ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಎರಡೂ ಯಕ್ಷಗಾನದ ತವರೆಂದು ಪ್ರಸಿದ್ಧವಾಗಿದೆ. ಎಂ. ಗೋಪಾಲಕೃಷ್ಣ ಅಡಿಗರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ 18 ಫೆಬ್ರವರಿ 1918ರಲ್ಲಿ ಜನಿಸಿದರು. ತಮ್ಮ ಪರಿಸರದಲ್ಲಿ ಎಲ್ಲಿ ಯಕ್ಷಗಾನ ಪ್ರಸಂಗಗಳು ನಡೆಯುತ್ತಿದ್ದರೂ ಅಲ್ಲಿ ಹೋಗಿ, ಅದನ್ನು ನೋಡಿ ಬರುತ್ತಿದ್ದರು. ಅದು ಬರೀ ಮನೋರಂಜನೆಗೆ ಮಾತ್ರ ನೋಡುವುದಾಗಿರಲಿಲ್ಲ. ಆ ಹಾಡುಗಳು, ಕುಣಿತದ ಭಂಗಿಗಳು, ಹಾವಭಾವಗಳು ಎಲ್ಲವೂ ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿದವು. ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನು ಮತ್ತು ಕನ್ನಡದಲ್ಲಿ ಭಕ್ತಿಗೀತೆಗಳನ್ನು ರಚಿಸುತ್ತಿದ್ದರು. ಮಾತ್ರವಲ್ಲದೆ ತಾಳಮದ್ದಳೆಗಳಲ್ಲಿ ಅರ್ಥದಾರಿಯಾಗಿದ್ದರು. ತಂದೆ, ಅಜ್ಜ, ಅಜ್ಜಿ, ಸೋದರತ್ತೆ, ಚಿಕ್ಕಪ್ಪ ಎಲ್ಲರೂ ಪದ್ಯ ರಚನೆ ಮಾಡುವ ಕಲೆಯನ್ನು ಸಿದ್ಧಿಸಿಕೊಂಡವರು. ಇಷ್ಟು ಮಾತ್ರವಲ್ಲದೆ ಸೋದರತ್ತೆ ಪ್ರತಿ ರಾತ್ರಿ ಸಮಯದಲ್ಲಿ ಗದುಗಿನ ಭಾರತ, ಜೈಮಿನಿ ಭಾರತಗಳನ್ನು ರಾಗ ಬದ್ಧವಾಗಿ ಹಾಡುತ್ತಿದ್ದರು. ಈ ಪರಿಸರದ ಮಧ್ಯೆ ಬೆಳೆದವರು ಎಂ. ಗೋಪಾಲಕೃಷ್ಣ ಅಡಿಗರು. ಒಂದು ಕಡೆ ಯಕ್ಷಗಾನ, ಇನ್ನೊಂದು ಕಡೆ ಮನೆಯಲ್ಲಿಯೇ ಸಾಹಿತ್ಯದ ವಾತಾವರಣ ಇವೆರಡರಿಂದ ಅಡಿಗರು ಪ್ರಭಾವಿತರಾದರು. ಈ ವಾತಾವರಣದಲ್ಲಿ ತಾನು ತನ್ನ 13ನೇ ವಯಸ್ಸಿನಲ್ಲಿ ಪದ್ಯ ರಚನೆಗೆ ತೊಡಗಿದೆನೆಂದೂ, ಷಟ್ಪದಿ ಹಾಗೂ ಕಂದ ಪದ್ಯಗಳನ್ನು ರಚಿಸುತ್ತಿದ್ದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಬೈಂದೂರು ಕುಂದಾಪುರಗಳಲ್ಲಿ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮುಗಿಸಿದ ಅಡಿಗರಲ್ಲಿ ಓದುವ, ಕವನ ರಚನೆ ಮಾಡುವ ಅದಮ್ಯ ಉತ್ಸಾಹ ಇತ್ತು. ಕೋಟದ ಶಿವರಾಮ ಕಾರಂತರ ಅಣ್ಣ ಲಕ್ಷ್ಮೀನಾರಾಯಣ ಕಾರಂತರು ಅಡಿಗರಿಗೆ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದ ಗಂಭೀರ ಸ್ಥಿತಿಯಲ್ಲಿ ಅಡಿಗರೂ ಉತ್ಸಾಹದಿಂದ ಭಾಗಿಯಾದರು. ದೇಶಭಕ್ತಿಯ ಉತ್ಸಾಹದ ಭಾವನೆಗಳು ಕಾವ್ಯ ರಚನೆಯಲ್ಲಿ ಅವರಿಗೆ ಸಹಾಯಕವಾದವು. ಇದೇ ಸಂದರ್ಭದಲ್ಲಿ ಅವರ ಕವನಗಳು ಬೆಂಗಳೂರಿನ ‘ಸುಬೋಧ’ ಹಾಗೂ ಮಂಗಳೂರಿನ ‘ಬಡವರ ಬಂಧು’ ಪತ್ರಿಕೆಗಳಲ್ಲಿ ಪ್ರಕಟಗೊಂಡವು.
ಅಡಿಗರು ಎಸ್.ಎಸ್.ಎಲ್.ಸಿ.ಯ ನಂತರ ಮೈಸೂರು ಮಹಾರಾಜ ಕಾಲೇಜಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೇರಿಕೊಂಡರು. ಅಲ್ಲಿ ಕಳೆದ ದಿನಗಳು ಅವರ ಜೀವನದ ಸಂಕ್ರಮಣ ಅವಧಿಯಾಗಿತ್ತು. ಮೇರು ಸಾಹಿತಿಗಳ ಸ್ನೇಹದ ಒಡನಾಟಗಳು ಅವರ ಮುಂದಿನ ಸಾಹಿತ್ಯ ರಚನೆಗೆ ದಾರಿಯಾದವು. ‘ಭಾವತರಂಗ ಸಂಕಲನ’ ಇದೇ ಅವಧಿಯಲ್ಲಿ ರಚನೆಗೊಂಡದ್ದು. ಅವರ ‘ಒಳತೋಟಿ’ ಎಂಬ ಕವನ ಬಿ.ಎಂ. ಶ್ರೀ. ರಜತ ಮಹೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದೊಂದಿಗೆ ಸ್ವರ್ಣ ಪದಕವನ್ನು ಪಡೆಯಿತು. ಇಂಗ್ಲೀಷಿನಲ್ಲಿ ಎಂ.ಎ. ಪದವಿಯನ್ನು ಪಡೆದ ನಂತರ ಮೈಸೂರು ಶಾರದಾ ವಿಲಾಸ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಮುಂತಾದ ಕಡೆಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ‘ನ್ಯಾಷನಲ್ ಬುಕ್ ಟ್ರಸ್ಟ್’ನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದರು. ಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾದ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರನ್ ಈಶಾನ್ ಪ್ರಶಸ್ತಿ ಹಾಗೂ ಕವಿ ಸಮ್ಮಾನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ, ಹೊಸತನಕ್ಕೆ ಮಾರ್ಗದರ್ಶಕರಾದರು. ವಿದ್ಯಾರ್ಥಿಗಳನ್ನು ಸಾಹಿತ್ಯಿಕವಾಗಿ ಉತ್ತೇಜಿಸಲು ಪುಸ್ತಕಗಳನ್ನು ನೀಡುತ್ತಿದ್ದರು. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಆಶ್ರಯವನ್ನು ನೀಡುವುದರೊಂದಿಗೆ, ಕಾಲೇಜಿನ ಅಧ್ಯಯನಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವಲ್ಲಿ ತಮ್ಮ ಸಂಬಳದಿಂದಲೇ ಸಹಾಯವನ್ನು ಮಾಡುತ್ತಿದ್ದರು.
ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಪ್ರವರ್ತಕರಾದ ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಹೀಗೆ ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿ ಅನೇಕ ವೈಚಾರಿಕ ಲೇಖನಗಳನ್ನು ಬರೆದ ಖ್ಯಾತಿ ಅಡಿಗರದ್ದು. 1977ರಲ್ಲಿ ‘ಸಾಕ್ಷಿ ಪ್ರಕಾಶನ’ದ ಮೂಲಕ ಪ್ರಕಟಗೊಂಡ ‘ಸಮಗ್ರ ಗದ್ಯ’ ವೈಚಾರಿಕ ಲೇಖನಗಳನ್ನೊಳಗೊಂಡ ಒಂದು ಕೃತಿ. ಕನ್ನಡ ಕಾವ್ಯಕ್ಕೆ ಹೊಸ ದಾರಿಯನ್ನು ಕಂಡುಕೊಂಡು ಸಾಹಿತ್ಯ ರಚನೆಯಲ್ಲಿ ಅಳವಡಿಸಿಕೊಂಡದ್ದು ಅಡಿಗರ ಕಾವ್ಯ ರಚನೆಯಲ್ಲಿ ಎದ್ದು ಕಾಣುತ್ತದೆ. ಹೊಸ ಕಾಲದ ಹೊಸ ಹೊಸ ಅನುಭವಗಳಿಗೆ ಸ್ಪಂದಿಸುವ ಕಾವ್ಯವನ್ನು ರಚಿಸುವ ಮೂಲಕ ಹೊಸದೊಂದು ಮಾರ್ಗವನ್ನು ತೋರಿದ ಹೆಗ್ಗಳಿಕೆ ಕವಿ ಅಡಿಗರು. ‘ಭಾವ ತರಂಗ’, ‘ಕಟ್ಟುವೆವು ನಾವು’, ‘ಚಂಡೆ ಮದ್ದಳೆ’, ‘ವರ್ಧಮಾನ’, ‘ಇದನ್ನು ಬಯಸಿರಲಿಲ್ಲ’, ‘ಭೂಮಿಗೀತ’, ‘ನಡೆದು ಬಂದ ದಾರಿ’, ‘ಸುವರ್ಣ ಪುತ್ತಳಿ’, ‘ಬತ್ತಲಾರದ ಗಂಗೆ’, ‘ಮಾವೋ ಕವನಗಳು’ ಇತ್ಯಾದಿ ಇವರ ಕವನ ಸಂಕಲನಗಳು.
ಅಡಿಗರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಪ್ರೊಫೆಸರ್ ಕು.ಶಿ. ಹರಿದಾಸಭಟ್ಟ ಮತ್ತು ಇತರ ಸಾಹಿತ್ಯ ಅಭಿಮಾನಿಗಳು ಸೇರಿ ಒಂದು ವೈಭವದ ಸಮಾರಂಭವನ್ನು ನಡೆಸಿದರು. ಅಲ್ಲಿ ವಿಮರ್ಶಕರುಗಳಾದ ಲಂಕೇಶ್, ಚಂದ್ರಶೇಖರ ಕಂಬಾರ, ಶಾಂತಿನಾಥ ದೇಸಾಯಿ, ಗಿರಡ್ಡಿ ಗೋವಿಂದರಾಜ, ಬನ್ನಂಜೆ ಗೋವಿಂದಾಚಾರ್ಯ ಮುಂತಾದವರು ಭಾಗವಹಿಸಿದರು. ವಿಮರ್ಶಕ ನಿಸ್ಸಿo ಇಝೆಕಿಲ್ “ಅಡಿಗರು ಕನ್ನಡದಲ್ಲಿ ಬರೆಯುತ್ತಿರುವ ಒಬ್ಬ ಶ್ರೇಷ್ಠ ಭಾರತೀಯ ಕವಿ’ ಎಂದು ಅಡಿಗರ ಬಗ್ಗೆ ಹೇಳಿದ ಹೆಮ್ಮೆಯ ನುಡಿಗಳು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ವರ್ಧಮಾನ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳದ ಪ್ರತಿಷ್ಠಿತ ಕುಮಾರಸ್ವಾಮಿ ಪ್ರಶಸ್ತಿ, ‘ಸಮಗ್ರ ಕಾವ್ಯ’ಕ್ಕೆ ಮೂಡಬಿದ್ರೆ ವರ್ಧಮಾನ ಪ್ರಶಸ್ತಿ, 1986ರಲ್ಲಿ ಮಧ್ಯಪ್ರದೇಶ ಸರಕಾರ ಆರಂಭಿಸಿದ ಮೊತ್ತ ಮೊದಲ ಕಬೀರ್ ಸನ್ಮಾನ ಪ್ರಶಸ್ತಿಗೆ ಅಡಿಗರು ಭಾಜನರಾದರು. ಪ್ಯಾರಿಸ್, ಯುಗೋಸ್ಲಾಬಿಯ ದೇಶಗಳಲ್ಲಿ ನಡೆದ ವಿಶ್ವ ಕವಿ ಸಮ್ಮೇಳನಕ್ಕೆ ಆಹ್ವಾನ ಪಡೆದು ಭಾಗವಹಿಸಿದರು. ಥೈಲ್ಯಾಂಡಿನ ಬ್ಯಾಂಕಾಕ್ ಆಫ್ ನಗರದಲ್ಲಿ ನಡೆದ ಜಾಗತಿಕ ಕವಿ ಸಮ್ಮೇಳನದಲ್ಲಿ ‘ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಸಂಸ್ಥೆ’ ಅಡಿಗರಿಗೆ ‘ಡಾಕ್ಟರ್ ಆಫ್ ಲಿಟರೇಚರ್’ ಪ್ರಶಸ್ತಿ ನೀಡಿ ಗೌರವಿಸಿತು. ಇವೆಲ್ಲವೂ ಅಡಿಗರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅದ್ಭುತ ಸಾಧನೆಗೆ ದೊರೆತ ಗೌರವ. ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಪ್ರವರ್ತರಾಗಿ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಇವರು 04 ಏಪ್ರಿಲ್ 1992ರಲ್ಲಿ ಇಹವನ್ನು ತ್ಯಜಿಸಿದರು.
ಅದಮ್ಯ ಚೇತನಕ್ಕೆ ಅನಂತ ನಮನ.
– ಅಕ್ಷರೀ