ಮಲ್ಪೆ : ಮಲ್ಪೆಪಡುಕರೆಯ ಶ್ರೀದೇವಿ ಭಜನಾ ಮಂದಿರ ಪರಿಸರದ ಕಡಲತಡಿಯಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಪೆರ್ಡೂರು ಹಾಗೂ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಶ್ರೀದೇವಿ ಭಜನಾ ಮಂದಿರದ ಸಹಕಾರದಲ್ಲಿ ನಡೆಯುತ್ತಿರುವ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಯ್ದ ತಂಡಗಳ ಭಜನಾ ಜುಗಲ್ ಬಂದಿ ಸ್ಪರ್ಧೆಯು ದಿನಾಂಕ 02 ಮಾರ್ಚ್ 2025ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ಪರ್ಧೆಯನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದ ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ “ಮನದ ಅಂತರಾತ್ಮನೊಂದಿಗೆ ಸಖ್ಯ ಬೆಳೆಸಿ ಭಕ್ತಿಯ ಪರಿಪೂರ್ಣತೆ ಬೆಳೆಸಿಕೊಂಡು ಭಗವಂತನನ್ನು ಭಜಿಸಿದಾಗ ಆತ ಖಂಡಿತವಾಗಿಯೂ ನಮ್ಮೊಂದಿಗೆ ಸಂವಹಿಸುತ್ತಾನೆ. ದೇವರನ್ನು ಒಲಿಸಿಕೊಳ್ಳಲು ಭಜನೆಯೇ ಸುಲಭದ ದಾರಿ ಎಂದು ನಮ್ಮ ಪೂರ್ವಜರು ಮನೆಮನೆಗಳಲ್ಲಿ ದೇವರ ನಾಮವನ್ನು ಭಜಿಸುತ್ತಿದ್ದರು. ವಿದ್ಯಾವಂತ ಮಕ್ಕಳಲ್ಲಿ ಈ ಸಂಸ್ಕೃತಿ ನಶಿಸುತ್ತಿರುವುದು ಖೇದದ ಸಂಗತಿ” ಎಂದು ನುಡಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ನಾಗರಾಜ ಸುವರ್ಣ, ಶೇಖರ್ ಪುತ್ರನ್, ಮತ್ಸ್ಯರಾಜ್ ಗ್ರೂಪಿನ ಅಧ್ಯಕ್ಷ ಕೇಶವ ಎಂ. ಕೋಟ್ಯಾನ್, ಅಭಿನಂದನ್ ಕೋಟ್ಯಾನ್, ಶ್ರೀದೇವಿ ಭಜನಾ ಮಂದಿರದ ಗೌರವಾಧ್ಯಕ್ಷ ಗಂಗಾಧರ್ ಜಿ., ಅಧ್ಯಕ್ಷರಾದ ಗಿರೀಶ್ ಎ. ಕುಂದರ್, ಶ್ರೀದೇವಿ ಆಂಜನೇಯ ಫ್ರೆಂಡ್ಸ್ ನ ಹೇಮಂತ್ ಖಾರ್ವಿ, ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ರವೀಂದ್ರ ನಾಡಿಗ್, ತೀರ್ಪುಗಾರರಾದ ರಾಧಾಕೃಷ್ಣ ಭಟ್ ಕುತ್ಪಾಡಿ, ಉಷಾ ಹೆಬ್ಬಾರ್ ಮಣಿಪಾಲ ಹಾಗೂ ಅಕ್ಷತಾ ವಿಶು ರಾವ್ ಪಾವಂಜೆ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿ, ಪ್ರಭಾಕರ ಶೆಟ್ಟಿ ಸ್ವಾಗತಿಸಿದರು.