ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಪರಿಷತ್ ಜಂಟಿ ಆಶ್ರಯದಲ್ಲಿ ನಡೆಯುವ ವಿದ್ಯಾರ್ಥಿ ತುಳು ಸಮ್ಮೇಳನದ ಪೂರ್ವಭಾವಿ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025ರಂದು ಮಂಗಳೂರಿನ ತುಳು ಭವನದಲ್ಲಿ ಜರಗಿತು.
ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಸುರತ್ಕಲ್ ಅವರು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ “ತುಳು ಭಾಷೆ ಹಾಗೂ ತುಳು ಸಂಸ್ಕ್ರತಿಯ ಬಗ್ಗೆ ಎಲ್ಲರೂ ಒಲವು ಬೆಳೆಸಿಕೊಳ್ಳಬೇಕು, ಪದವಿ ಶಿಕ್ಷಣದಲ್ಲಿ ತುಳು ಪಠ್ಯ ಎಲ್ಲಾ ಕಾಲೇಜುಗಳಿಗೆ ವಿಸ್ತರಣೆಯಾಗಲು ಈ ವಿದ್ಯಾರ್ಥಿ ತುಳು ಸಮ್ಮೇಳನ ಸಹಕಾರಿಯಾಗಲಿ” ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ ಮಾತನಾಡಿ “ತುಳು ಭಾಷೆ ನಮ್ಮೆಲ್ಲರ ಮಾತೃ ಭಾಷೆಯಾಗಿದ್ದು, ಭಾಷೆಯ ಬಗ್ಗೆ ಅಭಿಮಾನ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ” ಎಂದು ಹೇಳಿದರು.
ತುಳು ಪರಿಷತ್ ಗೌರವ ಅಧ್ಯಕ್ಷ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ “ಪ್ರೌಢ ಶಾಲೆ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ತುಳು ಪಠ್ಯ ಜಾರಿಯಲ್ಲಿದೆ. ಪಿ. ಯು. ಸಿ ತರಗತಿಯಲ್ಲೂ ತುಳು ಭಾಷೆಯನ್ನು ಅಳವಡಿಸಲು ಸರಕಾರ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಿನಿ ರೈ, ಅಮಿತ , ರಾಕೇಶ್ ಕುಂದರ್, ರಮೇಶ್ ಮಂಚಕಲ್, ಚಂದ್ರಕಲಾ ರಾವ್ ಉಪಸ್ಥಿತರಿದ್ದರು.
ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಸ್ವಾಗತಿಸಿ, ವಿದ್ಯಾರ್ಥಿನಿ ದಿಯಾ ಕಾರ್ಯಕ್ರಮ ನಿರ್ವಹಿಸಿ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ವಂದಿಸಿದರು.
ಎರಡನೇ ಹಂತದ ಈ ಸ್ಪರ್ಧಾ ಕೂಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ತುಳು ಭಾಷಣ ಸ್ಪರ್ಧೆ ಹಾಗೂ ತುಳು ಸಿನಿಮಾ ಗೀತೆಗಳ ಗಾಯನ ಸ್ಪರ್ಧೆ ನಡೆಯಿತು.
Subscribe to Updates
Get the latest creative news from FooBar about art, design and business.