ಯಕ್ಷಗಾನವು ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ ‘ಗಂಡುಕಲೆ’ ಎಂದೇ ಪ್ರಸಿದ್ಧವಾಗಿದೆ. ಕಾಸರಗೋಡು, ,ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡ ಪ್ರದೇಶದಲ್ಲಿ ಹೆಚ್ಚು ಪ್ರದರ್ಶನಗೊಳ್ಳುವ ಕಲೆ ಯಕ್ಷಗಾನ. ಈ ಅನುಪಮವಾದ ಕಲೆಯಲ್ಲಿ ಸೇವೆಯನ್ನು ಮಾಡುತ್ತಿರುವ ಕಲಾವಿದರು ಶ್ರೀಯುತ ಸುಕೇಶ ಹೆಗ್ಡೆ ಮಡಮಕ್ಕಿ.
ನಾರಾಯಣ ಹೆಗ್ಡೆ ಮತ್ತು ಗುಲಾಬಿ ಹೆಗ್ಡೆ ಇವರ ಮಗನಾಗಿ ೦೧.೦೪.೧೯೭೦ ರಂದು ಸುಕೇಶ ಹೆಗ್ಡೆ ಮಡಮಕ್ಕಿ ಅವರ ಜನನ. ೬ ನೇ ತರಗತಿ ವರೆಗೆ ವಿದ್ಯಾಭ್ಯಾಸ. ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಇವರ ಯಕ್ಷಗಾನ ಗುರುಗಳು ಪ್ರಭಾಕರ ಶೆಟ್ಟಿ ಮಡಮಕ್ಕಿ ಹಾಗೂ ಸುಧಾಕರ ನಾಯ್ಕ್ ಮಡಮಕ್ಕಿ. ಚಿಕೋಡು ಕೃಷ್ಣ ಭಟ್, ಬಾಲಕೃಷ್ಣ ಗೌಡ ದೇಲಂಪಾಡಿ ಮತ್ತು ಮಲ್ಲ ಭಾಸ್ಕರ್ ಇವರ ತೆಂಕುತಿಟ್ಟು ಯಕ್ಷಗಾನ ಗುರುಗಳು. ಯಕ್ಷಗಾನ ಅರ್ಥಗಾರಿಕೆಗೆ ಮಾರ್ಗದರ್ಶನ ನೀಡಿದವರು ಸಂಸ್ಕೃತ ವಿದ್ವಾಂಸರಾದ ಬೆಳ್ಳಿಗೆ ನಾರಾಯಣ ಮಣಿಯಾಣಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗ ಪುಸ್ತಕವನ್ನು ನೋಡಿಕೊಂಡು, ಭಾಗವತರು ಹಾಗೂ ಸಹ ಕಲಾವಿದರೊಂದಿಗೆ ಪಾತ್ರದ ಬಗ್ಗೆ ಚರ್ಚಿಸಿ ರಂಗಪ್ರವೇಶ ಮಾಡುತ್ತೇನೆ ಎಂದು ಹೇಳುತ್ತಾರೆ ಸುಕೇಶ್.
ಸುದಾಸ ಚರಿತ್ರೆ, ದಕ್ಷಾದ್ವಾರ, ಅಭಿಮನ್ಯು ಕಾಳಗ, ದಮಯಂತಿ ಪುನರ್ ಸ್ವಯಂವರ, ತರುಣಿಸೇನ ಕಾಳಗ, ರಂಭಾ ರೂಪಾ ರೇಖಾ ನೆಚ್ಚಿನ ಪ್ರಸಂಗಗಳು. ದಮಯಂತಿ, ಮದಯಂತಿ, ಸರಮೆ, ದಕ್ಷಾಯಿಣಿ, ಕಯಾದು, ಮಾಲಿನಿ, ಸುಭದ್ರೆ ಇವರ ನೆಚ್ಚಿನ ವೇಷಗಳು.
ಯಕ್ಷಗಾನ ಇಂದಿನ ಸ್ಥಿತಿ ಗತಿ:-
ಕಾಲಮಿತಿಯ ಹೊಡೆತಕ್ಕೆ ಸಿಲುಕಿ ಯಕ್ಷಗಾನ ನಶಿಸಿ ಹೋಗುತ್ತದೆ ಎಂಬ ಆತಂಕವಾಗುತಿದೆ.
ಯಕ್ಷಗಾನ ರಂಗದ ಇವತ್ತಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇಂದಿನ ಪ್ರೇಕ್ಷಕರಲ್ಲಿ ಕಲೆಯನ್ನು ಸವಿಯುವುದರೊಂದಿಗೆ, ಕಲಾವಿದರನ್ನು ಗೌರವಿಸುವ ಸದ್ಗುಣ ಪ್ರೇಕ್ಷಕರಿದ್ದಾರೆ. ಅವರೊಂದಿಗೆ ಕಲಾವಿದರು ನಾವು ಸ್ವಾಭಿಮಾನಿಗಳಾಗಿ ವ್ಯವಹರಿಸಬೇಕು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ದೇವರ ಆರೋಗ್ಯ ಕೊಡುವಸ್ಟು ಕಾಲ, ಯಕ್ಷ ಮಾತೆಯ ಸೇವೆ ಮಾಡಬೇಕೆಂಬ ನನ್ನ ಆಸೆ ಎಂದು ಸುಕೇಶ್ ಅವರು ಹೇಳುತ್ತಾರೆ.
ಪುರಾಣ ಪುಸ್ತಕ ಓದುವುದು, ಯೂಟ್ಯೂಬ್ ನಲ್ಲಿ ಬರುವ ಹಿರಿಯ ಕಲಾವಿದರ ಬಗ್ಗೆ ತಿಳಿದುಕೊಳ್ಳುವುದು. ರಂಗದಲ್ಲಿ ಮಾಡುವ ಪಾತ್ರದಲ್ಲಿ ಹೆಚ್ಚಾಗಿ ಇನ್ನೊಬ್ಬರ ಅನುಕರಣೆ ಮಾಡದೆ ತಮ್ಮದೇ ಆದ ಕಲ್ಪನೆಯಲ್ಲಿ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡುವುದು ಇವರ ಹವ್ಯಾಸಗಳು.
ಕೂಳುರಿನಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟದ 50 ನೇ ಸಂಭ್ರಮದಲ್ಲಿ ಸನ್ಮಾನಗೊಂಡ 28 ಕಲಾವಿದರಲ್ಲಿ ನಾನು ಒಬ್ಬ, ಅಲ್ಲದೇ ಶ್ರೀ ವೀರಭದ್ರ ಯಕ್ಷ ಬಳಗ ಮಾಡಮಕ್ಕಿ ಇವರು 2020 ರಲ್ಲಿ ಸನ್ಮಾನಿಸಿದ್ದಾರೆ.
ಮಡಮಕ್ಕಿ ಮೇಳ, ಕೂಡ್ಲು ಮೇಳ, ಮಲ್ಲ ಮೇಳ, ಕೊಲಂಗಾನ ಮೇಳದಲ್ಲಿ ತಿರುಗಾಟ ಮಾಡಿ ಪ್ರಸುತ್ತ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಸುಕೇಶ್ ಮಾಡಮಕ್ಕಿ ಅವರು ಸುನಿತಾ ಹೆಗ್ಡೆ ಇವರನ್ನು ೦೩.೦೫.೨೦೦೧ ರಂದು ಮದುವೆಯಾಗಿ ಮಕ್ಕಳಾದ ಪೂಜಾ ಹಾಗೂ ಕಿರಣ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು