ಬೆಂಗಳೂರು : ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷದೇಗುಲದ ಯಕ್ಷ ತರಬೇತಿ ವಿದ್ಯಾರ್ಥಿಗಳ ಕಲಿಕಾ ಪ್ರದರ್ಶನ ‘ಯಕ್ಷ ಪಯಣ’ದ ಉದ್ಘಾಟನೆಯು ದಿನನಕ 02 ಮಾರ್ಚ್ 2025ರಂದು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಯಕ್ಷದೇಗುಲದಲ್ಲಿ ಅನಾವರಣಗೊಂಡಿತು.
ಪ್ರತಿ ತಿಂಗಳು ‘ಯಕ್ಷದೇಗುಲ’ ಅಂಗಳದಲ್ಲಿ ಕಲಿತ ಪಾಠದ ಪ್ರದರ್ಶನ ನೀಡುವುದು ಈ ಯಕ್ಷ ಪಯಣದ ಕಾರ್ಯಕ್ರಮ.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕೆ. ಮೋಹನ್ ಮಾತನಾಡಿ “ಇದೊಂದು ಒಳ್ಳೆಯ ಕಾರ್ಯಕ್ರಮ. ಮೊದಲಾಗಿ ಸಭಾಕಂಪನ ಹಾಗೆ ಪೌರಾಣಿಕ ಕಥಾನಕಗಳ ಅನುಭವ, ಕನ್ನಡ ಭಾಷೆಯ ಮೇಲೆ ಪ್ರಭುತ್ವ, ಸ್ವರ ಸಾಮರ್ಥ್ಯ, ಅಭಿನಯ, ಕುಣಿತ, ಪ್ರತಿಭೆ ಹೀಗೇ ಎಲ್ಲಾ ವಿಚಾರದ ಬಗ್ಗೆ ಪ್ರದರ್ಶನದ ಮೂಲಕ ಸರಿಪಡಿಸಿಕೊಳ್ಳಬಹುದು” ಎಂದರು.
ಹಿರಿಯ ಯಕ್ಷಗಾನ ನೇಪಥ್ಯ ಕಲಾವಿದರಾದ ಕೆ. ಸುಶೀಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್, ಡಾ. ಪ್ರೀತಿ ವೈದ್ಯ, ವೀಣಾ ಮೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಕ್ಷ ಗುರುಗಳಾದ ಪ್ರಿಯಾಂಕ ಕೆ. ಮೋಹನ್‌ರವರು ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ “ಯಕ್ಷ ಪಯಣ”ದ ಮೊದಲ ಪ್ರದರ್ಶನ ನಡೆಯಿತು.

