆಳೆದಿದೆ.ಕವಿ ಮತ್ತು ವಿಮರ್ಶಕರ ದಾಂಪತ್ಯದಿಂದಲೇ ಸರಸ್ವತೀ ತತ್ವದ ವಿಜಯ ಎಂಬುದು ಅಭಿನಗುಪ್ತನ ಮತ. ಕ್ರಿಯಾತ್ಮಕವಾದ ಸಾಹಿತ್ಯದಂತೆ ಕ್ರಿಯಾತ್ಮಕವಾದ ವಿಮರ್ಶೆ ಸಾರಸ್ವತ ಲೋಕದ ದೋಹದ.ಇದನ್ನು ಒಂದು ವ್ರತದಂತೆ ನಡೆಸಿಕೊಂಡು ಬಂದವರು ನರಹಳ್ಳಿ ಬಾಲ ಸುಬ್ರಹ್ಮಣ್ಯ. ಅವರ ಹಿಂದಿನ ಕೃತಿಗಳಂತೆ ಇದು ಸಹ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಸಂಗತಿಗಳನ್ನು ಒಳಗೊಂಡಿರುವುದು ವಿಶೇಷ.
ನಮ್ಮ ಸಮಕಾಲೀನ ಕನ್ನಡ ವಿಮರ್ಶಕರಲ್ಲಿ ಡಾ. ನರಹಳ್ಳಿ ಅವರದು ಎದ್ದು ಕಾಣುವ ಹೆಸರು. ಅವರು ನಮ್ಮ ನಡುವಿನ ಸೂಕ್ಷ್ಮ ಸಂವೇದನಾಶೀಲ ವಿಮರ್ಶಕ, ಚಿಂತಕ, ವಾಗ್ಮಿ. ಇಡಿಯಾದ ಸಾಹಿತ್ಯ ಅಧ್ಯಯನದಲ್ಲಿ, ಸಮಗ್ರ ಅಧ್ಯಯನದಲ್ಲಿ ಅವರಿಗೆ ವಿಶೇಷವಾದ ಆಸ್ಥೆ. “ಸಮಗ್ರ ಓದಿನ ಪರಿಕಲ್ಪನೆ ಇಂದಿನ ಬಹುಮುಖ್ಯ ಸಾಂಸ್ಕೃತಿಕ ಅಗತ್ಯವಾಗಿದೆ. ಇತ್ತೀಚೆಗೆ ನಮ್ಮ ಅಧ್ಯಯನ ಕ್ರಮದಲ್ಲಿ ಎರಡು ಬಗೆಯ ಓದಿನ ಕ್ರಮ ನನಗೆ ಬಹುಮುಖ್ಯವೆನ್ನಿಸಿದೆ. ಒಂದು ಸಮಗ್ರ ಓದು; ಮತ್ತೊಂದು ಸಾವಧಾನದ ಓದು. ಇದುವರೆಗಿನ ನಮ್ಮ ಅಧ್ಯಯನದ ಕ್ರಮವೇ ಒಂದು ರೀತಿ ಬಿಡಿ ಓದಿನ ಪರಂಪರೆಯಾಗಿ ಬಿಟ್ಟಿದೆ” ಎಂಬುದನ್ನು ಮನಗಂಡ ಅವರು ಸಮಗ್ರ ಅಧ್ಯಯನ ಇಂದಿನ ತುರ್ತು ಎನ್ನುತ್ತಾ ಆ ಮಾರ್ಗದಲ್ಲಿ ಕುವೆಂಪು, ಅ. ನ. ಕೃ. , ಕೆ. ಎಸ್. ನ., ಜಿ. ಎಸ್. ಎಸ್. ಮೊದಲಾದ ಧೀಮಂತ ಲೇಖಕರ ಸಾಧನೆಯನ್ನು ತಾಳೆ ಹಾಕಿ ನೋಡಿ , ಕನ್ನಡ ಪರಂಪರೆಯನ್ನು ಹೊಸ ಬಗೆಯಲ್ಲಿ ಅರ್ಥೈಸಿದ ಶ್ರೇಯಸ್ಸು ನರಹಳ್ಳಿ ಅವರಿಗೆ ಸಲ್ಲುತ್ತದೆ. ಪ್ರಸಕ್ತ ಕೃತಿಯೂ ಸಹ ಕನ್ನಡ ಸಾಹಿತ್ಯವನ್ನು ಇಡಿಯಾಗಿ ನೋಡಿ ಮಾಡಿದ ಮರು ಮೌಲ್ಯಮಾಪನವೂ ಅಹುದು.
ನಮ್ಮ ಕಾಲದ ಆಸ್ಥೆ, ಆತಂಕಗಳನ್ನು ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಅನುಸಂಧಾನ ಮಾಡಿಕೊಳ್ಳವ ಕ್ರಮ, ಪರಂಪರೆ ಹೇಗೆ ವರ್ತಮಾನಕ್ಕೂ ಸ್ಪಂದಿಸುತ್ತಿದೆ ಎಂಬುದನ್ನು ಅರಿತುಕೊಳ್ಳುವ ಹಿನ್ನೆಲೆಯಲ್ಲಿ ಈ ಕೃತಿ ಮೈಪಡೆದಿದೆ. ಹಲ್ಮಿಡಿ ಶಾಸನ, ಕವಿರಾಜಮಾರ್ಗದಿಂದ ತೊಡಗಿ ಹಳಗನ್ನಡ ನಡುಗನ್ನಡ ಸಾಹಿತ್ಯ ಆಕೃತಿಗೊಂಡ ಬಗೆ, ಅದರ ಪರಂಪರೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಹೊಸ ಚಿಂತನೆಗಳನ್ನು ಲೋಕಮುಖಕ್ಕೆ ಕಟ್ಟಿಕೊಟ್ಟಿರುವುದು ಈ ಕೃತಿಯ ಬಲ್ಮೆ. ಪ್ರಮುಖ ಕವಿ, ಕೃತಿಗಳ ಅಂತ:ಸತ್ವವನ್ನು ಗುರುತಿಸಿ ಸಾಹಿತ್ಯ ಪರಂಪರೆಯ ದಾರಿಯಲ್ಲಿ ಅವು ತೆರೆದುಕೊಳ್ಳುವ ವಿಚಾರ ಪ್ರಪಂಚವನ್ನು ನರಹಳ್ಳಿಯವರು ಇಲ್ಲಿ ಅನಾವರಣಗೊಳಿಸಿರುವ ಪರಿ ಮನೋಜ್ಞವಾಗಿದೆ.
‘ಹಿಂದಣ ಹೆಜ್ಜೆಯ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಇದು ಅಲ್ಲಮನ ಮಾತು. ಪರಂಪರೆಯ ಅರಿವು ವರ್ತಮಾನದ ಅನೇಕ ಸಮಸ್ಯೆಗಳಿಗೆ ಪರಿಹಾರದ ಸಾಧ್ಯತೆಗಳನ್ನು ಸೂಚಿಸುತ್ತದೆ.
ಸಂವೇದನಾಶೀಲ ಸೂಕ್ಷ್ಮಮನಸ್ಸುಗಳು ಈ ಹಿಂದೆ ಇಂಥ ಸಮಸ್ಯೆಗಳನ್ನು ಹೇಗೆ ಮುಖಾಮುಖಿಯಾಗಿದ್ದವು ಎಂಬುದನ್ನು ಬೊಟ್ಟು ಮಾಡಿ ತೋರಿಸುವ ಪ್ರಸಕ್ತ ಕೃತಿ ಇಂದಿನ ಬಿಕ್ಕಟ್ಟುಗಳಿಗೆ ಬಿಡುಗಡೆಯ ಒಳನೋಟಗಳನ್ನು ಸಹ ಒದಗಿಸುತ್ತದೆ. ವಿಮರ್ಶೆಯ ಸಾಧನಗಳಲ್ಲಿ ತುಲನೆ ಬಹು ಮುಖ್ಯವಾದದ್ದು. ಒಂದೇ ಪರಂಪರೆಯಲ್ಲಿನ ಕೃತಿಗಳನ್ನು ತೂಗಿ ನೋಡಿದಾಗ ಹೊಸ ಅರ್ಥಲೋಕ ಹೇಗೆ ತೆರೆದುಕೊಳ್ಳಬಲ್ಲದು ಎಂಬುದಕ್ಕೂ ಈ ಕೃತಿ ಮಾದರಿಯಾಗಿದೆ.
“ಪ್ರಭುತ್ವಕ್ಕೆ ಸೃಜನಶೀಲತೆ ಡೊಗ್ಗು ಸಲಾಮು ಹಾಕುತ್ತಿರುವ ಸಂದರ್ಭದಲ್ಲಿ ಪಂಪನ ಸೃಜನಶೀಲ ಪ್ರತಿಭೆ ಪ್ರಭುತ್ವವನ್ನು ಎದುರಿಸಿದ ಕ್ರಮ ಅತ್ಯಂತ ಪ್ರಸ್ತುತ. ಧಾರ್ಮಿಕ ಸಂಸ್ಥೆಗಳು ಸೃಷ್ಟಿಸುತ್ತಿರುವ ಹಿಂಸೆ, ಭಯೋತ್ಪಾದನೆಯ ಹೊತ್ತಿನಲ್ಲಿ ವಚನಕಾರರು ಧರ್ಮದ ಸಾಂಸ್ಥಿಕ ರೂಪವನ್ನು ವಿರೋಧಿಸಿದ ಕ್ರಮ ಅಧ್ಯಯನಯೋಗ್ಯ. ಪ್ರವೃತ್ತಿ – ಸಂಸ್ಕೃತಿಗಳ ಸಂಘರ್ಷವನ್ನು ಜನ್ನ ಚಿತ್ರಿಸಿದ್ದು, ಲೌಕಿಕ ಅಲೌಕಿಕಗಳನ್ನು ರತ್ನಾಕರ ವರ್ಣಿ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡದ್ದು, ಕನಕದಾಸರು ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸಿದ್ದು, ಕುಮಾರವ್ಯಾಸ ಭಕ್ತಿಯ ಆವೇಶದಲ್ಲೂ ಕಲಾತ್ಮಕ ಎಚ್ಚರವನ್ನು ಕಾಯ್ದುಕೊಂಡದ್ದು ಈ ಎಲ್ಲದರ ಸೂಕ್ಷ್ಮ ಅಧ್ಯಯನ ಸಮಕಾಲೀನ ಸಾಹಿತ್ಯ – ಸಂಸ್ಕೃತಿಗೆ ಮಾತ್ರವಲ್ಲ, ನಮ್ಮ ಬದುಕಿಗೂ ಮಾರ್ಗದರ್ಶನ ನೀಡಬಲ್ಲುದು. ಎಲ್ಲಕ್ಕಿಂತ ಮುಖ್ಯವಾಗಿ ‘ಜನ ಬದುಕಬೇಕೆಂದು ಕಾವ್ಯಮುಖದಿಂ ಪೇಳ್ದೆನನಪೇಕ್ಷೆಯಿಂದ’ ರಾಘವಾಂಕನ ಈ ಪರಿಕಲ್ಪನೆಯಂತೂ ಭಾರತೀಯ ಕಾವ್ಯಮೀಮಾಂಸೆಯಲ್ಲಾಗಲೀ, ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಾಗಲೀ ಕಾಣಸಿಗದ, ಕನ್ನಡಕ್ಕೇ ವಿಶಿಷ್ಟವಾದ ಮಹತ್ವದ ಕಾವ್ಯ ಚಿಂತನೆಯಾಗಿದೆ ‘ಹೀಗೆ ನಮ್ಮ ಸಾಹಿತ್ಯದ ನಿನ್ನೆ ಮೊನ್ನೆಗಳ ಪುನರಾವಲೋಕನ, ವಿಚಾರ ವಿಮರ್ಶೆ ಈ ಕೃತಿಯಲ್ಲಿ
ಹಾಳತವಾಗಿ ಪಡಿಮೂಡಿದೆ. ಶ್ರೇಷ್ಠ ಸಂಸ್ಕೃತಿ ಚಿಂತಕರಾಗಿರುವ ನರಹಳ್ಳಿ ಅವರ ವಿಮರ್ಶೆಯ ಬರವಣಿಗೆ ಇಲ್ಲಿ ಚೇತೋಹಾರಿಯಾಗಿದ್ದು, ಅಷ್ಟೇ ಲವಲವಿಕೆಯಿಂದ ಕೂಡಿದೆ. ಸಮಚಿತ್ತದ ಸಮತೂಕದ ನಿರರ್ಗಳ ವಿಚಾರ ಸರಣಿಯಿಂದ ಕೂಡಿರುವ ಒಂದು ಅಪೂರ್ವ ಗ್ರಂಥವನ್ನು ರಚಿಸಿದ ಡಾ. ನರಹಳ್ಳಿ ಅವರು ಕನ್ನಡಿಗರೆಲ್ಲರ ಕೃತಜ್ಞತೆಗೂ ಪಾತ್ರರಾಗುತ್ತಾರೆ. ಕನ್ನಡ ಸಾಹಿತ್ಯ ಇಟ್ಟ ಹೆಜ್ಜೆ ತೊಟ್ಟರೂಪ, ಅದರ ಮಹತಿಯನ್ನು ಎತ್ತಿ ಹೇಳುವಲ್ಲಿ ನಡೆದ ವಾಗ್ವಾದಗಳ ಕುರಿತ ಈ ಅಧ್ಯಯನ ನಮ್ಮ ಅರಿವನ್ನು ನಿಶಿತಗೊಳಿಸುತ್ತದೆ ಎಂದರೆ ಅತ್ಯುಕ್ತಿಯಾಗದು.
“ಇಂಥ ಪರಂಪರೆಯ ವಾರಸುದಾರರಾದ ನಾವು ವಾಗ್ವಾದಗಳ ಮೂಲಕವೇ ಇಂದು ಕನ್ನಡವನ್ನು, ಕನ್ನಡ ಜಗತ್ತನ್ನು ಕಟ್ಟಬೇಕಾಗಿದೆ. ವಾಗ್ವಾದಗಳನ್ನು ಹತ್ತಿಕ್ಕುವ ಪ್ರತಿಷ್ಠಿತ ಶಕ್ತಿಗಳ ವಿರುದ್ಧ ಸೆಣಸಬೇಕಿದೆ. ಸಂವಾದ ಸಾಧ್ಯವಾಗದ ಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಸತ್ಯವನ್ನು ತಿಳಿಯಬೇಕಾಗಿದೆ. ನಮ್ಮೆಲ್ಲರ ಹೃದಯ ರಣರಂಗವಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಸಂವೇದನಾಶೀಲ ಮನಸ್ಸುಗಳ ಮೇಲಿದೆ” ಎಂಬುದನ್ನು ಅವರು ಸಕಾರಣವಾಗಿ ಈ ಕೃತಿಯಲ್ಲಿ ಮನದಟ್ಟು ಮಾಡಿಕೊಟ್ಟಿದ್ದಾರೆ. ವಿಮರ್ಶೆ ಸಹ ಒಂದು ಸೃಜನಶೀಲ, ಸಾಂಸ್ಕೃತಿಕ ಚಟುವಟಿಕೆ ಎಂಬುದಕ್ಕೂ ಈ ಕೃತಿ ಸಾಕ್ಷಿಯಾಗಿದೆ. ಬಹು ಆಯಾಮಗಳ, ಪ್ರಖರ ಚಿಂತನೆಯ, ವಿಚಾರ ವಿಮರ್ಶೆಯ ಈ ಕೃತಿಗಾಗಿ ಡಾ. ನರಹಳ್ಳಿ ಅವರಿಗೆ ವಿಶೇಷವಾದ ಅಭಿನಂದನೆಗಳು.
-ಪ್ರೊ. ಜಿ. ಎನ್. ಉಪಾಧ್ಯ. ಮುಂಬೈ