ಕಲೆ ಎಲ್ಲರಿಗೂ ಒಲಿಯೋದಿಲ್ಲ. ದೈವದತ್ತ ಪ್ರತಿಭೆಯದು. ಸಾಧಿಸಿದವರಿಗೆ ಸಿದ್ಧಿಸುತ್ತದೆ. ಇಂತಹ ಸಾಧಕರಲ್ಲಿ ಒಬ್ಬರು ಶ್ರೀಲತಾ ದೇವದತ್ತ ಪ್ರಭು. ಕೇರಳದ ಕಣ್ಣೂರಿನ ತಲಶ್ಶೇರಿಯಲ್ಲಿ ಶ್ರೀ ಹರಿದಾಸ ಶೆಣೈ ಮತ್ತು ಶ್ರೀಮತಿ ಶೋಭಾ ಶೆಣೈ ದಂಪತಿಯ ಸುಪುತ್ರಿ ಈಕೆ. ಇವರ ಮನೆ ಕಲೆಯ ಬೀಡಾಗಿತ್ತು. ತಂದೆ ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ, ಪ್ರವೃತ್ತಿಯಲ್ಲಿ ತಬಲಾ ಕಲಾವಿದ. ಮನೆಯಲ್ಲಿ ತಬಲಾ ತರಗತಿಗಳು ನಡೆಯುತ್ತಿದ್ದವು. ತಬಲಾದ ಮಧುರ ನಿನಾದ ಎಲ್ಲರ ಕಿವಿಯ ಮೇಲೆ ನಿರಂತರ ಬೀಳುತ್ತಲೇ ಇತ್ತು. ಆದ್ದರಿಂದ ಎಳವೆಯಲ್ಲಿ ಶ್ರೀಲತಾರಿಗೂ ತಬಲಾದಲ್ಲಿ ವಿಪರೀತ ಆಸಕ್ತಿ ಹುಟ್ಟಿಕೊಂಡಿತು. ಬೇರೆ ಸಂಗೀತ ಪರಿಕರಗಳನ್ನು ಎಲ್ಲರೂ ನುಡಿಸುತ್ತಾರೆ, ಆದರೆ ಆ ಕಾಲಘಟ್ಟದಲ್ಲಿ ಕೇರಳದಲ್ಲಿ ತಬಲಾ ನುಡಿಸುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟೂ ಇರಲಿಲ್ಲ.
ಶ್ರೀಲತಾರ ಆಸಕ್ತಿಗೆ ತಂದೆಯ ಪ್ರೋತ್ಸಾಹವು ಜೊತೆಯಾದಾಗ ಶ್ರೀಲತಾ ತಬಲಾ ವಾದನವನ್ನೇ ಆಯ್ಕೆ ಮಾಡಿಕೊಂಡು ಜವಾಬ್ದಾರಿಯುತವಾಗಿ ಅಭ್ಯಾಸ ಮುಂದುವರಿಸಿಕೊಂಡು ಹೋದರು. ಆ ಸಮಯದಲ್ಲಿ ಕೇರಳದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಪರೀಕ್ಷೆಗಳು ನಡೆಯುತ್ತಿದ್ದು, ಸಂಗೀತ ಪರಿಕರಗಳ ಅಭ್ಯಾಸ ಮಾಡಿದರೂ ಅದಕ್ಕೆ ಪರೀಕ್ಷೆಗಳು ಇರುತ್ತಿರಲಿಲ್ಲ. ಅಲ್ಲಿ ನಡೆಯುವ ‘ಯೂಥ್ ಫೆಸ್ಟಿವಲ್’ ನ ಸ್ಪರ್ಧೆಯಲ್ಲಿ ಭಾಗವಹಿಸಿ, ಸ್ಪರ್ಧಿಸಿ ಬಹುಮಾನ ಗೆಲ್ಲುವುದೆಂದರೆ ಅದು ಬಹಳ ವಿಶೇಷ ಹಾಗೂ ಗೌರವ. 6, 7, 8ನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ಶ್ರೀಲತಾ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ 90 ಮಂದಿಗೂ ಹೆಚ್ಚು ಸ್ಪರ್ಧಾಳುಗಳಿರುವ ಸ್ಪರ್ಧೆಯಲ್ಲಿ ಸ್ಪರ್ಧಿಸಿ ‘ಎ’ ಶ್ರೇಣಿಯೊಂದಿಗೆ ಬಹುಮಾನವನ್ನು ಪಡೆದುಕೊಂಡಿರುವ ಅನನ್ಯ ಪ್ರತಿಭೆ. ಇವರ ತಬಲಾ ವಾದನದ ವೈಖರಿಯನ್ನು ಕಂಡು ಕೇರಳದ ಆಕಾಶವಾಣಿಯ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಇವರು ಕಾರ್ಯಕ್ರಮವನ್ನೂ ನೀಡಿದ್ದಾರೆ. ತಂದೆ ತಾಯಿಯ ಪ್ರೋತ್ಸಾಹ ಮತ್ತು ಶ್ರೀಲತಾರ ಪರಿಶ್ರಮ, ಆಸಕ್ತಿ ಅವರು ಈ ಕ್ಷೇತ್ರದಲ್ಲಿ ಮುಂದುವರಿಯುವಂತೆ ಮಾಡಿತು. ತಂದೆಯಿಂದ ತಬಲಾ ತರಬೇತಿ ಪಡೆದ ಇವರು ಮುಂದೆ ತಂದೆಯ ಗುರು ಗೌರಾಂಗ್ ಕೋಡಿಕಲ್ ಬೆಂಗಳೂರು ಇವರಿಂದ ಹೆಚ್ಚಿನ ತರಬೇತಿ ಪಡೆದುಕೊಂಡರು.
ತಂದೆ ಹೆಚ್ಚಾಗಿ ಬೆಂಗಳೂರಿಗೆ ಹೋಗಿ ಬರುವುದಿತ್ತು. ತಬಲಾ ವಾದನ ಅಭ್ಯಾಸಕ್ಕಾಗಿ ಶ್ರೀಲತಾ ತಂದೆ ಜೊತೆ ಗುರುಗಳ ಬಳಿ ಹೋಗುತ್ತಿದ್ದರು. 30 ವರ್ಷಗಳಿಂದ ತಬಲಾ ವಾದನವನ್ನು ವೃತ್ತಿಯನ್ನಾಗಿಸಿಕೊಂಡಿರುವ ಶ್ರೀಲತಾ ಮನೆಯಲ್ಲಿ ತಬಲಾ ತರಗತಿ ನಡೆಸುವ ಜೊತೆಗೆ ಅನೇಕ ಶಾಲೆಗಳಲ್ಲಿಯೂ ಮಕ್ಕಳಿಗೆ ತಬಲಾ ವಾದನ ತರಗತಿಗಳನ್ನು ನಡೆಸುತ್ತಿದ್ದಾರೆ. ಪತಿಯ ಜವಾಬ್ದಾರಿಯುತ ಪ್ರೋತ್ಸಾಹ ಇರುವುದರಿಂದಲೇ ತಾನು ಈ ಕ್ಷೇತ್ರದಲ್ಲಿ ಅನಾಯಾಸವಾಗಿ ಮುಂದುವರಿಯಲು ಸಾಧ್ಯವಾಗಿದೆ. “ತೃಣಮಪಿ ನ ಚಲತಿ ತೇನವಿನ” ಎಂಬಂತೆ ಪತಿ ದೇವದತ್ತ ಪ್ರಭು ಅವರ ಸಹಕಾರದ ಹೊರತು ನಾನೊಬ್ಬ ತಬಲಾ ಕಲಾವಿದೆಯಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ವೈವಾಹಿಕ ಜೀವನದಲ್ಲಿ ಒಂದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರು ವಿರಳ.
ಶ್ರೀಲತಾ ಹೇಳುವಂತೆ ಹೊಂದಾಣಿಕೆ, ಸಹಕಾರ ಮನೋಭಾವ ಎಲ್ಲವೂ ಅವರ ಪತಿಯಲ್ಲಿದೆ, ಅವರೇ ತನ್ನ ಸ್ಪೂರ್ತಿ. ವಿದೇಶೀ ಸರ್ಕಾರದ ಕಾರ್ಯಕ್ರಮಕ್ಕೆ ವಿದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿ “ಸಿಕ್ಕಿದ ಅವಕಾಶ ಬಿಡಬಾರದು. ಅವಕಾಶ ಮತ್ತೊಮ್ಮೆ ದೊರೆಯುವುದಿಲ್ಲ. ಹೋಗಿ ನಿಶ್ಚಿಂತೆಯಾಗಿ ಕಾರ್ಯಕ್ರಮ ನೀಡಿ ಬಾ” ಎಂದು ಧೈರ್ಯತುಂಬಿ ಕಳಿಸಿದವರು ಪತಿ ದೇವದತ್ತ ಪ್ರಭು. ಮಕ್ಕಳು, ಮನೆ ಕೆಲಸ, ತಬಲಾ ತರಗತಿಗಳ ಒತ್ತಡ ಇದರಿಂದಾಗಿ ತಬಲಾ ಪರೀಕ್ಷೆಗೆ ಓದಿನೊಂದಿಗೆ ತಯಾರಿ ನಡೆಸುವುದು ಬಹಳಷ್ಟು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಓದುವ ಕಡೆಗೆ ಗಮನ ಕೊಡು ಎಂದು ಹೇಳಿ ಊಟ, ಉಪಾಹಾರಕ್ಕೆ ಬೇರೆ ವ್ಯವಸ್ಥೆ ಮಾಡಿ ಸಹಕರಿಸಿದವರು ತನ್ನ ಪತಿ ಎಂದು ಭಾವುಕರಾಗಿ ನುಡಿಯುತ್ತಾ ಪತಿಯ ಸಹಕಾರವನ್ನು ಸ್ಮರಿಸುತ್ತಾರೆ ಶ್ರೀಲತಾ. ಪ್ರಸ್ತುತ ಐಟಿ ಕಂಪನಿಯ ಉದ್ಯೋಗಿಯಾಗಿರುವ ಇವರ ಪುತ್ರ ಶ್ರೀದತ್ತ ಪ್ರಭು ಮೂರು ವರ್ಷದ ಎಳವೆಯಲ್ಲಿಯೇ ತಬಲಾದ ಮೇಲೆ ತಾಳಬದ್ಧವಾಗಿ ಕೈಯಾಡಿಸಲಾರಂಭಿಸಿದ್ದ. ಈಗ ಪ್ರೌಢ ತಬಲಾ ವಾದಕನಾಗಿರುವುದು ಹೆಮ್ಮೆಯ ವಿಚಾರ. ದ್ವಿತೀಯ ಪಿಯುಸಿಯಲ್ಲಿ ಓದುವ ಮಗಳು ಉತ್ತಮ ತಬಲಾ ವಾದಕಿ. ಒಟ್ಟಿನಲ್ಲಿ ಇದು ಕಲಾಮಯ ಸಂಸಾರ.
ಕಾರ್ಯಕ್ರಮದಲ್ಲಿ ತಬಲಾ ಪಕ್ಕವಾದ್ಯಕ್ಕೆ ಹೋಗುವ ಶ್ರೀಲತಾ ಏಕವ್ಯಕ್ತಿ ವಾದನವನ್ನು ಬಹಳ ಇಷ್ಟ ಪಡುತ್ತಾರೆ. ಮಂಗಳೂರಿಗಿಂತಲೂ ಬೆಂಗಳೂರಿನಲ್ಲಿ ಹೆಚ್ಚು ಕಾರ್ಯಕ್ರಮ ನೀಡಿದ ಕಲಾವಿದೆ ಇವರು. ಮುಂಬೈಯ ಒಂದು ಕಾರ್ಯಕ್ರಮದಲ್ಲಿ ಪತಿ, ಪತ್ನಿ ಇಬ್ಬರು ಜೊತೆಯಾಗಿ ತಬಲಾ ವಾದನದ ಕಾರ್ಯಕ್ರಮ ನೀಡಿದ್ದೂ ಇದೆ. ಚಿಕ್ಕಮಗಳೂರಿನ ಒಂದು ಕಾರ್ಯಕ್ರಮದಲ್ಲಿ ಇವರ ಪೂರ್ಣ ಕುಟುಂಬ ತಬಲಾ ವಾದನ ನಡೆಸುವ ಒಂದು ಅಪೂರ್ವ ಸಂದರ್ಭ ಒದಗಿ ಬಂದಿದ್ದು, ಅಲ್ಲಿ ಯಶಸ್ವೀ ಕಾರ್ಯಕ್ರಮ ನೀಡಿದ ಕಲಾ ಕುಟುಂಬ ಇವರದ್ದು. ಶ್ರೀಲತಾ ಇವರ ಪ್ರತಿಭೆ ತವರಿನಲ್ಲಿ ಅರಳಿದರೂ, ಅದನ್ನು ಪ್ರೋತ್ಸಾಹದ ನೀರೆರೆದು ಪೋಷಿಸಿದವರು ಪತಿ ದೇವದತ್ತ ಪ್ರಭು. ಈ ಕ್ಷೇತ್ರದಲ್ಲಿ ಹೆಚ್ಚು ಕಾರ್ಯಸಾಧನೆ ಮಾಡಿ ಕಲಾವಿದೆ ಎಂದೆನಿಸಿಕೊಳ್ಳಲು ಕಾಸರಗೋಡು ಚಿನ್ನಾ, ಖ್ಯಾತ ವಯೋಲಿನ್ ವಾದಕ ಜಿ.ಜಿ. ಲಕ್ಷ್ಮಣ ಪ್ರಭು ಇವರ ಸಹಕಾರ ಅನನ್ಯವಾದದು ಎಂದು ಕೃತಜ್ಞತಾ ಭಾವದಿಂದ ಸ್ಮರಿಸಿಕೊಳ್ಳುತ್ತಾರೆ. ತಬಲಾ ತಮ್ಮ ಬಲವನ್ನು ಹೆಚ್ಚಿಸಲಿ, ಭವಿಷ್ಯ ಉಜ್ವಲವಾಗಲಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
– ಅಕ್ಷರೀ