ಮಂಗಳೂರು: ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಜರ್ನಿ ಥಿಯೇಟರ್ ಗ್ರೂಪ್, ಸೇಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಹಾಗೂ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ನಿರಂಜನ ಬದುಕಿನ ‘ನೂರರ’ ಅವಲೋಕನ ಕಾರ್ಯಕ್ರಮ ದಿನಾಂಕ 22 ಫೆಬ್ರವರಿ 2025ರ ಶನಿವಾರದಂದು ಮಂಗಳೂರಿನ ತುಳು ಭವನದಲ್ಲಿ ನಡೆಯಿತು.
ಕೃತಿಗಳ ಅವಲೋಕನ, ನಾಟಕ ರೂಪದಲ್ಲಿ ಕಾದಂಬರಿಯ ಪರಿಚಯ, ವಿದ್ಯಾರ್ಥಿಗಳಿಂದ ವಿಚಾರ ಮಂಡನೆ ಮುಂತಾದ ಕಾರ್ಯಕ್ರಮ ವೈವಿಧ್ಯಗಳು ಸಾಹಿತಿ ಕುಳ್ಳುಂದ ಶಿವರಾಯ ಎಂಬ ‘ನಿರಂಜನ’ರ ನೂರರ ನೆನಪಿಗೆ ಬಿಸುಪು ತುಂಬಿದವು.
ಕಾರ್ಯಕ್ರಮವನ್ನು ಡೋಲು ನುಡಿಸಿ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಮಾತನಾಡಿ “ವೈರುಧ್ಯಗಳು ತುಂಬಿದ್ದ ನಿರಂಜನರ ಬದುಕು ಕಾವ್ಯದ ಝರಿಯಂತಿತ್ತು. ನಿರಂಜನ ಸೇರಿದಂತೆ ಪ್ರಗತಿಶೀಲ ಕಾಲಘಟ್ಟದ ಸಾಹಿತಿಗಳು ಮಾರ್ಕ್ಸ್‌ವಾದಿಗಳಾಗಿದ್ದರು. ಸೈದ್ಧಾಂತಿಕವಾಗಿ ಒಂದು ಬಗೆಯ ಹಿಂಸೆಯನ್ನು ಒಪ್ಪಿಕೊಂಡವರು ಮಾರ್ಕ್ಸ್‌ವಾದಿಗಳು. ಆದರೆ ಅಹಿಂಸಾ ತತ್ವವನ್ನು ಪಾಲಿಸಿದ ಗಾಂಧೀವಾದಕ್ಕೆ ನಿರಂಜನರು ಮಾರುಹೋಗಿದ್ದರು. ಬಂಡವಾಳಶಾಹಿ ಒಲವಿನ ಸಮಾಜವಾದವನ್ನು ಪ್ರತಿಪಾದಿಸಿದ್ದ ನೆಹರು ಕೂಡ ನಿರಂಜನರಿಗೆ ಇಷ್ಟವಾಗಿದ್ದರು. ಈ ಎಲ್ಲಾ ಕಾರಣಗಳಿಂದ ನಿರಂಜನರದ್ದು ವಿಚಿತ್ರ ಸೈದ್ಧಾಂತಿಕ ಮಿಶ್ರಣವಾಗಿತ್ತು. ಅವರ ಕೃತಿಗಳಲ್ಲೂ ಮಾರ್ಕ್ಸ್‌ವಾದ, ಗಾಂಧಿ ತತ್ವ ಮತ್ತು ನೆಹರೂ ಚಿಂತನೆಗಳು ಅಂತರ್ಗತವಾಗಿವೆ. ನಿರಂಜನ ಅವರ ಪ್ರೇಮಪತ್ರಗಳು ಕೂಡ ಸಾಮಾನ್ಯ ವಿಷಯಗಳನ್ನು ಒಳಗೊಂಡು ಪೇಲವವಾಗಿರಲಿಲ್ಲ. ಅವುಗಳಲ್ಲಿ ಭಾವುಕತೆ ಇದ್ದು ಸಮಕಾಲೀನ ವಿಷಯಗಳ ಕನ್ನಡಿಯಾಗಿಯೂ ಕಾಣುತ್ತವೆ. ಅವರು ಕಾವ್ಯ ರಚನೆಯಲ್ಲಿ ತೊಡಗಿಸಿಕೊಳ್ಳದ ಕೊರತೆಯನ್ನು ಪ್ರೇಮಪತ್ರಗಳು ನೀಗಿಸಿವೆ. ಅವರ ಎಲ್ಲ ಕಥೆಗಳು ಮಹಿಳಾ ಪ್ರಧಾನವಾಗಿದ್ದು ಮಹಿಳೆಯೇ ಅವುಗಳ ಕೇಂದ್ರಬಿಂದು. ಇಂದಿಗೂ ಕಂಡುಬರುತ್ತಿರುವ ಅಸಮಾನ ಭೂಹಂಚಿಕೆಗೆ ಪರಿಹಾರ ಕಾಣಬೇಕಾಗಿದ್ದು ಪ್ರಭುತ್ವದ ವಿರುದ್ಧ ಸೆಟೆದು ನಿಲ್ಲುವ ಧೈರ್ಯ ಮೂಡಬೇಕಾಗಿದೆ. ಭಾಷೆಗಳು ಸಾಯುತ್ತಿರುವ ಕುರಿತು ಚರ್ಚೆ ಆಗಬೇಕಾಗಿದೆ. ಆ ಮೂಲಕ ನಿರಂಜನರ ಆಶಯಗಳು ಮತ್ತೆ ಮುನ್ನೆಲೆಗೆ ಬರಬೇಕಾಗಿದೆ” ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ “ನಿರಂಜನರ ಕೃತಿಗಳು ಸಿಗುತ್ತಿಲ್ಲ. ಹೀಗಾಗಿ ಕೆಲವು ಕೃತಿಗಳನ್ನಾದರೂ ಮರುಮುದ್ರಣ ಮಾಡುವ ಆಶಯ ಅಕಾಡೆಮಿಯದ್ದು” ಎಂದರು.
ತುಳು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ಸಂತೋಷ್ ಶೆಟ್ಟಿ ಹಿರಿಯಡ್ಕ, ಉದ್ಯಾವರ ನಾಗೇಶ್ ಕುಮಾರ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆಯಾದ ಶಕುಂತಲಾ ಶೆಟ್ಟಿ ಪಾಲ್ಗೊಂಡಿದ್ದರು. ಅಕ್ಷಯಾ ಆರ್.ಶೆಟ್ಟಿ ನಿರೂಪಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಜರ್ನಿ ಥೇಟರ್ ಗ್ರೂಪ್ ಮಂಗಳೂರು ಇವರಿಂದ ‘ಪದತರಂಗ’ ಹಾಗೂ ಸಂಗಮ ನಾಟಕ ಕಲಾವಿದೆರ್ (ರಿ.) ಮಣಿಪಾಲ ಇವರಿಂದ ‘ಮರಣ ಗೆಂದಿನಾಯೆ’ ತುಳು ನಾಟಕ ಪ್ರದರ್ಶನಗೊಂಡಿತು.