ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆ, ಕಾವ್ಯ, ನಾಟಕ ಹೀಗೆ ಹಲವು ಸಾಹಿತ್ಯ ಪ್ರಕಾರಗಳು ಬೆಳೆದು ಬಂದಿರುವುದನ್ನು ನಾವು ಗಮನಿಸಿದ್ದೇವೆ. ಅವುಗಳ ಸಾಲಿನಲ್ಲಿಯೇ ವಿಶಿಷ್ಟವಾದ ಒಂದು ಸಾಹಿತ್ಯ ಪ್ರಕಾರವೆಂದು ಗುರುತಿಸಿಕೊಳ್ಳುವ ಸಾಹಿತ್ಯ ವಿಭಾಗವೇ ಲಲಿತ ಪ್ರಬಂಧ ಪ್ರಕಾರವಾಗಿದೆ. ಇದು ಆಧುನಿಕ ಕನ್ನಡ ಸಾಹಿತ್ಯಲೋಕದಲ್ಲಿ ಹೊಸಪ್ರಕಾರವೆಂದು ಗುರುತಿಸಿಕೊಳ್ಳಬಹುದಾಗಿದೆ. ಲಲಿತ ಪ್ರಬಂಧಗಳು ಹಾಸ್ಯ ಮಿಶ್ರಿತವಾದ ಸಾಹಿತ್ಯ ಪ್ರಕಾರವಾಗಿದೆ. ಲಲಿತ ಪ್ರಬಂಧಗಳು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದ್ದು ತನ್ನ ವ್ಯಾಪ್ತಿ, ಪರಿಧಿಯನ್ನುಯೊಳಗೊಂಡಿದೆ. ಇಲ್ಲಿ ಕವಿಯ ಕವಿತ್ವ ಗುಣ ಮತ್ತು ವಸ್ತುವನ್ನು ನೋಡಿದ ಬಗೆಯಲ್ಲಿ ಅದನ್ನು ನಿರೂಪಿಸುವ ನಿರೂಪಣೆಯೇ ಮುಖ್ಯವಾಗುತ್ತದೆ. ಅಪಾರವಾದ ಲೋಕಾನುಭವ ಮತ್ತು ಅದನ್ನು ಕಾಣುವ, ವ್ಯಕ್ತಪಡಿಸುವ ರೀತಿ, ಬಗೆ ತಿಳಿಯಾದ ಹಾಸ್ಯದ ಮೂಲಕ ನಿರೂಪಿಸುವುದು. ಓದುಗನಿಗೆ ಅದು ಕಚಗುಳಿಯನ್ನು ನೀಡುತ್ತದೆ. ದಿನನಿತ್ಯದ ಘಟನೆಗಳು, ಸನ್ನಿವೇಶಗಳೇ ಇಲ್ಲಿ ಮುಖ್ಯ ವಸ್ತುಗಳನ್ನಾಗಿಟ್ಟುಕೊಂಡು ವಿಡಂಬನೆಯ ಮೂಲಕ ಹಾಸ್ಯಮಿಶ್ರಿತವಾಗಿ ಸಾಹಿತ್ಯಾತ್ಮಕವಾಗಿ ಅಕ್ಷರ ರೂಪದಲ್ಲಿ ವಿಷಯವನ್ನು ಮಂಡಿಸುವುದನ್ನು ಕಾಣಬಹುದಾಗಿದೆ. ವಾಸ್ತವಕ್ಕೆ ಸನಿಹವಿರುವ ಅಥವಾ ಕಲ್ಪನೆಯ ವಿಚಾರಗಳನ್ನು ಇಲ್ಲಿ ಅನಾವರಣಗೊಳಿಸಲಾಗುತ್ತದೆ.
ಭಾವಲೋಕದ ಮನಸ್ಸಿನ ಭಾವನೆಗಳನ್ನು ಸಮಾಜದಲ್ಲಿರುವ ಓರೆಕೋರೆಗಳನ್ನು ಹಾಸ್ಯಮಿಶ್ರಿತವಾಗಿಯೇ ಹೇಳುವ ಅಥವಾ ಬರಹದ ಮೂಲಕ ವಿವರಿಸುವ ಲೇಖಕನ ಪ್ರತಿಭೆ ಇಲ್ಲಿ ಅನಾವರಣಗೊಳ್ಳುತ್ತದೆ. ಓದುಗನಿಗೆ ಅಥವಾ ಸಹೃದಯನಿಗೆ ಸರಳ ಸುಂದರ ಶೈಲಿಯಲ್ಲಿ ವಿಷಯವನ್ನು ಮನಮುಟ್ಟುವಂತೆ ಕದತಟ್ಟುವಂತೆ ಕಥೆಯನ್ನು ಕಟ್ಟಿಕೊಡುವುದು ಲಲಿತ ಪ್ರಬಂಧದ ಮಾದರಿಯಾಗಿದೆ. ಹೀಗೆ ಲಲಿತ ಪ್ರಬಂಧ ವಿಭಾಗದಲ್ಲಿ ಹಲವಾರು ಕವಿ, ಕವಯತ್ರಿಯರು ಸಾಹಿತ್ಯ ಕೃಷಿ ಮಾಡಿರುವುದನ್ನು ನಾವು ಅವರ ಬರಹಗಳ ಮೂಲಕ ನೋಡಿದ್ದೇವೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬೆಳದು ಬಂದ ಲಲಿತ ಪ್ರಬಂಧ ಪ್ರಕಾರದಲ್ಲಿ ಹಲವಾರು ಕವಿಗಳು, ಲೇಖಕರನ್ನು ನಾವು ಗುರುತಿಸಬಹುದಾಗಿದೆ. ಎ.ಎನ್. ಮೂರ್ತಿರಾವ್, ರಾ.ಕು, ತೀ.ನಂ. ಶ್ರೀಕಂಠಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಕುವೆಂಪು, ಅ.ರಾ. ಮಿತ್ರ, ಚಂದ್ರಶೇಖರ ಆಲೂರು, ಕೃಷ್ಣಮೂರ್ತಿ ಬಿಳಿಗೆರೆ ಮುಂತಾದವರು. ಅ.ರಾ. ಮಿತ್ರ ಅವರ ಬದುಕು ಬರಹವನ್ನು ಸಂಕ್ಷಿಪ್ತವಾಗಿ ನೋಡುವುದಾದರೆ ಕನ್ನಡ ಆಧುನಿಕ ಲಲಿತ ಪ್ರಬಂಧ ಸಾಹಿತ್ಯ ಪ್ರಕಾರಕ್ಕೆ ಅವರು ಅವರದ್ದೇ ಆದ ಕೊಡುಗೆಯನ್ನು ನೀಡಿರುವುದನ್ನು ಕಾಣಬಹುದಾಗಿದೆ.
ಅ.ರಾ. ಮಿತ್ರ ಅವರು ಶಿಕ್ಷಕರಾಗಿದ್ದು ಅಪಾರವಾದ ಅನುಭವ, ಓದಿನ ಹಿನ್ನಲೆಯಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದರು. ಸಾಹಿತ್ಯ ಲೋಕದಲ್ಲಿ ಅವರು ಉತ್ತಮ ವಿಮರ್ಶಕರಾಗಿ ನಾಡಿನೆಲ್ಲಡೆ ಅಪಾರವಾದ ಓದುಗ ಬಳಗವನ್ನು ಹೊಂದಿದ್ದರು. ಹಾಸನ ಜಿಲ್ಲೆ ಬೇಲೂರಿನಲ್ಲಿ 25 ಫೆಬ್ರವರಿ 1935ರಲ್ಲಿ ಜನಿಸಿದ ಅವರು ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರೆಂದೇ ಅವರು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು 1955ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸರ್ಕಾರಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರವಾಚಕರಾಗಿ, ಮಡಿಕೇರಿ, ತುಮಕೂರು, ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ತಾನು ಹೇಳಬೇಕಾದ ವಿಚಾರ ಸಂಗತಿ-ವಿಸಂಗತಿಗಳನ್ನು ತನ್ನ ಬರಹಗಳ ಮೂಲಕವೇ ಅವರು ಅಭಿವ್ಯಕ್ತಪಡಿಸುತ್ತಿದ್ದರು. ಎಲ್ಲರ ನಡುವೆ ಸದಾ ಕ್ರಿಯಾಶೀಲತೆಯಿಂದ ಇವರು ಹಾಸ್ಯ ಕಾರ್ಯಕ್ರಮಗಳಲ್ಲಿ ಗಂಭೀರವಾಗಿರುವ ವಿಚಾರವನ್ನು ಹಾಸ್ಯಾತ್ಮಕವಾಗಿಯೇ ಪರಿವರ್ತಿಸುವ ತಿಳಿಪಡಿಸುವ ಕಲೆಯೂ ಇವರಲ್ಲಿತ್ತು. ಇವರು ಕೈಲಾಸಂ, ಹಿರಿಯಡ್ಕ ರಾಮರಾಯ, ಮಲ್ಲ ಚಂದ್ರಗುಪ್ತ ಮೌರ್ಯ ಹಲವಾರು ಲಲಿತ ಪ್ರಬಂಧಗಳ ಸಾಹಿತ್ಯ ಕೃತಿಗಳನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ.
‘ಹಾಸ್ಯದ ಮೋಡಿಗಾರ’ ಎಂದು ಪ್ರಸಿದ್ಧರಾಗಿರುವ ಇವರು ‘ಬಾಲ್ಕಿನಿಯ ಬಂಧುಗಳು’, ‘ಮಿತ್ರ ಪ್ರಬಂಧ ಸಂಕಲ್ಪಗಳು’, ‘ಯಾರೋ ಬಂದಿದ್ದರು’ ಎಂಬ ಲಲಿತ ಪ್ರಬಂಧಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸದಾ ಅಧ್ಯಯನಶೀಲರಾಗಿರುವ ಇವರು ವಿಮರ್ಶೆ, ವ್ಯಕ್ತಿ ಪರಿಚಯ, ಗ್ರಂಥ ಸಂಪಾದನೆ, ಅನುವಾದ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ‘ಒಳನೋಟಗಳು’, ‘ವಚನಕಾರರು’ ಮತ್ತು ‘ಶಬ್ದಕಲ್ಪ’ ಸಾಹಿತ್ಯ ವಿಮರ್ಶಾ ಕೃತಿಗಳಾಗಿವೆ. ‘ಪಂಡಿತನ ಸಂಕಟ’ ಹಾಸ್ಯ ಕೃತಿಯಾಗಿದ್ದು ಸಮಗ್ರ ಲಲಿತ ಪ್ರಬಂಧವಾಗಿ ಪ್ರಕಟವಾಗಿದೆ. ಇವರ ಸಾಹಿತ್ಯಕೃಷಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು ‘ವರ್ಧಮಾನ ಪ್ರಶಸ್ತಿ’, ‘ಗೊರೂರು ಸಾಹಿತ್ಯ ಪ್ರಶಸ್ತಿ’, ‘ಅನಕೃ ಪ್ರಶಸ್ತಿ’ ‘ಕಾವ್ಯಾನಂದ ಪುರಸ್ಕಾರ’ಗಳು ಪ್ರಮುಖವಾದವುಗಳು. ಇನ್ನಷ್ಟು ಸಾಹಿತ್ಯ ಕೃತಿಗಳು ಇವರ ಲೇಖನಿಯಿಂದ ಮೂಡಿ ಬಂದು ಸಾಹಿತ್ಯಲೋಕ ಶ್ರೀಮಂತವಾಗಲಿ ಎಂಬ ಅಶಯದೊಂದಿಗೆ ಹುಟ್ಟುಹಬ್ಬದ ಶುಭಾಶಯಗಳು.
ಕರುಣಾಕರ ಬಳ್ಕೂರು, ಕನ್ನಡ ಉಪನ್ಯಾಸಕರು
ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜು ಮಂಗಳೂರು.