ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ಕೋಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಮಂಗಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 21 ಫೆಬ್ರವರಿ 2025ರಂದು ಬೆಳಿಗ್ಗೆ ಗಂಟೆ 8-45ಕ್ಕೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬನವರು ಕನ್ನಡ ಸಾಂಸ್ಕೃತಿಕ ದಿಬ್ಬಣದ ಮೆರವಣಿಗೆಯನ್ನು ಉದ್ಘಾಟನೆ ಮಾಡಲಿದ್ದು, ಬಳಿಕ ಭುವನೇಶ್ವರಿಗೆ ಪುಷ್ಪಾರ್ಚನೆ, ರಾಷ್ಟ್ರ, ಪರಿಷತ್ತಿನ ಹಾಗೂ ಸಮ್ಮೇಳನ ಧ್ವಜಾರೋಹಣ ನಡೆಯಲಿದೆ. 10-00 ಗಂಟೆಗೆ ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಡಾ. ಎಂ. ಮಹೇಶ್ ಜೋಶಿ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಪುಸ್ತಕ ಮತ್ತು ಇತರ ಮಳಿಗೆಗಳು ಉದ್ಘಾಟನೆಗೊಳ್ಳಲಿದೆ. ಕೊಳಲು ಸಂಗೀತ ವಿದ್ಯಾಲಯ (ರಿ.) ಇರಾ ಇದರ ವಿದ್ಯಾರ್ಥಿಗಳಿಂದ ನಾಡಗೀತೆ ಮತ್ತು ಹಚ್ಚೇವು ಕನ್ನಡದ ದೀಪ ಗಾಯನ ಪ್ರಸ್ತುತಗೊಳ್ಳಲಿದೆ. ಗಂಟೆ 12-20ಕ್ಕೆ ನೃತ್ಯ ಸಿಂಚನ ಭಾರತೀ ನೃತ್ಯಾಲಯ ಮುಡಿಪು ಇದರ ವಿದುಷಿ ಉಮಾ ವಿಷ್ಣು ಹೆಬ್ಬಾರ್ ಮತ್ತು ಶಿಷ್ಯ ವೃಂದದವರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದು, ಬಳಿಕ ಲೇಖಕರ ನೂತನ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. 1-00 ಗಂಟೆಗೆ ಶ್ರೀಮತಿ ಅಪ್ಪಿ ಪಾಣಾರ ಇವರಿಂದ ಪಾಡ್ದನ, ಮಂತ್ರ ನಾಟ್ಯಕಲಾ ಗುರುಕುಲ (ರಿ.) ಉಳ್ಳಾಲ, ಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಶಾಲೆಯ ಸಿರಿ ಜಾನಪದ ನೃತ್ಯ ತಂಡ ಮತ್ತು ದೇರಳಕಟ್ಟೆಯ ಶ್ರೀ ವಿದ್ಯಾರತ್ನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಗಂಟೆ 1-55ಕ್ಕೆ ವಿಶೇಷ ಉಪನ್ಯಾಸ 01ರಲ್ಲಿ ‘ಕುದ್ಮುಲ್ ರಂಗರಾಯರು’ ಇವರ ಬಗ್ಗೆ ವಿದ್ಯಾರ್ಥಿನಿ ಶ್ರೀದೇವಿ ಕೆ. ಪುತ್ತೂರು ಇವರು ಉಪನ್ಯಾಸ ನೀಡಲಿದ್ದಾರೆ. ಗೋಷ್ಠಿ 01ರಲ್ಲಿ ‘ಕರಾವಳಿಯ ಲೋಕದೃಷ್ಠಿ’ ಸಂವಾದದಲ್ಲಿ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ‘ಸಾಹಿತ್ಯ’, ನಿವೃತ್ತ ಉಪನ್ಯಾಸಕರಾದ ಡಾ. ಕುಮಾರಸ್ವಾಮಿ ಹೆಚ್. ಇವರು ‘ಶಿಕ್ಷಣ’ ಮತ್ತು ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ಜಬ್ಬಾರ್ ಸಮೊ ಇವರು ‘ಧಾರ್ಮಿಕ’ದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಅಗಲಿದ ಗಣ್ಯರಿಗೆ ನುಡಿನಮನ ಮತ್ತು ನೆನಪು ಕಾರ್ಯಕ್ರಮದಲ್ಲಿ ಯಕ್ಷಗಾನದ ಮೊದಲ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಇವರಿಗೆ ಯಕ್ಷಗಾನ ಕಲಾವಿದ ಕದ್ರಿ ನವನೀತ ಶೆಟ್ಟಿ ಇವರಿಂದ ನುಡಿ ನಮನ ಮತ್ತು ಪ್ರಸಿದ್ಧ ಭಾಗವತರಾದ ಶ್ರೀಮತಿ ಶಾಲಿನಿ ಹೆಬ್ಬಾರ್ ಮತ್ತು ಯುವ ಭಾಗವತರಾದ ಕುಮಾರಿ ಹೇಮಾ ಸ್ವಾತಿ ಇವರಿಂದ ಗಾನ ನಮನ ಪ್ರಸ್ತುತಗೊಳ್ಳಲಿದೆ. ಗೋಷ್ಠಿ 02ರಲ್ಲಿ ತುಳು, ಬ್ಯಾರಿ, ಅರೆಭಾಷೆ ಮತ್ತು ಕೊಂಕಣಿ ಭಾಷೆಗಳ ಭಾಷಾ ಬಾಂಧವ್ಯ : ಸಂವಾದ ನಡೆಯಲಿದೆ. ಸಂಜೆ 5-50 ಗಂಟೆಗೆ ಭಾರತೀಗೋಪಾಲ್ ಶಿವಪುರ ಇವರಿಂದ ಸ್ಯಾಕ್ಸೋಫೋನ್ ವಾದನ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇವರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಜರಗಲಿದೆ.
ದಿನಾಂಕ 22 ಫೆಬ್ರವರಿ 2025ರಂದು ಬೆಳಿಗ್ಗೆ ಗಂಟೆ 8-15ಕ್ಕೆ ಪುತ್ತೂರಿನ ಡಾ. ಸುಚಿತ್ರಾ ಹೊಳ್ಳ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಗೋಷ್ಠಿ 03ರಲ್ಲಿ ‘ಹಿರಿಯರ ಕುರಿತು ಯುವ ಚಿಂತನೆ’ಯಲ್ಲಿ ಪಂಜೆ ಮಂಗೇಶರಾಯರು, ಶಿವರಾಮ ಕಾರಂತ ಮತ್ತು ಸಾರಾ ಅಬೂಬಕ್ಕರ್ ಇವರು ಕುರಿತು ವಿಚಾರ ಮಂಡನೆ, ಗೋಷ್ಠಿ 04ರಲ್ಲಿ ‘ಸಾಹಿತಿ-ಸಾಹಿತ್ಯ ರಸ ಪ್ರಸಂಗಗಳು’ ವಿಷಯದ ಬಗ್ಗೆ ಡಾ. ಜಯಪ್ರಕಾಶ ಮಾವಿನಕುಳಿ, ಶ್ರೀ ಬಿ.ಎಂ. ಹನೀಫ್ ಹಳೆಯಂಗಡಿ ಮತ್ತು ಡಾ. ನರೇಂದ್ರ ರೈ ದೇರ್ಲ ಇವರು ಸಂವಾದ ನಡೆಯಲಿದ್ದಾರೆ. ಗಂಟೆ 11-15ಕ್ಕೆ ವಿಶೇಷ ಉಪನ್ಯಾಸ 02ರಲ್ಲಿ ‘ರಾಣಿ ಅಬ್ಬಕ್ಕ’ ಇವರ ಬಗ್ಗೆ ಡಾ. ತುಕಾರಾಮ ಪೂಜಾರಿ ಇವರು ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೇಲ್ತೆನೆ ಇವರಿಂದ ಬ್ಯಾರಿ ಹಾಡುಗಳು ಪ್ರಸ್ತುತಗೊಳ್ಳಲಿದೆ. 12-00 ಗಂಟೆಗೆ ಗೋಷ್ಠಿ 05ರಲ್ಲಿ ‘ಕವಿತೆಗಳ ಕಥೆ : ಕವಿ ಕಾವ್ಯ ಸಂವಾದ’, 1-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಲಹರಿ ನಾಟ್ಯಾಲಯ (ರಿ.) ಪಜೀರು, ವಿದುಷಿ ರೇಷ್ಮಾ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದ ಮತ್ತು ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಬೆಳ್ಳಾರೆ ಇವರಿಂದ ‘ಕನ್ನಡ ನಾಟ್ಯ ವಿಲಾಸ’ ಪ್ರಸ್ತುತಿ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ವಿಶೇಷ ಉಪನ್ಯಾಸ 03ರಲ್ಲಿ ‘ಪ್ರಗತಿಶೀಲ ಧ್ವನಿ ನಿರಂಜನ – ನೂರರ ನೆನಪು’ ಶಿಕ್ಷಕರಾದ ಡಾ. ಸುಂದರ ಕೇನಾಜೆ ಇವರು ಉಪನ್ಯಾಸ ನೀಡಲಿದ್ದಾರೆ. 2-30 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಗಂಟೆ 2-50ಕ್ಕೆ ವಿಶೇಷ ಉಪನ್ಯಾಸ 04ರಲ್ಲಿ ‘ಚುಟುಕು ಸಾಹಿತ್ಯ ಬೆಳೆದು ಬಂದ ಬಗೆ’ ಎಂಬ ವಿಷಯದ ಬಗ್ಗೆ ಡಾ. ಯೋಗೀಶ್ ಕೈರೋಡಿ ಹಾಗೂ ‘ಕನ್ನಡ ವೈದ್ಯ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಡಾ. ಎಂ. ಅಣ್ಣಯ್ಯ ಕುಲಾಲ್ ಇವರಿಂದ ಉಪನ್ಯಾಸ ನಡೆಯಲಿದೆ. 3-30 ಗಂಟೆಗೆ ಬಹಿರಂಗ ಅಧಿವೇಶನ, ಸನ್ಮಾನ ಸಮಾರಂಭ ಮತ್ತು ಸಮಾರೋಪದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರಿಂದ ‘ಸನಾತನ ನಾಟ್ಯಾಂಜಲಿ’ ಭರತನಾಟ್ಯ ಕಾರ್ಯಕ್ರಮ, ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಮತ್ತು ಶ್ರದ್ಧಾ ನಾಯರ್ಪಳ್ಳ, ಶ್ರೀದೇವಿ ಕಲ್ಲಡ್ಕ, ಶ್ರೀವಾಣಿ ಕಾಕುಂಜೆ ಮತ್ತು ಮೇಧಾ ನಾಯರ್ಪಳ್ಳ ಇವರಿಂದ ಹಳೆಗನ್ನಡ ಕಾವ್ಯಗಳ ಆಯ್ದ ಪದ್ಯಗಳ ವಾಚನ ಪ್ರಸ್ತುತಗೊಳ್ಳಲಿದೆ.