29 ಮಾರ್ಚ್ 2023, ತುಮಕೂರು: ಬೆಂಗಳೂರಿನ ರಂಗಚಕ್ರ ಕಲಾತಂಡದ ಸಹಯೋಗದೊಂದಿಗೆ ಕವಿತಾಕೃಷ್ಣ ಸಾಹಿತ್ಯ ಮಂದಿರವು ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯು ದಿನಾಂಕ 27-03-2023ರಂದು ತುಮಕೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ವಿಶೇಷ ಉಪನ್ಯಾಸವನ್ನು ನೀಡುತ್ತಾ ‘ಕ’ ಎಂದರೆ ಆನಂದವನ್ನು ‘ಲಾ’ ಎಂದರೆ ತರುವುದು ಎಂದು ಅರ್ಥ. ಈ ಆನಂದವು ಲೌಕಿಕ ಆನಂದವನ್ನು ಅಷ್ಟೇ ಅಲ್ಲದೆ ಆತ್ಮಾನಂದವನ್ನೂ ಬ್ರಹ್ಮಾನಂದವನ್ನೂ ತರಬಲ್ಲದು. ವಿಶ್ವ ರಂಗಭೂಮಿಯು ಜಗತ್ತಿಗೆ ಆನಂದವನ್ನು ಕೊಟ್ಟ ಅಪೂರ್ವ ವೇದಿಕೆಯಾಗಿದೆ ಅವರು ಅಭಿಪ್ರಾಯಪಟ್ಟರು. “ಭಾರತದ ರಂಗಭೂಮಿ ಕೂಡ ಅತ್ಯಂತ ಅಗ್ಗಳವಾದ ಕಾಣಿಕೆಯನ್ನು ನೀಡಿದೆ. ಕನ್ನಡ ರಂಗಭೂಮಿಯು ಅರಮನೆ, ಗುರುಮನೆಗಳಿಂದ ಪೋಷಿಸಲ್ಪಟ್ಟು, ಶ್ರೀಸಾಮಾನ್ಯರ ಮನವನ್ನು ಗೆದ್ದು ಮುಕ್ತ ವಿಶ್ವವಿದ್ಯಾನಿಲಯದಂತೆ ಹಲವು ಶತಮಾನಗಳ ಕಾಲ ಸೇವೆಯನ್ನು ಮಾಡಿದೆ. ನಾಟಕಕಾರರು. ನಟರು, ರಂಗತಜ್ಞರು, ಲಲಿತಕಲೆಗಳ ಕಲಾವಿದರು ಕೂಡಿ ವಿಶ್ವ ರಂಗಭೂಮಿಗೆ ಅವರ್ಣೀಯ ಕಾಣಿಕೆಯನ್ನು ನೀಡಿದ್ದಾರೆ” ಎಂದು ನುಡಿದರು.
ರಂಗಚಕ್ರದ ವಿದ್ಯಾರ್ಥಿಗಳು ನಡೆಸಿದ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಾಟಕಕಾರ ಡಾ. ಕವಿತಾಕೃಷ್ಣರನ್ನು ಆತ್ಮೀಯವಾಗಿ ಗೌರವಿಸಲಾಯಿತು. ರಂಗಚಕ್ರದ ಮಹೇಶ್ ಕುಮಾರ್ ಮಾತನಾಡಿ “ಕವಿತಾಕೃಷ್ಣರ ಉಪನ್ಯಾಸ ಚೇತೋಹಾರಿಯಾದದ್ದು, ಅಲ್ಲದೆ ಅಮೂಲ್ಯ ಸಂಗ್ರಹಾರ್ಹವಾದ ವಿಚಾರಧಾರೆಗಳಿಂದ ಕೂಡಿದೆ” ಎಂದು ಶ್ಲಾಘಿಸಿದರಲ್ಲದೆ ಇವರ ನಾಟಕಗಳನ್ನು ನಮ್ಮ ತಂಡವು ಅಭಿನಯಿಸುವ ಮೂಲಕ ಅವರಿಗೆ ಗೌರವವನ್ನು ಸಂದಾಯ ಮಾಡಿದೆ ಎಂದು ನುಡಿದರು. ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ರಂಗಕರ್ಮಿ ಮಹೇಶ್ ರವರನ್ನು ಕವಿತಾಕೃಷ್ಣ ಸಾಹಿತ್ಯ ಮಂದಿರವು ಸನ್ಮಾನಿಸಿತು. ರಂಗ ಕರ್ಮಿಗಳಾದ ನಿತ್ಯಾನಂದ, ಭವ್ಯ, ರೇಖಾ, ಅನಿಲ್ ಕುಮಾರ್, ರಂಜಿತ್, ಲೋಹಿತ್, ಅಜಯ್ ಆಚಾರ್ಯ ಉಪಸ್ಥಿತರಿದ್ದರು. ಕಲಾವಿದ ಎಂ. ಶರೀಫ್ ಸ್ವಾಗತಿಸಿದರು. ಕೃಷ್ಣಮೂರ್ತಿಯವರು ವಂದಿಸಿದರು.