ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಎಂ. ಗೋಪಾಲಕೃಷ್ಣ ಅಡಿಗರ 107ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 18 ಫೆಬ್ರವರಿ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಎಂ. ಗೋಪಾಲಕೃಷ್ಣ ಅಡಿಗರು ಯಾವುದೇ ನಾಡು ಹೆಮ್ಮೆ ಪಡುವಂತಹ ಅಸಾಮಾನ್ಯ ಕವಿ. ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ‘ಆಧುನಿಕ ಮಹಾಕಾವ್ಯ’ವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಇಪ್ಪತ್ತನೇ ಶತಮಾನದ ಸ್ವಾತಂತ್ರ್ಯೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಾಸ್ತವ ಅಡಿಗರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲವೆನ್ನಬಹುದು. ಅವರು ಬರದಂತೆ ಬದುಕಿದರು, ಬದುಕಿದಂತೆ ಬರೆದರು. ಅವರ ಹೋರಾಟದ ಹಾದಿ ನಮಗೆಲ್ಲರಿಗೂ ಮಾರ್ಗದರ್ಶಿ. ಡಾ. ಎಂ. ಗೋಪಾಲಕೃಷ್ಣ ಅಡಿಗರು ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ 1918ರ ಫೆಬ್ರವರಿ 18ರಂದು ಜನಿಸಿದರು. ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ.ಎ. (ಆನರ್ಸ್), ಎಂ.ಎ. (ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಇವರು ಮೈಸೂರಿನ ಶಾರದಾ ವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮುಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿ ತಮ್ಮ ವಿಶ್ರಾಂತ ಜೀವನವನ್ನು ಬೆಂಗಳೂರಿನಲ್ಲಿ ಕಳೆದರು. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ ಅಡಿಗರು ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೂ ಸ್ಪರ್ಧಿಸಿದ್ದ ಅಡಿಗರು ಸದಾ ಬಂಡಾಯ ಗುಣವನ್ನು ಹೊಂದಿದ್ದರು. 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಐವತ್ತೊಂದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಆಸಾನ್ ಪ್ರಶಸ್ತಿ, ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದರು. ಅವರ ಹೋರಾಟದ ಮನೋಭಾವ ನಮಗೆಲ್ಲರಿಗೂ ಮಾರ್ಗದರ್ಶಿ ಅವರ ‘ಕಟ್ಟುವೆವು ನಾವು’ ಕಟ್ಟುವ ಉತ್ಸಾಹಕ್ಕೆ ರೂಪಕದಂತಿದೆ” ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ಸ್ವವಿಮರ್ಶೆ ಅಡಿಗರ ಕಾವ್ಯದ ಪ್ರಧಾನವಾದ ಅಂಶ. ತನ್ನನ್ನು ಅರ್ಥಮಾಡಿಕೊಳ್ಳುತ್ತಲೇ ಸಮಾಜವನ್ನೂ, ಬದುಕನ್ನೂ ಅರ್ಥಮಾಡಿಕೊಳ್ಳುವ ಕ್ರಮ-ಅಡಿಗರ ಕಾವ್ಯರೀತಿ, ಅಡಿಗರ ಕಾವ್ಯವೆಲ್ಲ ‘ಹುಡುಕಾಟವೇ’ ಆಗಿದೆ. ಹೀಗಾಗಿ ಅವರ ಕಾವ್ಯದಲ್ಲಿ ಆಳ ಲಭ್ಯವಾಯಿತು. ಅಂತರಂಗದ ಶೋಧನೆಯಂತೆಯೇ ಬಹಿರಂಗದ ತಿಳುವಳಿಕೆಯೂ, ವ್ಯಕ್ತಿತ್ವ ವಿಕಾಸದ ಮುಖ್ಯ ಆಯಾಮ. ‘ಪರಿಪೂರ್ಣತೆ’ ಒಳಹೊರಗುಗಳ ಸಂಯೋಗದಲ್ಲಿ, ವ್ಯಕ್ತಿತ್ವ ವಿಕಾಸದ ಹಾದಿಯಲ್ಲಿ ತನ್ನ ಮುಖವನ್ನೂ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ದರ್ಶನ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮುಖ್ಯ ಹಂತವೆನ್ನಬಹುದು” ಎಂದು ಅಡಿಗರ ಕಾವ್ಯವನ್ನು ವಿಶ್ಲೇಷಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.