ಉಡುಪಿ : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಹಾಗೂ ಮತ್ಸ್ಯರಾಜ್ ಗ್ರೂಪ್ ಮಲ್ಪೆಇವರ ಸಹಯೋಗದಲ್ಲಿ ಪಡುಕರೆ ಶ್ರೀ ದೇವಿ ಭಜನಾ ಮಂದಿರ ಇದರ ಸಹಕಾರದೊಂದಿಗೆ ಮಲ್ಪೆ ಪಡುಕರೆ ಕಡಲತಡಿ ಶ್ರೀ ದೇವಿ ಭಜನಾ ಮಂದಿರದ ಆವರಣದಲ್ಲಿ ದಿನಾಂಕ 02 ಮಾರ್ಚ್ 2025ರಂದು ಬೆಳಗ್ಗೆ 9-00 ಗಂಟೆಗೆ ಉಡುಪಿ- ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಭಜನೆ ಜುಗಲ್ ಬಂದಿ ಸ್ಪರ್ಧೆ ನಡೆಯಲಿದೆ.
ಬೆಳಗ್ಗೆ 9-00 ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ಪೆರ್ಡೂರು ಶ್ರೀ ಭೈರವನಾಥೇಶ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಜನೆ ನಡೆಯಲಿದ್ದು, ಬಳಿಕ ಭಜನೆ ಸ್ಪರ್ಧೆ ಆರಂಭವಾಗಲಿದೆ. ಸಂಜೆ ಗಂಟೆ 5-30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಉಭಯ ಜಿಲ್ಲೆಗಳ ಖ್ಯಾತ ಭಜನಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಭಜನ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ, ಉತ್ತಮ ಹಾಡುಗಾರ, ಉತ್ತಮ ತಬಲಾ ವಾದಕ ಮತ್ತು ಉತ್ತಮ ಹಾರ್ಮೋನಿಯಂ ವಾದಕ – ವೈಯುಕ್ತಿಕ ಬಹುಮಾನಗಳಿವೆ. ಇದೇ ಸಂದರ್ಭದಲ್ಲಿ ಭಜನಾ ಕ್ಷೇತ್ರಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ಪಡುಕರೆ ಕುದ್ರುಕರೆ ಶ್ರೀರಾಮಮಿತ್ರ ಭಜನಾ ಮಂಡಳಿಯ ಗೌರವಾಧ್ಯಕ್ಷ ಪಾಂಡು ಮೆಂಡನ್ ಹಾಗೂ ಉದ್ಯಾವರ ಕನಕೊಡ ಶ್ರೀ ಪಂಡರಿನಾಥ ಭಜನಾ ಮಂಡಳಿಯ ಶಿವರಾಮ ಪುತ್ರನ್ ಇವರನ್ನು ಸಮ್ಮಾನಿಸಲಾಗುವುದು.