ಬೆಂಗಳೂರು : ಎನ್.ಆರ್. ಕಾಲನಿಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದ ಕಲಾಭವನದಲ್ಲಿ ಅಂಕಿತ ಪುಸ್ತಕವು ಏರ್ಪಡಿಸಿದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಲೇಖಕ ಎಚ್. ದುಂಡಿರಾಜ್ ಇವರ ‘ಹದಿನಾಲ್ಕು ಕಿರು ಹಾಸ್ಯ ನಾಟಕಗಳು’, ಶ್ರೀ ರಘುನಾಥ ಚ.ಹ. ಇವರ ‘ಇಳಿಸಲಾಗದ ಶಿಲುಬೆ’ ಮತ್ತು ‘ಇಲ್ಲಿಂದ ಮುಂದೆಲ್ಲ ಕಥೆ’ ಹಾಗೂ ಶ್ರೀಮತಿ ಪಾರ್ವತಿ ಜಿ. ಐತಾಳ್ ಇವರ ‘ಅಂತರಂಗದ ಸ್ವಗತ’ ಕೃತಿಗಳು ದಿನಾಂಕ 02 ಮಾರ್ಚ್ 2025ರಂದು ಲೋಕಾರ್ಪಣೆಗೊಂಡವು.
ಈ ಸಮಾರಂಭದಲ್ಲಿ ಕೃತಿ ಅನಾವರಣಗೊಳಿಸಿದ ಪ್ರಸಿದ್ಧ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪೂರ್ವ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಇವರು ಮಾತನಾಡಿ “ಬದುಕಿನಲ್ಲಿ ಸಂಭವಿಸಿದ ಪ್ರಮುಖ ಘಟನೆಗಳನ್ನು ಸತ್ಯ ಹಾಗೂ ಪ್ರಾಮಾಣಿಕತೆಗಳಿಂದ ಸ್ಪೂರ್ತಿದಾಯಕವಾಗಿ ಓದುಗರೊಂದಿಗೆ ಹಂಚಿಕೊಳ್ಳುವುದು ಆತ್ಮಕಥೆಗಳ ಉದ್ದೇಶ. ‘ಅಂತರಂಗದ ಸ್ವಗತ’ ಎಂಬ ಪಾರ್ವತಿ ಜಿ. ಐತಾಳ್ ಇವರ ಈ ಆತ್ಮಕಥನದಲ್ಲಿ ನೇರ ಮತ್ತು ಸರಳ ನಿರೂಪಣೆಯ ಸೊಗಸಿದೆ. ಬಾಲ್ಯದಿಂದ ಆರಂಭಿಸಿ ಇದುವರೆಗಿನ ಎಲ್ಲ ಮುಖ್ಯ ಘಟನೆಗಳನ್ನು ಮನಮುಟ್ಟುವ ರೀತಿಯಲ್ಲಿ ಇವರು ಹಂಚಿಕೊಂಡಿದ್ದಾರೆ” ಎಂದು ಹೇಳಿದರು.
ಪತ್ರಕರ್ತ ಲೇಖಕ ಹೆಚ್.ಎಸ್. ಸತ್ಯನಾರಾಯಣ ಮತ್ತು ವಿಮರ್ಶಕ ಡಾ. ರವಿಕುಮಾರ್ ಕೃತಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಾರ್ವತಿ ಜಿ. ಐತಾಳ್, ಡುಂಡಿರಾಜ್ ಮತ್ತು ರಘುನಾಥ್ ಚ.ಹ. ಇವರುಗಳು ತಮ್ಮ ಕೃತಿ ರಚನೆಯ ಹಿನ್ನೆಲೆಯ ಬಗ್ಗೆ ಮಾತನಾಡಿದರು. ಪ್ರಕಾಶ್ ಕಂಬತ್ತಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.