ಕಾಸರಗೋಡು ಜಿಲ್ಲೆಯ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿರುವ ಡಾ. ಸುಭಾಷ್ ಪಟ್ಟಾಜೆ ಅವರ ‘ಕಥನ ಕಾರಣ- ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳ ಅಧ್ಯಯನ’ ಎಂಬ ಅಧ್ಯಯನ ಕೃತಿಯನ್ನು ಓದುವಾಗ ಎಂ. ಗೋವಿಂದ ಪೈಗಳು 1947ರಲ್ಲಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚಿತ್ತಾಯರ ‘ಸ್ವರಾಜ್ಯ ಗೀತಾ ಲೋಕ’ಕ್ಕೆ ಬರೆದ ಮುನ್ನುಡಿಯ ಸಾಲುಗಳು ನೆನಪಾದವು.
“ಇವುಗಳಲ್ಲಿ ಒಂದೊಂದೇನೋ ಕುಂದು ಇರಲೂಬಹುದು. ಇಲ್ಲದಿರಲೂಬಹುದು. ಯಾರಲ್ಲಿ ಇಲ್ಲ? ಎಷ್ಟೆಂದರೂ ಮನುಷ್ಯರು ಸರ್ವಥಾ ಅಪೂರ್ಣ. ಅಥವಾ ಮನುಷ್ಯರೇ ಏಕೆ? ಸೃಷ್ಟಿಯೇ ಅಪರ್ಯಾಪ್ತ. ಪ್ರಕೃತಿಯೇ ವಿಕಲ. ಆದರೆ ಅಂಥಾ ಕೊರತೆಗಳನ್ನು ಮುಟ್ಟಿ ತೋರಿಸುವುದು ಮುನ್ನುಡಿಗಾರನ ಕೆಲಸವಲ್ಲ. ಸರ್ವಥಾ ಅಲ್ಲ. ಅದಕ್ಕೆ ಸಹಸ್ರಾಕ್ಷನಾದ ವಿಮರ್ಶಕನಿದ್ದಾನೆ. ಭಾಪು ಭಾಪು ಎಂದು ತನ್ನ ಲೇಖಕನ ಬೆನ್ನು ಚಪ್ಪರಿಸುವುದು, ಜಾಗು ಜಾಗು ಎಂದು ಆತನನ್ನು ಹುರಿದುಂಬಿಸುವುದು ಇದಷ್ಟೇ ಮುನ್ನುಡಿಗಾರನ ಕೆಲಸ. ಮುನ್ನುಡಿಗಾರನು ಪುರೋಹಿತನಂತೆ ತನ್ನ ಬಳಿಗೆ ಬಂದಾತನ ಪೌರೋಹಿತ್ಯವನ್ನು ನಡೆಸಿ, ಅವನಿಗೆ ಶ್ರೇಯಸ್ಸನ್ನು ಕೋರಿ ಆಶೀರ್ವದಿಸಬೇಕು. ಆತನ ಊಣಿಗಳ ಕಡೆ ನೋಡಬಾರದು. ವಿಮರ್ಶಕನಾದರೋ, ತನ್ನ ಬಳಿಗೆ ಬಂದಾತನಿಗೆ ಚಿಕಿತ್ಸೆಯನ್ನು ನಡೆಸಿ ನಿರೋಗಿಯಾದವನ ಆರೋಗ್ಯವನ್ನು ಕೊಂಡಾಡಬೇಕು. ಸಿಗುಳಬೇಕಾದ್ದಲ್ಲಿ ಸಿಗುಳಲೂ ಬೇಕು. ಆತನನ್ನು ನೋಯಿಸುವಷ್ಟು ನಿರ್ದಯತೆಯಿಂದಲ್ಲ. ಆತನು ಮುಂದೆ ಆರೋಗ್ಯಶಾಲಿಯಾಗಬೇಕೆಂಬ ಮಮತೆಯಿಂದ.”
Alienationಗೆ ಕನ್ನಡದಲ್ಲಿ ಪರಕೀಯತೆ, ಅನಾಥ ಪ್ರಜ್ಞೆ, ಏಕಾಂಗಿತನ, ತಬ್ಬಲಿತನ ಎಂಬ ಪರ್ಯಾಯ ಪದಗಳಿವೆ. ಮಲಯಾಳಂನಲ್ಲಿ ‘ಅನ್ಯತಾ ಬೋಧಂ’, ‘ಅನ್ಯವಲ್ಕರಣಂ’, ಹಿಂದಿಯಲ್ಲಿ ‘ಅಜನಬೀಪನ್’ ಎಂಬ ಪದಗಳು ಬಳಕೆಯಲ್ಲಿವೆ.
ಡಾ. ಸುಭಾಷ್ ಪಟ್ಟಾಜೆ ಅವರು ತಮ್ಮ ಅಧ್ಯಯನಕ್ಕಾಗಿ ಬೇಂದ್ರೆ, ಬಾಗಲೋಡಿ ದೇವರಾಯ, ಯು. ಆರ್. ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಜಿ. ಎಸ್. ಸದಾಶಿವ, ರಾಜಲಕ್ಷ್ಮೀ ಎನ್. ರಾವ್, ವೀಣಾ ಶಾಂತೇಶ್ವರ, ವೈದೇಹಿ, ಅಮರೇಶ ನುಗಡೋಣಿ, ಸಾರಾ ಅಬೂಬಕ್ಕರ್, ಜಯಂತ ಕಾಯ್ಕಿಣಿ, ಎಂ. ವ್ಯಾಸ, ಮಲಯಾಳಂನಲ್ಲಿ ಎಂ. ಟಿ. ವಾಸುದೇವನ್ ನಾಯರ್, ಟಿ. ಪದ್ಮನಾಭನ್, ಒ. ವಿ. ವಿಜಯನ್, ಸಕ್ಕರಿಯ, ಸಿ. ವಿ. ಶ್ರೀರಾಮನ್, ಕಾಕ್ಕನಾಡನ್, ಎಂ. ಮುಕುಂದನ್, ವಿಕ್ಟರ್ ಲೀನಸ್ ಮುಂತಾದ ಮುಖ್ಯ ಕತೆಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘ಕಥನ ಕಾರಣ’ದಲ್ಲಿ ವಿಮರ್ಶಿಸಿರುವ ‘ಮಗುವಿನ ಕರೆ’, ‘ಸೂರ್ಯನ ಕುದುರೆ’, ‘ಕ್ಲಿಪ್ ಜಾಯಿಂಟ್’, ‘ತಬ್ಬಲಿಗಳು’, ‘ಅಪರಿಚಿತರು’, ‘ಕ್ಷಿತಿಜ’, ‘ಆವೇ ಮರೀಯಾ’, ‘ಗಂಡಸರು’, ‘ಅಕ್ಕು’, ‘ಅಭಂಗ ಅಭಿಸಾರ’ ಮುಂತಾದ ಹೆಚ್ಚಿನ ಕತೆಗಳು ಕನ್ನಡ ಓದುಗರಿಗೆ ಪರಿಚಿತವೆನಿಸಿರುವ ಪ್ರಸಿದ್ಧ ಕತೆಗಳಾಗಿವೆ. ‘ಕತ್ತಲ ಆತ್ಮ’ (ಎಂ. ಟಿ. ವಾಸುದೇವನ್ ನಾಯರ್), ‘ಮಕ್ಕನ್ ಸಿಂಗನ ಮರಣ’ (ಟಿ. ಪದ್ಮನಾಭನ್) ‘ಪಾರಗಳ್’, ‘ಅರಿಂಬಾರ’ (ಒ. ವಿ. ವಿಜಯನ್) ‘ಶಿಲುಬೆ ಬೆಟ್ಟದ ಮೇಲೆ’ (ಸಕ್ಕರಿಯ) ಮುಂತಾದ ಹಲವು ಮಲಯಾಳಂ ಕತೆಗಳನ್ನು ಹುಡುಕಿ ಓದಬೇಕು ಎಂಬ ಕುತೂಹಲವನ್ನು ಮೂಡಿಸುವಲ್ಲಿ ಈ ಅಧ್ಯಯನ ಯಶಸ್ವಿಯಾಗಿದೆ.
ಡಾ. ಸುಭಾಷ್ ಪಟ್ಟಾಜೆ ಅವರ ಅಧ್ಯಯನದಲ್ಲಿ ಶ್ರೇಷ್ಠತೆಯ ವ್ಯಸನವಿಲ್ಲ. ಎಂ. ವ್ಯಾಸ, ಬಾಗಲೋಡಿ ದೇವರಾಯ, ಜನಾರ್ದನ ಎರ್ಪಕಟ್ಟೆ, ವಿಕ್ಟರ್ ಲೀನಸ್ ಇತ್ಯಾದಿ ಅಲಕ್ಷಿತ ಕತೆಗಾರರ ಕತೆಗಳು ‘ಕಥನಕಾರಣ’ದ ದೃಷ್ಟಿ ಕೇಂದ್ರದಲ್ಲಿವೆ. ಕರ್ತೃ ನಿಷ್ಠ ವಿಮರ್ಶೆಯ ಮಾರ್ಗದಲ್ಲಿ ಅಧ್ಯಯನ ಮಾಡಿರುವ ಡಾ. ಸುಭಾಷ್ ಪಟ್ಟಾಜೆ ಅವರಿಗೆ ಕತೆಗಾರರ ಆತ್ಮಕತೆಗಳು ಮುಖ್ಯವಾಗುತ್ತವೆ. ಲಂಕೇಶ, ಅನಂತಮೂರ್ತಿ, ಕಮಲಾದಾಸ್ ಅವರ ಆತ್ಮಕತೆಗಳ ಹಲವು ವಿವರಗಳು ‘ಕಥನ ಕಾರಣ’ ದಲ್ಲಿ ಉಲ್ಲೇಖಗೊಂಡಿವೆ.ಕೆ. ಸದಾಶಿವ, ಜಿ. ಎಸ್. ಸದಾಶಿವ, ಪಿ. ಲಂಕೇಶ್, ಅವರ ಕತೆಗಳಲ್ಲಿ ಕಂಡುಬರುವ ಪರಕೀಯ ಪ್ರಜ್ಞೆಯ ನೆಲೆಗಳೊಂದಿಗೆ ಸಾಮ್ಯವನ್ನು ಹೊಂದಿರುವ ಎಂ. ಟಿ. ವಾಸುದೇವನ್ ನಾಯರ್ ಮತ್ತು ಕಾಕ್ಕನಾಡನ್ ಅವರ ಕತೆಗಳು ಪ್ರಾದೇಶಿಕವಾಗಿ ಭಿನ್ನತೆಯನ್ನು ಪ್ರಕಟಿಸುತ್ತಿದ್ದರೂ ಅಂತರ್ಯದಲ್ಲಿ ಒಂದೇ ಮನೋಧರ್ಮವನ್ನು ಹೊಂದಿದ ಬಗೆಯನ್ನು ಕಾಣಬಹುದು. ಕನ್ನಡ ಬರಹಗಾರರಾದ ಅನಂತಮೂರ್ತಿ, ಶಾಂತಿನಾಥ ದೇಸಾಯಿ ಅವರ ಹೆಚ್ಚಿನ ಕತೆಗಳು ಹೊರದೇಶದಲ್ಲಿ ಇದ್ದುಕೊಂಡು ಬದುಕಿಗೆ ಅನ್ಯವಾಗುವ ಜೀವಗಳ ಕುರಿತು ಚರ್ಚಿಸುವ ಮೂಲಕ ಪೂರ್ವ ಪಶ್ಚಿಮ ದೇಶಗಳ ನಡುವಿನ ಸಾಂಸ್ಕೃತಿಕ ವೈರುಧ್ಯಗಳನ್ನು ದಾಖಲಿಸಿದರೆ, ಎಂ. ಟಿ. ವಾಸುದೇವನ್ ನಾಯರ್, ಟಿ. ಪದ್ಮನಾಭನ್ ಮತ್ತು ಕಾಕ್ಕನಾಡನ್ ಮುಂತಾದವರ ಮಲಯಾಳಂ ಕತೆಗಳು ಸಾಂಸ್ಕೃತಿಕ ನೆಲೆಯ ಭಿತ್ತಿಯಲ್ಲಿ ತಮ್ಮ ನೆಲದಲ್ಲೇ ಅನ್ಯವಾಗುವ ವ್ಯಕ್ತಿಗಳ ಸಾಮಾಜಿಕ ಸಂಘರ್ಷವನ್ನು ವ್ಯಕ್ತಪಡಿಸುತ್ತವೆ.
‘ಕಥನಕಾರಣ’ದಲ್ಲಿ ತೌಲನಿಕ ಅಧ್ಯಯನ ಮತ್ತು ವಿಮರ್ಶೆಯ ಒಳನೋಟಗಳು ಕಾಣಿಸುತ್ತವೆ. ಅರಿವಿನ ದಾಹ ಮತ್ತು ಸಾಮಾಜಿಕ ಕಾಳಜಿಗಳು ಗೋಚರಿಸುತ್ತವೆ. ಕೇರಳದ ಸಂಕೀರ್ಣ ಜಾತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಾಯರ್ ಸಮುದಾಯದವರು ಅನುಭವಿಸಿದ ಸಾಮಾಜಿಕ ಸಮಸ್ಯೆಗಳನ್ನು ಡಾ. ಸುಭಾಷ್ ಪಟ್ಟಾಜೆ ಅವರು ಚೆನ್ನಾಗಿ ವಿವರಿಸಿದ್ದಾರೆ. ಕರ್ನಾಟಕದ ನೆರೆ ರಾಜ್ಯವಾದ ಕೇರಳದಲ್ಲಿ ಕರ್ನಾಟಕಕ್ಕಿಂತ ಭಿನ್ನವಾದ, ಸಂಕೀರ್ಣವಾದ ಜಾತಿ ವ್ಯವಸ್ಥೆ ಇದೆ.
ಮಲಯಾಳಂ ಭಾಷೆಯ ‘ಮೋಡಗಳ ನೆರಳಲ್ಲಿ’ ಎಂಬ ಕತೆಯ ಹಿನ್ನೆಲೆಯು ದಾರುಣವಾಗಿದೆ. ವಿಕ್ಟರ್ ಲೀನಸ್ ಅವರ ಈ ಕತೆ 1982ರಲ್ಲಿ ಪ್ರಕಟವಾಯಿತು. ಮನುಷ್ಯನ ವಿಭ್ರಾಂತ ಪರಿಸ್ಥಿತಿಯನ್ನು ಅನಾವರಣಗೊಳಿಸುವ ಈ ಕತೆಯನ್ನು ಬರೆದ ಕೆಲವೇ ದಿನಗಳಲ್ಲಿ ಲೇಖಕರು ಆತ್ಮಹತ್ಯೆ ಮಾಡಿಕೊಂಡರು. ತನಿಖೆ ನಡೆಸಿದ ಪೋಲೀಸರು ‘ಕತೆ, ಆತ್ಮಹತ್ಯೆಗೆ ಮುನ್ನ ಬರೆದ ಪತ್ರವೇ ಆಗಿದೆ’ ಎಂಬ ತೀರ್ಮಾನಕ್ಕೆ ಬಂದರು.
‘ಕಥನ ಕಾರಣ’ಕ್ಕೆ ಪೂರಕವಾಗಿ ಡಾ. ಸುಭಾಷ್ ಪಟ್ಟಾಜೆ ಅವರು ‘ಪರಕೀಯ ಪ್ರಜ್ಞೆಯ ಮಲಯಾಳಂ ಕತೆಗಳು’ ಎಂಬ ಅನುವಾದಿತ ಕತೆಗಳ ಸಂಕಲವನ್ನು ಸಂಪಾದಿಸಬಹುದು.
ಈ ಕೃತಿಯನ್ನು ಓದುತ್ತಿದ್ದಂತೆ ನನಗೆ ನನ್ನ ಸಹಪಾಠಿ, ಗೆಳೆಯ ಡಾ. ಗುಂಡ್ಮಿ ಭಾಸ್ಕರ ಮಯ್ಯರ ‘ಹಿಂದಿ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ’ ಎಂಬ ಮಹತ್ವದ ಸಂಶೋಧನ ಗ್ರಂಥದ ನೆನಪಾಯಿತು. ಕೇಂದ್ರ ಸಾಹಿತ್ಯದ ಪ್ರಶಸ್ತಿ ಪಡೆದಿರುವ ಈ ಗ್ರಂಥದ ಕನ್ನಡ ಅನುವಾದ ಆಗಬೇಕಿದೆ.
ಕಾಳಿದಾಸ ತನ್ನ ‘ರಘುವಂಶ’ದಲ್ಲಿ “ಮಹರ್ಷಿ ವಾಲ್ಮೀಕಿ ಮೊದಲಾದ ಪೂರ್ವ ಸೂರಿಗಳು ರಾಮಾಯಣ ಎನ್ನುವ ವಜ್ರದಲ್ಲಿ ಈಗಾಗಲೇ ರಂಧ್ರವನ್ನು ನಿರ್ಮಿಸಿದ್ದಾರೆ. ನನ್ನದೇನಿದ್ದರೂ ದಾರ ಪೋಣಿಸುವ ಕೆಲಸ ಮಾತ್ರ” ಎಂದಿದ್ದಾನೆ. ‘ಕಥನ ಕಾರಣ’ದಲ್ಲಿ ಕನ್ನಡ ಮಲಯಾಳಂ ಕತೆಗಳನ್ನು ಪರಕೀಯ ಪ್ರಜ್ಞೆಯ ದಾರದಿಂದ ಪೋಣಿಸಿ, ಅವುಗಳ ನಡುವಿನ ಸೂಕ್ಷ್ಮಭೇದವನ್ನು ಗುರುತಿಸುವ ಪ್ರಯತ್ನವಿದೆ. ಡಾ. ಸುಭಾಷ್ ಪಟ್ಟಾಜೆ ಅವರ ವಿಮರ್ಶೆಯಲ್ಲಿ ಪಾರಿಭಾಷಿಕ ಶಬ್ದಗಳ ಆಡಂಬರವಿಲ್ಲ. ಇದು ಸಾಮಾನ್ಯ ಓದುಗರಿಗೂ ರುಚಿಸುವಂಥ ಸಂಶೋಧನ ಗ್ರಂಥ. “ಪರಕೀಯ ಪ್ರಜ್ಞೆ ಮಧ್ಯಮ ವರ್ಗದ ಬುದ್ಧಿಜೀವಿಗಳ ಆರಾಮಕುರ್ಚಿಯ ಸಮಸ್ಯೆ” ಎಂಬ ಟೀಕೆಯನ್ನು ‘ಕಥನ ಕಾರಣ’ ಅನೇಕ ದೃಷ್ಟಾಂತಗಳೊಂದಿಗೆ ನಿರಾಕರಿಸುತ್ತದೆ.
ಕೆ. ಎಸ್. ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಕವನದ “ನಾನು ನಾನೇ ಅಗಿ, ಈ ನೆಲದಲಿ ಬೇರೊತ್ತಿದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ, ಅದು ಬಹಳ ಕಷ್ಟದ ಕೆಲಸ” ಎಂಬ ಸಾಲುಗಳು ನೆನಪಾಗುತ್ತವೆ. “ಪರಕೀಯತೆಯು ಒಂದು ರೋಗಿಷ್ಠ ವಿಕೃತಿ. ಸಾಮಾಜಿಕ ಬದಲಾವಣೆಯಿಂದ ಮಾತ್ರವೇ ಅದರ ನಿವಾರಣೆ ಸಾಧ್ಯ.” ಎಂದು ಡಿ. ಎಚ್. ಲಾರೆನ್ಸ್ ಬರೆದಿದ್ದ. ಅದರೆ ಸಮಕಾಲೀನ ಜಾಗತಿಕ ವಿದ್ಯಮಾನಗಳಲ್ಲಿ ಮುಂದಣ ಹೆಜ್ಜೆಗಳಿಗಿಂತ ಹಿಂದಣ ಹೆಜ್ಜೆಗಳು ಮುಖ್ಯವಾಗುತ್ತವೆ. ಸೇಡಿಯಾಪು ಚಿತ್ರಿಸಿದ ‘ನಾಗರಬೆತ್ತ’ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಬೆತ್ತಕ್ಕೆ ಪರಕೀಯತೆಯ ಚಿಂತೆ ಇಲ್ಲ.
ಡಾ. ಸುಭಾಷ್ ಪಟ್ಟಾಜೆ ಅವರಿಗೆ ಅಭಿನಂದನೆಗಳು; ಶುಭಾಶಯಗಳು.
- ಮುರಳೀಧರ ಉಪಾಧ್ಯ ಹಿರಿಯಡ್ಕ,
ಹಿರಿಯ ವಿಮರ್ಶಕರು,
ದೊಡ್ಡನಗುಡ್ಡೆ, ಉಡುಪಿ