ಮಂಗಳೂರು : ಶ್ರೀ ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ, ಅತ್ತಾವರ, ಇದರ 4ನೇ ವರ್ಷದ
ವಾರ್ಷಿಕೋತ್ಸವ ಸಮಾರಂಭವು ದಿನಾಂಕ 25 ಫೆಬ್ರವರಿ 2025ರಂದು ಮಂಗಳೂರಿನ ಅತ್ತಾವರದ ಶ್ರೀ ಉಮಾಮಹೇಶ್ವರ ದೇವಳದ ಆವರಣದಲ್ಲಿ ನಡೆಯಿತು. ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಯಕ್ಷ ಸಿರಿ’ ಪ್ರಶಸ್ತಿ ಪುರಸ್ಕೃತ ಯಕ್ಷಗುರುಗಳಾದ ಶ್ರೀ ರಾಮಾ ಸಾಲಿಯನ್ ಮಂಗಲ್ಪಾಡಿ ಇವರು ಯಕ್ಷರಂಗಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ “ಯಕ್ಷ ಮಾಣಿಕ್ಯ” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಯಕ್ಷಗುರುಗಳನ್ನು ಸನ್ಮಾನಿಸಿದ ಸಾಹಿತಿ, ನಾಟಕಕಾರ, ನಟ, ಹಾಗೂ ಖ್ಯಾತ ವಕೀಲರಾದ ಶ್ರೀ ಶಶಿರಾಜ್ ಕಾವೂರು ಮಾತಾನಾಡಿ “ಇವತ್ತು ಯುವ ಜನಾಂಗವನ್ನು ಯಕ್ಷ ರಂಗವು ಸೂಜಿಕಲ್ಲಿನಂತೆ ಸೆಳೆಯುತ್ತಿದೆ. ಮುಂದಿನ ಪರಂಪರೆಗೆ ಯಕ್ಷಗಾನ ಉಳಿಸುವ ನಿಟ್ಟಿನಲ್ಲಿ ಹಲವಾರು ಯುವಕರು, ಯವತಿಯರು, ಮಕ್ಕಳನ್ನು ತಯಾರಿಗೊಳಿಸುವ ನಿಟ್ಟಿನಲ್ಲಿ ಯಕ್ಷಗುರು ರಾಕೇಶ್ ರೈ ಹಾಗೂ ಶ್ರಿ ರಾಮ ಸಾಲಿಯನ್ ಮಂಗಲ್ಪಾಡಿ ಅಂತಹ ಶ್ರೇಷ್ಠ ಗುರುಗಳು ಇಂದು ಅವಿರತ ಶ್ರಮಿಸುತ್ತಿದ್ದಾರೆ” ಎಂದರು.
ಸಭಾ ಕಾರ್ಯಕ್ರಮವನ್ನು ಶ್ರೀ ಉಮಾಮಹೇಶ್ವರ ಕ್ಷೇತ್ರ ಅತ್ತಾವರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷೀಶ ಉಪಾಧ್ಯಾಯರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಅತ್ತಾವರ ಇಲ್ಲಿನ ಆಡಳಿತ ಮೊಕ್ತೆಸರರಾದ ಶ್ರೀ ಕೇಶವ ಮಳಲಿ, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ಶ್ರೀ ಸುಂದರ ಸುವರ್ಣ, ಭವಿಷ್ಯ ನಿಧಿ ಇಲಾಖೆ ಮಂಗಳೂರು ಇದರ ನಿವೃತ ಸೆಕ್ಷನ ಸೂಪರ್ ವೈಸರ್ ಆದ ಶ್ರೀ ಜಗನ್ನಾಥ ಹಾಗೂ ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಶಿಶಿರ್ ಬಲ್ಲಾಳ್ ಪ್ರಾರ್ಥನೆ ಗೈದು, ಶ್ರೀ ಉಮಾಮಹೇಶ್ವರ ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಶ್ರಿ ಜಯದೇವ ಸ್ವಾಗತಿಸಿ, ಶ್ರೀ ಚಂದ್ರಶೇಖರ್ ರೈ ಮಾಯಿಪಾಡಿ ಗುತ್ತು ಸನ್ಮಾನ ಪತ್ರವನ್ನು ವಾಚಿಸಿ, ಶ್ರೀಮತಿ ಅನಿತಾ ಪಿಂಟೋ ಕಾರ್ಯಕ್ರಮವನು ನಿರೂಪಿಸಿ, ಕಾರ್ಯದರ್ಶಿ ಶ್ರೀಮತಿ ಶೋಭಾ ಅತ್ತಾವರ ಧನ್ಯಾವಾದಗೈದರು.
ಸಭಾಕಾರ್ಯಕ್ರಮದ ಬಳಿಕ ಯಕ್ಷಗುರು ರಾಕೇಶ್ ರೈ ಆಡ್ಕ ಇವರ ನಿರ್ದೇಶನದಲ್ಲಿ ಉಮಾಮಹೇಶ್ವರ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ‘ಶ್ರಿ ದೇವಿ ಮಾಹಾತ್ಮೇ’ ಯಕ್ಷಗಾನ ಪ್ರದರ್ಶನಗೊಂಡಿತು.