ಬದುಕೇ ಒಂದು ರಂಗಭೂಮಿ. ಇಲ್ಲಿ ನಟಿಸುವ ಪಾತ್ರಗಳು ಅನೇಕ. ಬಣ್ಣವೂ ಬಹು ವಿಧ. ಎಲ್ಲರಿಗೂ ಒಗ್ಗುವ, ಎಲ್ಲರೊಳಗೊಂದಾಗಿ ಬೆರೆಯುವ ಪಾಠ ಕಲಿಸುವ ರಂಗಭೂಮಿ ಒಪ್ಪಿಕೊಳ್ಳುವುದು ಕೆಲವರನ್ನಷ್ಟೇ. ಆದರೆ, ಒಮ್ಮೆ ಒಪ್ಪಿಕೊಂಡಿತೆಂದರೆ ಕಲೆಯ ಅಪ್ಪುಗೆಯೇ ಸರಿ. ಹೀಗೆ ಕರಾವಳಿಯ ರಂಗಭೂಮಿ ಒಪ್ಪಿಕೊಂಡು ಲಾಲಿಸಿದ ಕಲಾವಿದೆ, ಬಹುಮುಖ ಪ್ರತಿಭೆ ಮಂಜುಳಾ ಜನಾರ್ದನ್.
ಶ್ರೀನಿವಾಸ ರಾವ್ ಹಾಗೂ ಗಿರಿಜಮ್ಮರ ಮಗಳಾಗಿ ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ಜನಿಸಿದ ಮಂಜುಳಾ ಜನಾರ್ದನ್ ಇವರು ಬಿ.ಕಾಮ್, ಎಂ.ಎ., ಬಿ.ಎಡ್ ಪದವೀಧರೆ. ರಂಗಭೂಮಿಯಲ್ಲಿ ಬಣ್ಣ ಹಚ್ಚುವ ಮೊದಲು ಇವರನ್ನು ಆಕರ್ಷಿಸಿದ್ದು ಯಕ್ಷಗಾನ ರಂಗ.
ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಬಾಳ ಕಾಟಿಪಳ್ಳದ ಶಿವರಾಮ ಪಣಂಬೂರು ಅವರ ನಿರ್ದೇಶನದ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘಕ್ಕೆ ಸೇರಿದವರು, ಪುಣ್ಯಕೋಟಿಯ ‘ಪುಣ್ಯಕೋಟಿ’, ಬಬ್ರುವಾಹನದ ‘ಸುಭದ್ರೆ’, ಸುಧನ್ವಾರ್ಜುನದ ‘ಪ್ರಭಾವತಿ’, ಬ್ರಹ್ಮ ಬೈದರ್ಕಳದ ‘ಕೋಟಿ’, ಮಹಿಷ ಮರ್ದಿನಿಯಲ್ಲಿ ‘ದೇವಿ’, ಭೀಷ್ಮ ವಿಜಯದ ‘ಅಂಬೆ’, ಸುದರ್ಶನ ವಿಜಯದ ‘ಲಕ್ಷ್ಮಿ’, ದಕ್ಷಾದ್ವರದಲ್ಲಿ ‘ದಾಕ್ಷಾಯಿಣಿ’ ಮುಂತಾದ ಹಲವು ಪ್ರಸಂಗಗಳಲ್ಲಿ ಬಣ್ಣದ ವೇಷ ಮಾಡಿದರು.
ನಂತರ ತುಳುನಾಡಿನ ಹೆಮ್ಮೆಯ ದೇವದಾಸ್ ಕಾಪಿಕಾಡ್ ಅವರ ‘ಚಾ ಪರ್ಕ’ ತಂಡಕ್ಕೆ ಸೇರ್ಪಡೆಗೊಂಡು ಐದೂವರೆ ವರ್ಷಗಳಷ್ಟು ಕಾಲ ತಂಡದ ಕಲಾವಿದೆಯಾಗಿ ಹಲವು ಪಾತ್ರಗಳಿಗೆ ಜೀವ ತುಂಬಿದರು. ಜನಮೆಚ್ಚುಗೆಯ ಯಶಸ್ವೀ ಪ್ರದರ್ಶನ ಕಂಡ ‘ಬಲೆ ಚಾ ಪರ್ಕ’, ‘ಗಂಟೆ ಏತಾಂಡ್’, ‘ಮಾಮು’, ‘ಪಂಡ ನಂಬಯರ್’, ‘ಪುದರ್ ದಿತೀಜಿ’, ‘ಅಕ್ಕ’, ‘ಕಾಸು ಓಲ್ ದೀಪರ್’, ‘ಯಾನೊರಿ ಬರೊಲಿಯ’, ‘ದೇವರ್ ದೀಲಕ್ಕ ಆಪುಂಡು’, ‘ಆದುಪ್ಪರೆಲಾ ಯಾವು’, ‘ಕತೆ ನನ ಬರೆಯೊಡು’, ‘ನಂಕ್ ದೇವೆರು ಉಲ್ಲೆರ್’, ‘ಎನ್ನ ಕಂಡಣಿ ಬನ್ನಗ’, ‘ಪುದರ್ ಪನೊಡ್ಚಿ’, ‘ಪಾರ್ವತಿ’, ‘ಅಪ್ಪು’, ‘ಬಾಬು’ ಮುಂತಾದ ನಾಟಕಗಳಲ್ಲಿ ಮನೋಜ್ಞ ಅಭಿನಯದಿಂದ ರಂಗ ರಸಿಕರ ಅಭಿಮಾನಕ್ಕೆ ಪಾತ್ರರಾದರು.
ಕನ್ನಡ ಪ್ರಯೋಗ ರಂಗಭೂಮಿಯಲ್ಲೂ ಬಣ್ಣ ಹಚ್ಚಿದ ಮಂಜುಳಾ ಜನಾರ್ದನ್ ಇವರು ಸುಕುಮಾರ ಕಣ್ಣನ್ ನಿರ್ದೇಶನದ
ಗಡಿನಾಡು ಕಲಾವಿದರು ಕಾಸರಗೋಡು ತಂಡದ ‘ಅಗ್ನಿ ಮತ್ತು ಮಳೆ’, ಮೋಹನ್ ಚಂದ್ರ ಯು. ನಿರ್ದೇಶನದ ಸಮುದಾಯ ತಂಡದ ‘ಒಂದು ಲೋಕದ ಕಥೆ’, ವಿದ್ದು ಉಚ್ಚಿಲ ನಿರ್ದೇಶನದ ‘ಬರ್ಬರೀಕ’, ಶಶಿರಾಜ್ ಕಾವೂರ್ ನಿರ್ದೇಶನದ ‘ಕೇಳು ಸಖಿ ಚಂದ್ರಮುಖಿ’, ನಿರ್ದೇಶಕ ಮೋಹನ್ ಚಂದ್ರ ಯು. ನಿರ್ದೇಶನದ ‘ನೆಮ್ಮದಿ ಅಪಾರ್ಟ್ಮೆಂಟ್ ಭಾಗ-1, ಭಾಗ-2’, ನಿರ್ದೇಶಕ ರಾಮ್ ಶೆಟ್ಟಿ ಹಾರಾಡಿ ನಿರ್ದೇಶನದ ರಂಗಸಂಗಾತಿ ತಂಡದ ‘ಮರ-ಗಿಡ –ಬಳ್ಳಿ’, ಸುರೇಶ್ ಆನಗಳ್ಳಿ ನಿರ್ದೇಶನದ ಬೆಂಗಳೂರು ಅನೇಕಾ ತಂಡದ ‘ಆಗಮನ’, ರಾಮ್ ಶೆಟ್ಟಿ ಹಾರಾಡಿ ನಿರ್ದೇಶನದ ಭೂಮಿಕಾ ಹಾರಾಡಿ ತಂಡದ ‘ಕಾತ್ಯಾಯಿನಿ’, ‘ಆರದಿರಲಿ ಬೆಳಕು’, ‘ನಮ್ಮ ನಿಮ್ಮೊಳಗೊಬ್ಬ ಹೀಗೆ’ ಹಲವಾರು ಕನ್ನಡ ಪ್ರಯೋಗ ನಾಟಕದಲ್ಲೂ, ಕೃಷ್ಣ ಜಿ. ಮಂಜೇಶ್ವರ ನಿರ್ದೇಶನದ ಐಸಿರಿ ಕಲಾವಿದರು ತಂಡದ ‘ಜನನೇ ಬೇತೆ’, ‘ಅಂಚಗೆ ಇಂಚಗೆ’. ಕಿಶೋರ್ ಡಿ. ಶೆಟ್ಟಿ ನಿರ್ದೇಶನದ ಶ್ರೀಲಲಿತೇ ಕಲಾವಿದರು ಕುಡ್ಲ ತಂಡದ ‘ಮಿತ್ತ್ ತಿರ್ತ್, ‘ಕಟೀಲ್ದಪ್ಪೆ ಉಲ್ಲಾಲ್ದಿ’, ‘ತಿರುಪತಿ ತಿಮ್ಮಪ್ಪ’, ಮನು ಇಡ್ಯ ನಿರ್ದೇಶನದ ಸಿಂಗಾರ ಸುರತ್ಕಲ್ ತಂಡದ ‘ಬಲಿ’, ‘ಮಾರಿ ಗಿಡಪುಲೆ’ ಇತ್ಯಾದಿ ತುಳು ನಾಟಕಗಳಲ್ಲೂ ಮಿಂಚಿದವರು.
ಇತ್ತೀಚಿಗಷ್ಟೇ 50 ದಿನಗಳನ್ನು ಪೂರೈಸಿದ ‘ದಸ್ಖತ್’ ತುಳು ಸಿನಿಮಾ, ‘ಅಮ್ಮೆರ್ ಪೊಲೀಸಾ !’, ‘ಲವ್ ಕೋಕ್ಟೇಲ್’, ‘ಹರೀಶ ವಯಸ್ಸು 36’ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿರುವುದರ ಮೂಲಕ ಸಿನಿ ಪರದೆಯಲ್ಲಿಯೂ ಉತ್ತಮ ಅಭಿನೇತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾದವರು. ರಂಗಭೂಮಿ, ಸಿನಿಮಾ ಮಾತ್ರವಲ್ಲದೆ ಮಾಧ್ಯಮ ರಂಗದಲ್ಲೂ ಧ್ವನಿಯಾಡಿಸಿದ ಮಂಜುಳಾ ಜನಾರ್ದನ್ ಇವರು ಮಂಗಳೂರು ಆಕಾಶವಾಣಿಯ ಗ್ರೇಡೆಡ್ ಕಲಾವಿದೆಯಾಗಿದ್ದು, ತಾತ್ಕಾಲಿಕ ನೆಲೆಯಲ್ಲಿ ಉದ್ಘೋಷಕಿಯಾಗಿ ಸೇವೆ ಸಲ್ಲಿಸಿದವರು. ಖಾಸಗಿ ಧ್ವನಿ ವಾಹಿನಿ 93.5 ರೆಡ್ ಎಫ್.ಎಂ.ನಲ್ಲಿ ರೇಡಿಯೋ ಜಾಕಿಯಾಗಿಯೂ ಕಾರ್ಯನಿರ್ವಹಿಸಿದ್ದು, ಮಾತಿನ ಮೂಲಕ ಮನಸ್ಸು ಗೆದ್ದವರೆಂದರೆ ಅತಿಶಯೋಕ್ತಿಯಲ್ಲ.
ಮಂಜುಳಾ ಜನಾರ್ದನ್ ಇವರ ಕಲಾಬದುಕಿನ ಸಾಧನೆಗಾಗಿ ರಂಗಭೂಮಿ ಉಡುಪಿಯ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಸತತ ಮೂರು ವರ್ಷ ‘ಶ್ರೇಷ್ಠ ನಟಿ’ ಬಿರುದಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಮಂಗಳೂರಿನ ಬೋಂದೇಲ್ ನಲ್ಲಿ ಪತಿ ಜನಾರ್ದನ್ ಜೊತೆಗೆ ವಾಸವಾಗಿರುವ ಮಂಜುಳಾ ಜನಾರ್ದನ್ ಅವರ ಸಸ್ಯಪ್ರೀತಿಗೆ ಸಾಕ್ಷಿಯಾಗಿರುವುದು ಮನೆಯಂಗಳ. ದೇಶ ವಿದೇಶಗಳ ನಾನಾ ರೀತಿಯ ಹೂವಿನ ಗಿಡಗಳು ಇವರ ಪುಟ್ಟ ಕೈತೋಟದಲ್ಲಿದ್ದು “ಬಿಡುವು ತಾನಾಗಿ ಸಿಕ್ಕದು, ಸಿಕ್ಕ ಬಿಡುವನ್ನು ನೆಚ್ಚಿನ ಹವ್ಯಾಸದೊಡನೆ ಬ್ಯುಸಿಯಾಗಿಸುವುದರಿಂದ ವ್ಯಕ್ತಿತ್ವ ರೂಪುಗೊಳ್ಳುವುದು” ಎನ್ನುವ ನಗುಮುಖದ ಕಲಾವಿದೆ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕರಾವಳಿ ಕಂಡ ರಂಗಭೂಮಿ – ಸಿನಿಮಾ ಕಲಾವಿದೆ ಮಂಜುಳಾ ಜನಾರ್ದನ್ ಅವರ ಕಲಾಬದುಕಿನಲ್ಲಿ ಇನ್ನಷ್ಟು ಮಂಜುಳ ಸಾಧನೆಗಳು ಅನುರಣಿಸಲಿ ಎಂಬುದೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಹಾರೈಕೆ.
ಅಕ್ಷತಾ ರಾಜ್ ಪೆರ್ಲ
ಸಾಹಿತಿ , ಆಕಾಶವಾಣಿ ನಿರೂಪಕಿ