ಹೊನ್ನಾವರ : ಗುಣವಂತೆಯ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿ ಕೆರೆಮನೆ ಇದರ 90ನೇ ವರ್ಷದ ಸಂಭ್ರಮ ಹಾಗೂ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -15ರ ಸಂಭ್ರಮ ಸಮಾರಂಭದಲ್ಲಿ ದಿನಾಂಕ 23 ಫೆಬ್ರವರಿ 2025ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ‘ಕಲಾಪೋಷಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ಮಾತನಾಡಿ “ಸಮಾಜದಲ್ಲಿ ಭಾಷಾ ಶುದ್ದತೆ ಹಾಗೂ ಜೀವನದ ಮೌಲ್ಯ ವರ್ಧನೆಯಾಗಬೇಕೆಂದರೆ ಯಕ್ಷಗಾನದೊಂದಿಗೆ ನಿಕಟ ಸಂಬಂಧವನ್ನು ಬೆಳೆಸಬೇಕಾಗುತ್ತದೆ. ಇಡಗುಂಜಿ ಯಕ್ಷಗಾನ ಮೇಳದೊಂದಿಗಿನ ತನ್ನ ನಾಲ್ಕು ದಶಕಗಳ ಸಂಬಂಧವನ್ನು ಸ್ಮರಿಸಿದರಲ್ಲದೆ, ಈ ಕ್ಷೇತ್ರವು ಬಹು ದೊಡ್ಡ ಕಲಾ ಕ್ಷೇತ್ರವಾಗಿ ಬೆಳೆದಿದೆ” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣಮೂರ್ತಿ ಮಂಜರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಪ್ರೊ. ಎಂ.ಎನ್ ವೆಂಕಟೇಶ, ಡಾ. ಮಿಲನ್ ಕುಲಕರ್ಣಿ, ಕೆರೆಮನೆ ನರಸಿಂಹ ಹೆಗಡೆ ಅಲ್ಲದೆ ಭಾಗವತ ವಿದ್ವಾನ್ ಗಣಪತಿ ಭಟ್, ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು ಇದರ ಅಧ್ಯಕ್ಷ ಡಾ. ಗಿರಿಧರ ಕಜೆ, ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ, ನವೋದಯ ಸೌರ ಮತ್ತು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ನ ಚೇರ್ಮನ್ ಹಾಗೂ ಸಿಇಒ ಡಾ. ಮಿಲಿಂದ್ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿವಾನಂದ ಹೆಗಡೆ ವಂದಿಸಿದರು, ಎಲ್.ಎಂ. ಹೆಗಡೆ ನಿರೂಪಿಸಿದರು.