ಬೆಂಗಳೂರು: ಎಂ. ಚಂದ್ರಶೇಖರ್ ಪ್ರತಿಷ್ಠಾನದ ಸಹಯೋಗದಲ್ಲಿ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹಮ್ಮಿಕೊಂಡಿದ್ದ ಗುಜರಾತಿ ಲೇಖಕಿ ಹಿಮಾಂಶಿ ಇಂದೂಲಾಲ್ ಶೆಲತ್ ಅವರಿಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 22 ಫೆಬ್ರವರಿ 2025ರ ಶನಿವಾರದಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು. ಈ ಪುರಸ್ಕಾರವು ರೂಪಾಯಿ 5 ಲಕ್ಷ ನಗದು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಕಾನೂನು ಸಚಿವ ಎಚ್. ಕೆ. ಪಾಟೀಲ ಮಾತನಾಡಿ “ಬಸವಣ್ಣ, ಕುವೆಂಪು ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಬದಲು, ಅವರನ್ನು ಭಾಷಣದ ಸರಕುಗಳನ್ನಾಗಿ ಬಳಸಲಾಗುತ್ತಿದೆ. ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಕುವೆಂಪು ಅವರ ಸಂದೇಶಗಳು ಪರಿಹಾರೋಪಾಯಗಳಾಗಿವೆ. ಆದರೆ, ಅವರು ಹೇಳಿದ್ದನ್ನು ಯಾರೂ ಪಾಲನೆ ಮಾಡುತ್ತಿಲ್ಲ. ‘ಮನುಜಮತ ವಿಶ್ವಪಥ’ ಎಂಬ ಸಂದೇಶ ನೀಡಿದ್ದರು. ಈ ಸಂದರ್ಭದಲ್ಲಿ ವಿಶ್ವಮಾನವ ಆಗುತ್ತೇನೆ ಎನ್ನುವವರು ಯಾರು ಇದ್ದಾರೆ? ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ, ಭ್ರಾತೃತ್ವ ಹಾಗೂ ಗಾಂಧೀಜಿ ಅವರು ಅಪೇಕ್ಷೆ ಮಾಡಿದ ಸಮಾಜ ನಿರ್ಮಾಣ ಸಾಧ್ಯ” ಎಂದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.