ಉಳ್ಳಾಲ: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದಲ್ಲಿ ಆಯೋಜಿಸಿದ 28ನೇ ವರ್ಷದ ‘ವೀರರಾಣಿ ಅಬ್ಬಕ್ಕ ಉತ್ಸವ’ ದಿನಾಂಕ 22 ಫೆಬ್ರವರಿ 2025ರ ಶನಿವಾರದಂದು ಉಳ್ಳಾಲ ನಗರಸಭೆಯ ಆವರಣದಲ್ಲಿರುವ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡಬಿದಿರೆಯ ಚೌಟರ ಅರಮನೆಯ ಮಮತಾ ಬಳ್ಳಾಲ್ ಮಾತನಾಡಿ “ಅಬ್ಬಕ್ಕಳ ಹೆಸರನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕು. ಕೆಚ್ಚೆದೆಯ ರಾಣಿ ಅಬ್ಬಕ್ಕಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಚಾರ, ಸ್ಥಾನ ಸಿಗದಿರುವುದು ಖೇದಕರ. ಹಾಗಿದ್ದರೂ ಎರಡು ದಶಕಗಳಿಂದ ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಪುಸ್ತಕ, ಯಕ್ಷಗಾನ, ನಾಟಕ, ಸಿ.ಡಿ, ಕಾರ್ಯಾಗಾರ, ಅಧ್ಯಯನ ಪೀಠ, ನೌಕೆಯೊಂದಕ್ಕೆ ರಾಣಿ ಅಬ್ಬಕ್ಕಳ ಹೆಸರಿಡುವ ಮೂಲಕ ಹೆಚ್ಚಿನ ಪ್ರಚಾರ ನೀಡುವ ಪ್ರಯತ್ನ ನಡೆದಿದೆ” ಎಂದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಮಾತನಾಡಿ “ಅಬ್ಬಕ್ಕ ಉತ್ಸವ ಆಚರಣೆಗೆ ಮುಂದಿನ ವರ್ಷದಿಂದ ರೂಪಾಯಿ 10ಲಕ್ಷವನ್ನು ಪ್ರಾಧಿಕಾರದಿಂದ ಮಂಜೂರು ಹಾಗೂ ಅಬ್ಬಕ್ಕ ಸಂಕಥನದ 2 ಸಾವಿರ ಪ್ರತಿಗಳನ್ನು ಮರು ಮುದ್ರಿಸಿ ಕೊಡಲಾಗುವುದು. ಅಬ್ಬಕ್ಕ ರಾಣಿಯ ಹೆಸರಲ್ಲಿ ಸಾಧಕ ಹೆಣ್ಣುಮಕ್ಕಳಿಗೆ ರೂಪಾಯಿ 1 ಲಕ್ಷ ಪ್ರೋತ್ಸಾಹ ಧನದೊಂದಿಗೆ ಪ್ರಶಸ್ತಿ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ” ಎಂದರು.
ನಗರಸಭೆಯ ಅಧ್ಯಕ್ಷೆ ಶಶಿಕಲಾ ವಿವಿಧ ಗೋಷ್ಠಿಗಳನ್ನು ಉದ್ಘಾಟಿಸಿದರು. ಉಪಾಧ್ಯಕ್ಷೆ ಸಪ್ನಾ ಹರೀಶ್ ಅಧ್ಯಕ್ಷತೆ ವಹಿಸಿದ್ದರು.ಸಂಸದ ಕ್ಯಾ. ಬ್ರಿಜೇಶ್ ಚೌಟ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ ಅಮೀನ್, ನಗರಸಭೆಯ ಪೌರಾಯುಕ್ತ ಮತ್ತಡಿ, ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್ ಉಚ್ಚಿಲ್, ಅಶ್ರಫ್, ಭಾಝಿಲ್ ಡಿಸೋಜ, ಇಸ್ಮಾಯಿಲ್, ಬಶೀರ್, ಮುಷ್ಕಕ್, ಶಾಂತಿ ವೀಣಾ ಡಿ’ಸೋಜ, ಹರೀಶ್, ಫಾರೂಕ್ ಉಳ್ಳಾಲ, ರವಿಶಂಕರ್, ಪುರುಷೋತ್ತಮ ಗಟ್ಟಿ, ಜಯ ಸುವರ್ಣ, ಮೋಹನ್ ಶೆಟ್ಟಿ, ಸಪ್ಪಾ ಶೆಟ್ಟಿ, ದಿವ್ಯಾ ಸತೀಶ್ ಶೆಟ್ಟಿ, ಮಂಜುನಾಥ ರೇವಣ್‌ಕರ್, ಜಗದೀಶ್ ಆಳ್ವ ಕುವೆತ್ತಬೈಲು, ಟಿ. ಎಸ್. ಅಬ್ದುಲ್ಲ, ಅಸ್ಕರ್ ಅಲಿ, ಹೈದರ್ ಪ್ರರ್ತಿಪ್ಪಾಡಿ, ಸದಾನಂದ ಬಂಗೇರ, ಸೀತಾರಾಮ್ ಬಂಗೇರ, ದೇವಕಿ ಉಳ್ಳಾಲ್, ಆಲಿಯಬ್ಬ ಉಪಸ್ಥಿತರಿದ್ದರು.
ಉತ್ಸವ ಸಮಿತಿ ಅಧ್ಯಕ್ಷರಾದ ದಿನಕರ್ ಉಳ್ಳಾಲ್ ಸ್ವಾಗತಿಸಿ, ಕೆ. ಎಂ. ಮಂಜನಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ನಿರೂಪಿಸಿ, ಶಶಿಕಾಂತಿ ಉಳ್ಳಾಲ್ ವಂದಿಸಿದರು.