ಸಂಗೀತವೆಂದರೆ ಜಾತಿ ಮತ ಭೇದ ಭಾವವಿಲ್ಲದ ಒಂದು ಕಲೆ. ಇದು ವ್ಯಕ್ತಿಯ ಜೀವನದಲ್ಲಿ ಸಂತೋಷವನ್ನುಂಟುಮಾಡುತ್ತದೆ. ತಪಸ್ಸಿನಂತೆ ಸಾಧನೆ ಮಾಡಿ ಸಂಗೀತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪ್ರಸಿದ್ಧರಾದ ಭೀಮ್ ಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ್ ರಾಜಗುರು, ಮಾಧವ್ ಗುಡಿ, ರಾಜಶೇಖರ್ ಮನ್ಸೂರ್ ಇತ್ಯಾದಿ ಅಗ್ರರ ನಡುವೆ ಕೇಳಿ ಬರುವ ಮತ್ತೊಂದು ಅಗ್ರಸ್ಥಾನದಲ್ಲಿರುವ ಹೆಸರು ಗಂಗೂಬಾಯ್ ಹಾನಗಲ್.
ಇವರ ಮೂಲ ಹೆಸರು ಗಾಂಧಾರಿ ಹಾನಗಲ್. ಸಂಗೀತದಲ್ಲಿ ಪ್ರಸಿದ್ಧರಾದ ಹಾಗೆ ಅವರ ಪರಿಚಯ ಗಂಗೂಬಾಯಿ ಹುಬ್ಳಿಕರ್ ಎಂದಾಯಿತು. ಆಕಾಶವಾಣಿಯಲ್ಲಿ ‘ಮಿಯಾ ಕಿ ಮಲ್ಹಾರ್’ ರಾಗವನ್ನು ಹಾಡಿದಾಗ ಅದನ್ನು ಪ್ರಸಾರ ಮಾಡುವ ಸಮಯದಲ್ಲಿ ಅವರ ಸೋದರ ಮಾವನವರ ಇಚ್ಛೆಯಂತೆ ಗಂಗೂಬಾಯಿ ಹಾನಗಲ್ ಎಂದು ಘೋಷಿಸಲಾಯಿತು. ತಮ್ಮ ಪೂರ್ವಜರ ಊರು ಹಾನಗಲ್ ಆದಕಾರಣ ಅದನ್ನು ಖ್ಯಾತಿಗೊಳಿಸುವ ಉದ್ದೇಶದಿಂದ ಗಂಗೂಬಾಯಿಯವರು ತಮ್ಮ ಅನುಮತಿಯನ್ನು ನೀಡಿದರು.
ಗಂಗೂಬಾಯಿ ಹಾನಗಲ್ ಇವರು 1913 ಮಾರ್ಚ್ 5ರಂದು ಹಾನಗಲ್ ನಲ್ಲಿ ಜನಿಸಿದರು. ಇವರ ತಂದೆ ಚಿಕ್ಕೂರಾವ್ ನಾಡಗೀರ ಇವರ ತಾಯಿ ಅಂಬಾಬಾಯಿಯವರು ಕರ್ನಾಟಕ ಸಂಗೀತದ ಗಾಯಕಿಯಾಗಿದ್ದರು. ಇವರ ಹಿರಿಯರು ನರಗುಂದ ಬಾಬಾ ಸಾಹೇಬರ ಆಳ್ವಿಕೆಯಲ್ಲಿ ಕೋರ್ಟಿನ ಮುನ್ಸೀಫರಾಗಿದ್ದರು. ಮುಂದೆ ಬ್ರಿಟಿಷರ ವಿರುದ್ಧ ಬಾಬಾ ಸಾಹೇಬ ಯುದ್ಧ ಸಾರಿದಾಗ ಗಂಗೂಬಾಯಿ ಅವರ ಅಜ್ಜಿಯ ಅಜ್ಜಿ ಬ್ರಿಟೀಷ್ ಸೈನಿಕರ ಕೈಸೆರೆಯಿಂದ ತಪ್ಪಿಸಿಕೊಂಡು, ಹಾನಗಲ್ಲಿಗೆ ಬಂದು ನೆಲೆಸಿದರು. ಅಲ್ಲಿಂದ ಇವರ ಮನೆ ಹೆಸರು ಹಾನಗಲ್ ಆಯ್ತು. ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಗಂಗೂಬಾಯಿ ಅವರ ವಿದ್ಯಾಭ್ಯಾಸ 5ನೇ ತರಗತಿಯವರೆಗೆ ನಡೆಯಿತು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಗಂಗೂಬಾಯಿಯವರು ಹಾಡಿದ ಸ್ವಾಗತ ಗೀತೆ ಗಾಂಧಿಜಿಯವರ ಮತ್ತು ಸಭಿಕರ ಮೆಚ್ಚುಗೆಯನ್ನು ಗಳಿಸಿತು. ಹೀರಾಬಾಯಿ ಬಡೋದೇಕರ, ಅಬ್ದುಲ್ ಕರೀಂ ಖಾನ್ ಇವರಂತಹ ಪ್ರಸಿದ್ಧ ಗಾಯಕರು ಅಂಬಾಬಾಯಿ ಅವರ ಮನೆಗೆ ಹೋಗಿ ಅವರ ಹಾಡುಗಾರಿಕೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ತಮ್ಮ ಮಗಳಿಗೆ ಹಿಂದೂಸ್ತಾನಿ ಸಂಗೀತವನ್ನು ಕಲಿಸುವ ಹಂಬಲ ಅಂಬಾಬಾಯಿಯವರಿಗೆ ಉಂಟಾಯಿತು. ಆದ್ದರಿಂದ ಮನೆಯನ್ನು ಧಾರವಾಡದಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಆರಂಭದಲ್ಲಿ ದತ್ತೋಪಂತ ದೇಸಾಯಿ, ಕೃಷ್ಣಚಾರ್ಯ ಹುಲಗೂರ ಇವರಿಂದ ತರಬೇತಿಯನ್ನು ಪಡೆದ ಗಂಗೂಬಾಯಿಯವರು ಮತ್ತೆ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ ರಾಮ್ ಭಾವು ಕುಂದಗೋಳಕರ್ (ಸವಾಯಿ ಗಂಧರ್ವ) ಇವರಿಂದ ಹಿಂದುಸ್ತಾನಿ ಸಂಗೀತ ಅಭ್ಯಾಸವನ್ನು ಮಾಡಿದರು.
ಮಗಳ ಹಿಂದುಸ್ತಾನಿ ಪದ್ಧತಿಯ ಮೇಲೆ ತಮ್ಮ ಕರ್ನಾಟಕ ಸಂಗೀತ ಪದ್ಧತಿ ಪರಿಣಾಮ ಬೀರ ಬಾರದೆಂಬ ಉದ್ದೇಶದಿಂದ ಅಂಬಾಬಾಯಿಯವರು ಮುಂದೆ ಹಾಡುವುದನ್ನೇ ನಿಲ್ಲಿಸಿಬಿಟ್ಟರು. 1932ರಲ್ಲಿ ಗಂಗೂಬಾಯಿಯವರು ಮಾತೃಯೋಗದ ಆಘಾತಕ್ಕೆ ಒಳದಾದರು. ಮುಂದೆ ಕೆಲ ಕಾಲದ ನಂತರ ಅವರ ತಂದೆಯು ನಿಧನರಾದರು. 1923ರಲ್ಲಿ ಹುಬ್ಬಳ್ಳಿಯ ಗುರುನಾಥ ಕೌಲಗಿ ಎನ್ನುವವರೊಂದಿಗೆ ಗಂಗೂಬಾಯಿಯವರ ವಿವಾಹವಾಯಿತು. ಎಚ್. ಎಂ. ವಿ. ಗ್ರಾಮ ಫೋನಿನ ಕಂಪನಿಯವರು ಗಂಗೂಬಾಯಿಯವರಿಗೆ ಆಹ್ವಾನ ನೀಡಿದಾಗ ಅವರು ಮುಂಬೈಗೆ ತೆರಳಿದರು. ಇದು ಗಂಗೂ ಬಾಯಿಯವರ ಹಾಡುಗಾರಿಕೆಯ ಸಂಕ್ರಮಣ ಕಾಲವೆಂದೇ ಹೇಳಬಹುದು. ಮುಂಬೈಯಲ್ಲಿ ಕಚೇರಿ ನೀಡಿದ ಗಂಗೂಬಾಯಿಯವರು ಮುಂಬೈ ಆಕಾಶವಾಣಿಯಲ್ಲಿಯೂ ಹಾಡತೊಡಗಿದರು. ಇಲ್ಲಿಂದ ಇವರ ಸಂಗೀತ ಜೀವನದ ಆರೋಹಣ ಆರಂಭವಾಯಿತು. ಆ ಕಾಲದ ಘಟಾನುಘಟಿ ಹಾಡುಗಾರರೂ ಗಂಗೂಬಾಯಿಯವರ ಹಾಡಿಗೆ ಆಕರ್ಷಿತರಾದರು. ಸಂಗೀತ ಜೀವನ ಯಶಸ್ವಿಯಾಗಿ ಸಾಗಿದರೂ, ನಿಜ ಜೀವನದಲ್ಲಿ ಅನೇಕ ಏರುಪೇರುಗಳನ್ನು ಕಂಡರು. ಗಂಗೂಬಾಯಿ ಅವರ ಮೂರು ಮಂದಿ ಮಕ್ಕಳು ಬೆಳೆಯುತ್ತಿರುವ ಸಮಯದಲ್ಲಿ ಪತಿ ಗುರುನಾಥ ಕೌಲಗಿಯವರು ವ್ಯವಹಾರದಲ್ಲಿ ನಷ್ಟ ಮಾಡಿಕೊಂಡು ಬಹಳಷ್ಟು ಭವಣೆಗೆ ಒಳಗಾದರು. ಗುರುನಾಥ ಕೌಲಗಿ ಅವರ ಆರೋಗ್ಯದಲ್ಲಿ ಏರುಪೇರಾಗಿ ತೀವ್ರ ಅಸ್ವಸ್ಥಗೊಂಡು 1966 ಮಾರ್ಚ್ 6ರಂದು ಕೊನೆಯುಸಿರೆಳೆದರು.
ಭಾರತದ ಎಲ್ಲೆಡೆ ಸಂಚರಿಸಿ ಸಂಗೀತ ಕಚೇರಿಗಳನ್ನು ನೀಡಿ ಶ್ರೋತೃಗಳ ಮನಸ್ಸನ್ನು ಗೆದ್ದವರು ಗಂಗೂ ಬಾಯಿ ಹಾನಗಲ್. ಪಾಕಿಸ್ತಾನ, ನೇಪಾಳ, ಅಮೆರಿಕ, ಕೆನಡಾ, ಜರ್ಮನಿ, ಫ್ರಾನ್ಸ್ ಇತ್ಯಾದಿ ದೇಶಗಳಿಗೂ ಸಂಚಾರ ಮಾಡಿ ಭಾರತೀಯ ಸಂಗೀತದ ರಸದೌತಣ ಉಣಬಡಿಸಿದ್ದಾರೆ. ಮೈಸೂರಿನಲ್ಲಿ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಗುರು ಶಿಷ್ಯ ಪರಂಪರೆಯ ಪ್ರತೀಕವಾಗಿ ಹುಬ್ಬಳ್ಳಿಯಲ್ಲಿಯೂ ‘ಗಂಗೂಬಾಯಿ ಹಾನಗಲ್ ಗುರುಕುಲ’ವನ್ನು ಸ್ಥಾಪಿಸಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಾಗಿ ಕೇಂದ್ರ ಸರ್ಕಾರದಿಂದ ಅವರಿಗೆ ಪದ್ಮ ವಿಭೂಷಣ, ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರಗಳು ದೊರೆತಿವೆ. ಮಧ್ಯ ಪ್ರದೇಶ ಸರಕಾರದಿಂದ ತಾನಸೇನ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ಕನಕ – ಪುರಂದರ ಪ್ರಶಸ್ತಿ, ಅಸ್ಸಾಂ ಸರಕಾರದಿಂದ ಶ್ರೀಮಂತ ಶಂಕರ ದೇವ ಪ್ರಶಸ್ತಿ, ಸಂಗೀತ ರತ್ನ ಟೀ ಚೌಡಯ್ಯ ಸ್ಮಾರಕ ರಾಷ್ಟ್ರ ಪ್ರಶಸ್ತಿ, ದೀನನಾಥ ಮಂಗೇಶ್ಕರ್ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳೊಂದಿಗೆ ದೆಹಲಿ ವಿಶ್ವವಿದ್ಯಾಲಯ ಮತ್ತು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಇಲ್ಲಿಂದ ಡಾಕ್ಟರೇಟ್ ಪದವಿ, ಗಂಧರ್ವ ವಿಶ್ವವಿದ್ಯಾಲಯದ ‘ಮಹಾಮಹೋಪಾಧ್ಯಾಯ’ ಪದವಿಗಳನ್ನು ಪಡೆದುಕೊಂಡ ಮೇಧಾವಿ. ಭಾರತೀಯಕಂಠ, ಸ್ವರಶಿರೋಮಣಿ, ಸಂಗೀತ ಕಲಾರತ್ನ, ಸಪ್ತಗಿರಿ ಸಂಗೀತ ವಿದ್ವನ್ಮಣಿ ಇವೆಲ್ಲ ಇವರಿಗೆ ದೊರೆತ ಬಿರುದುಗಳು. ವರಕವಿ ಬೇಂದ್ರೆಯವರ ಶಿಷ್ಯರಾಗಿದ್ದ ಗಂಗೂಬಾಯಿಯವರು ಗುರು ಶಿಷ್ಯ ಸಂಬಂಧವನ್ನು ಬೇಂದ್ರೆಯವರ ಜೀವನದ ಕೊನೆಯವರೆಗೂ ಉಳಿಸಿಕೊಂಡಿದ್ದರು. ಎಂ. ಕೆ. ಕುಲಕರ್ಣಿಯವರು ಗಂಗೂಬಾಯಿಯವರ ‘ನನ್ನ ಬದುಕಿನ ಹಾಡು’ ಎಂಬ ಆತ್ಮಚರಿತ್ರೆಯ ಕರ್ತೃವಾಗಿದ್ದಾರೆ.
ತಮ್ಮ 97 ನೆಯ ವಯಸ್ಸಿನಲ್ಲಿ ಗಂಗೂಬಾಯಿ ಹಾನಗಲ್ ಇವರು ಹೃದಯಕ್ಕೆ ಸಂಬಂಧಪಟ್ಟ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. 2009 ಜುಲೈ 21ರಂದು ಅಪಾರ ಅಭಿಮಾನಿಗಳು ಮತ್ತು ಸಂಗೀತ ಪ್ರೇಮಿಗಳನ್ನು ತೊರೆದು ಸಂಗೀತ ಲೋಕದಿಂದ ದೂರವಾದರು. ಅಗಲಿದ ಚೇತನಕ್ಕೆ ಅನಂತ ನಮನ
–ಅಕ್ಷರೀ